ಕನ್ನಡಪ್ರಭ ವಾರ್ತೆ ಉಡುಪಿ
ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಾರದೇ ಪಕ್ಷದ ಕಾರ್ಯಕರ್ತರಿಂದಲೇ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇದೀಗ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಕೋಟ್ಯಂತರ ರು. ಹಾನಿ, ನೂರಾರು ಕುಟುಂಬಗಳ ಜೀವನ ಅಸ್ತವ್ಯಸ್ತವಾಗಿದ್ದರೂ ಬಾರದೇ ಇರುವುದು ಮತ್ತೆ ವಿವಾದಕ್ಕೆ ಕಾರಣವಾಗಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯವಾಗಿ ಬಿಜೆಪಿ ಕಾರ್ಯಕರ್ತರು ಸಚಿವೆಯನ್ನು ಯದ್ವಾತದ್ವ ಟೀಕಿಸುತ್ತಿದ್ದಾರೆ. ಉಡುಪಿ ಜಿಲ್ಲೆಯನ್ನು ಸಚಿವೆ ಮರೆತಿದ್ದಾರೆ. ಭಾರಿ ಮಳೆಗೆ ಜನ ಸಂಕಷ್ಟಪಡುತ್ತಿದ್ದರೂ ಸುದ್ದಿಯೇ ಇಲ್ಲ, ಮಳೆ ಪೀಡಿತ ಪ್ರದೇಶಕ್ಕೂ ಭೇಟಿ ನೀಡಿಲ್ಲ, ಅಧಿಕಾರಿಗಳ ಜೊತೆಗೆ ಸಭೆ ನಡೆಸುವುದಕ್ಕೂ ಬಂದಿಲ್ಲ. ಮಳೆಯಿಂದ ಮಹಿಳೆಯರು, ಶಾಲಾ ಮಕ್ಕಳು ತೊಂದರೆಗೆ ಸಿಲುಕಿದ್ದಾರೆ. ಆದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಪಂದಿಸುತ್ತಿಲ್ಲ ಎಂದೆಲ್ಲ ಟೀಕಿಸಲಾಗುತ್ತಿದೆ.
* ಉಸ್ತುವಾರಿ ಸಚಿವರನ್ನು ಬದಲಾಯಿಸಿ: ಶ್ರೀನಿಧಿ ಹೆಗ್ಡೆಉಡುಪಿ ಜಿಲ್ಲೆಯಲ್ಲಿ ವಾರದಿಂದ ಮಳೆ ದೊಡ್ಡ ಮಟ್ಟದಲ್ಲಿ ಹಾನಿಯನ್ನುಂಟು ಮಾಡಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಇನ್ನೂ ಜಿಲ್ಲೆಯ ಜನರ ಸಮಸ್ಯೆಗೆ ಪರಿಹಾರ ಅಥವಾ ಕನಿಷ್ಟ ಪಕ್ಷ ಜನತೆಗೆ ಸಾಂತ್ವನ ಹೇಳುವುದಕ್ಕೂ ಬಂದಿಲ್ಲ. ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾದಾಗಲೂ ಉಸ್ತುವಾರಿ ಸಚಿವರು ಬಂದು ಕಷ್ಟ ಕೇಳಲಿಲ್ಲ. ಮಳೆಯಿಂದ ಜಿಲ್ಲೆಯಲ್ಲಿ ಶಾಲೆಗಳಿಗೆ 3-4 ದಿನ ರಜೆ ಘೋಷಣೆ ಆಗಿದೆ, ಉಸ್ತುವಾರಿ ಸಚಿವರು ಕೂಡ ರಜೆಯಲ್ಲಿ ಯಾವ ಊರಿಗೆ ಹೋಗಿದ್ದಾರೆ ಎಂದು ಕೇಳುವಂತಾಗಿದೆ. ಇಂತಹ ಉಸ್ತುವಾರಿ ಸಚಿವರನ್ನು ಬದಲಾಯಿಸಿ ಎಂದು ಎಂದು ಬಿಜೆಪಿ ಮಾಧ್ಯಮ ವಕ್ತಾರ ಶ್ರಿನಿಧಿ ಹೆಗ್ಡೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
* ಸಚಿವರನ್ನು ತರಾಟೆಗೆ ತೆಗೆದುಕೊಳ್ಳಿ: ಉದಯಕುಮಾರ್ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾಣೆಯಾಗಿದ್ದಾರೆ. ಜಿಲ್ಲೆಯಲ್ಲಿ ಅಪಾರ ಮಳೆ ಹಾನಿಯಾಗಿದೆ. ಕಡಲುಕೊರೆತ ಸಂಭವಿಸುತ್ತಿದೆ. ಈ ವಿಕೋಪ ತಡೆಯಲು ಅನುದಾನ ತರಬೇಕಾಗಿದ್ದ ಸಚಿವೆಯೇ ಕಾಣೆಯಾಗಿದ್ದಾರೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಟೀಕಿಸಿದ್ದಾರೆ.
ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಕುಳಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ, ಅದರಿಂದೇನೂ ಆಗುವುದಿಲ್ಲ. ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕಾಗಿದ್ದ ಸಚಿವೆಯೇ ಜಿಲ್ಲೆಗ ಬಂದಿಲ್ಲ. ಮೊದಲು ಅವರನ್ನು ತರಾಟೆಗೆ ತೆಗೆದುಕೊಂಡು ಉಡುಪಿಗೆ ಕಳುಹಿಸಿ ಎಂದವರು ಹೇಳಿದ್ದಾರೆ.