ಬಾಣಂತಿಯರ ಸಾವು ಪ್ರಕರಣ ಸರ್ಕಾರಿ ಪ್ರಾಯೋಜಿತ ಕೊಲೆ

KannadaprabhaNewsNetwork | Published : Dec 8, 2024 1:15 AM

ಸಾರಾಂಶ

ಬಾಣಂತಿಯರ ಸಾವು ಪ್ರಕರಣ ಸರ್ಕಾರಿ ಪ್ರಾಯೋಜಿತ ಕೊಲೆಯಾಗಿದೆ ಎಂದು ಬಿಜೆಪಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸಿ. ಮಂಜುಳಾ ಆರೋಪಿಸಿದ್ದಾರೆ.

ಬಳ್ಳಾರಿ: ಜಿಲ್ಲಾಸ್ಪತ್ರೆಯ ಬಾಣಂತಿಯರ ಸಾವು ಪ್ರಕರಣ ಸರ್ಕಾರಿ ಪ್ರಾಯೋಜಿತ ಕೊಲೆಯಾಗಿದೆ ಎಂದು ಬಿಜೆಪಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸಿ. ಮಂಜುಳಾ ಆರೋಪಿಸಿದ್ದಾರೆ.

ಬಾಣಂತಿಯರ ಸಾವು ಪ್ರಕರಣ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಮಹಿಳಾ ಘಟಕದ ನಿಯೋಗದ ನೇತೃತ್ವ ವಹಿಸಿದ್ದ ಮಂಜುಳಾ ಅವರು, ಆರೋಗ್ಯ ಇಲಾಖೆಯ ಬಗ್ಗೆ ರಾಜ್ಯ ಸರ್ಕಾರದ ನಿಷ್ಕಾಳಜಿಯನ್ನು ತರಾಟೆಗೆ ತೆಗೆದುಕೊಂಡರು.

ಆರೋಗ್ಯ ಸಚಿವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಕಂಡು ಬರುತ್ತಿದೆ. ಈ ಜಿಲ್ಲೆಯ ಆರೋಗ್ಯ ವಲಯವನ್ನು ನಿಭಾಯಿಸುವಲ್ಲಿ ಆರೋಗ್ಯ ಹಾಗೂ ಜಿಲ್ಲಾ ಮಂತ್ರಿಗಳು ವಿಫಲರಾಗಿದ್ದಾರೆ. ಹೀಗಾಗಿಯೇ ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವುಗಳು ಸಂಭವಿಸಿವೆ ಎಂದು ದೂರಿದರು.

ರಾಜ್ಯ ಸರ್ಕಾರದ ಆಡಳಿತದಲ್ಲಿ ಬಿಗಿಯಿಲ್ಲ. ಆಯಾ ಇಲಾಖೆಗಳ ಮೇಲುಸ್ತುವಾರಿ ನಡೆಯುತ್ತಿಲ್ಲ. ಹೀಗಾಗಿಯೇ ಆರೋಗ್ಯ ಕ್ಷೇತ್ರ ಸಂಪೂರ್ಣ ಹದಗೆಟ್ಟಿದೆ. ಬಾಣಂತಿಯರ ಸಾವು ಪ್ರಕರಣಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರವೇ ಹೊಣೆಯಾಗಿದೆ. ಮೃತ ಕುಟುಂಬಗಳಿಗೆ ಎರಡು ಲಕ್ಷ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಬಾಣಂತಿಯರ ಸಾವಿನಿಂದ ಶಿಶುಗಳು ಅನಾಥವಾಗಿವೆ. ಶಿಶುಗಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ₹25ರಿಂದ ₹50 ಲಕ್ಷ ಪರಿಹಾರ ನೀಡಬೇಕು. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯರು ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದು ಕೂಡಲೇ ಆರೋಗ್ಯ ಕ್ಷೇತ್ರ ಸುಧಾರಣೆಗೆ ಸರ್ಕಾರ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಜಿಲ್ಲಾಸ್ಪತ್ರೆಯ ಬಾಣಂತಿಯರ ವಾರ್ಡ್‌ಗಳಿಗೆ ತೆರಳಿದ ಸಿ. ಮಂಜುಳಾ ಅವರ ನೇತೃತ್ವದ ನಿಯೋಗ ಸ್ಥಳೀಯವಾಗಿ ಸಿಗುತ್ತಿರುವ ವೈದ್ಯಕೀಯ ಸೇವೆ ಕುರಿತು ವಿಚಾರಿಸಿತು. ಔಷಧ ಉಗ್ರಾಣ, ಐಸಿಯುಗಳಿಗೆ ಭೇಟಿ ನೀಡಿ, ವೈದ್ಯಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿತು. ಮಾಜಿ ಶಾಸಕಿ, ಪಕ್ಷದ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯಕ್, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹಾಗೂ ಪಕ್ಷದ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಸುಗುಣಾ, ವಿಜಯಲಕ್ಷ್ಮಿ, ಪುಷ್ಪಲತಾ ಮತ್ತಿತರರಿದ್ದರು.

Share this article