ಲಕ್ಷ್ಮೇಶ್ವರ: ಶ್ರಾವಣ ಮಾಸದಲ್ಲಿ ಪ್ರಕೃತಿಯು ಮಧುವಣಗಿತ್ತೆಯಂತೆ ಸಂಭ್ರಮಿಸುತ್ತದೆ. ಸಾಲು ಹಬ್ಬಗಳ ಸಮ್ಮಿಶ್ರಣವೇ ಶ್ರಾವಣ, ಶ್ರಾವಣ ಮಾಸದಲ್ಲಿ ಪ್ರಕೃತಿಯು ಕೂಡ ತನ್ನದೇ ರೀತಿಯಲ್ಲಿ ಹಾಡಿಕೊಂಡು ಸಂಭ್ರಮಿಸುತ್ತದೆ ಎಂದು ಪಟ್ಟಣದ ವೀರಗಂಗಾಧರ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಿ.ಸಿ. ಪಟ್ಟೇದ ಹೇಳಿದರು.
ಶನಿವಾರ ಲಕ್ಷ್ಮೇಶ್ವರ ತಾಲೂಕು ಕಸಾಪ ಹಮ್ಮಿಕೊಂಡ ಮಾಸದ ಮಾತು ಕಾರ್ಯಕ್ರಮ ಸರಣಿಯ ೧೫ನೇ ಸಂಚಿಕೆ ಶ್ರಾವಣ ಗಾನಯಾನ ಉದ್ಘಾಟಿಸಿ ಮಾತನಾಡಿದರು.ಶ್ರಾವಣ ಮಾಸದಲ್ಲಿ ಪ್ರಕೃತಿಯು ಹಸಿರಿನಿಂದ ಕಂಗೊಳಿಸುತ್ತ ಮುದಗೊಳಿಸುತ್ತದೆ. ಶ್ರಾವಣ ಮಾಸದಲ್ಲಿ ನಾಡಿನ ಅನುಭಾವಿಗಳ, ಶರಣ, ಸಂತರ ಅನುಭಾವದ ನುಡಿ ಕೇಳುವ ಮೂಲಕ ಅವರುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮಾಸವಾಗಿದೆ. ಶ್ರಾವಣ ಮಾಸದಲ್ಲಿ ಪ್ರಕೃತಿಯು ಸುಂದರತೆಯೇ ಮೈವೆತ್ತಂತೆ ಭಾಸವಾಗುವ ಮೂಲಕ ರಸಿಕರಿಗೆ ರಸದೌತಣ ಬಡಿಸುವ ನಿತ್ಯ ಸೌಂದರ್ಯದ ಖನಿಯಾಗಿದ್ದಾಳೆ ಎಂದು ಹೇಳಿದರು.
ನಿವೃತ್ತ ಮುಖ್ಯೋಪಾಧ್ಯಾಯ, ಸಾಹಿತಿ ರಮೇಶ ನವಲೆ ಮಾತನಾಡಿ, ಶ್ರಾವಣ ಮಾಸವನ್ನು ದೇಶದಾದ್ಯಂತ ಬೇರೆ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ. ಶ್ರಾವಣವು ಮಾಸಗಳ ರಾಜನೆಂದೇ ಪರಿಗಣಿಸಲಾಗಿದೆ. ಈ ನೆಲದ ಮಣ್ಣಿನ ಮಗ ತನ್ನ ಬದುಕಿನ ಹೊಲವನ್ನು ಮತ್ತಷ್ಟು ಅಂದಚಂದಗೊಳಿಸಲು ಶ್ರಾವಣ ಮಾಸದಲ್ಲಿ ಪುರಾಣ ಪುಣ್ಯ ಕಥೆಗಳು, ಸಂದೇಶ ಬೀರುವ ಗೀತೆಗಳನ್ನು ಶ್ರವಣ ಮಾಡುವ ಪದ್ಧತಿ ನಮ್ಮ ಹಿರಿಯರು ಹಾಕಿಕೊಟ್ಟ ಶ್ರೀಮಂತ ಸಂಪ್ರದಾಯವಾಗಿದೆ ಎಂದರು.ಹಿರಿಯ ಸಾಹಿತಿ ಪೂರ್ಣಾಜಿ ಕರಾಟೆ ಮಾತನಾಡಿದರು. ಶ್ರಾವಣದ ಸವಿಗಾನ ಕಾರ್ಯಕ್ರಮದಲ್ಲಿ ಪಟ್ಟಣದ ಯುನಿಕ್ ಶಾಲೆಯ ಪಂಚಮಿ ಅಂಬಿಗೇರ ಹಾಗೂ ಸಂಗಡಿಗರು, ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮತ್ತು ಸಂತೋಷ ಗುಡಗೇರಿ ಶ್ರಾವಣದ ಕುರಿತು ವಿವಿಧ ಗೀತ ಗಾಯನ ಹಾಡಿ ಕೇಳುಗರನ್ನು ಮಂತ್ರಮುಗ್ಧಗೊಳಿಸಿದರು.
ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಡಿ. ಲಮಾಣಿ, ವಿಶ್ರಾಂತ ಶಿಕ್ಷಕ ಎನ್.ಆರ್. ಸಾತಪುತೆ. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಈಳಿಗೇರ, ಬಿ.ಬಿ. ಹುಬ್ಬಳ್ಳಿ, ವಿಶ್ವನಾಥ ಕರಾಟೆ, ಅಂದಾನಪ್ಪ ವಾಲಿಶೆಟ್ರ ಇದ್ದರು.ಸಿ.ಆರ್.ಪಿ ಉಮೇಶ್ ನೇಕಾರ ಸ್ವಾಗತಿಸಿದರು. ತಾಲೂಕು ಕಸಾಪ ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ನಿರೂಪಿಸಿದರು. ಶಿಕ್ಷಕ ಎ.ಎಂ. ಅಕ್ಕಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಸಲಹಾ ಸಮಿತಿಯ ಈರಣ್ಣ ಗಾಣಿಗೇರ, ಎಸ್.ಬಿ. ಅಣ್ಣಿಗೇರಿ, ಶಿಕ್ಷಕ ಪಿ.ಎಸ್. ಪುರಾಣದ, ಅರ್.ಐ. ಹಬಸಿ, ಎ.ಎಂ.ಕುಂಬಾರ, ಸಿ.ಎಫ್. ಪಾಟೀಲ, ಆರ್.ಟಿ. ಚವ್ಹಾಣ, ಆರ್.ಆರ್.ನಾಯ್ಕರ ಇದ್ದರು.