ಶಿವರಾತ್ರಿ ಕಾರ್ಯಕ್ರಮದಲ್ಲಿ ಸಂಗೀತ ನಾದವೈಭವ

KannadaprabhaNewsNetwork | Published : Mar 10, 2024 1:46 AM

ಸಾರಾಂಶ

ಬಾಗಲಕೋಟೆ ನಗರದ ಬಿ.ವಿ.ವಿ. ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಆವರಣದಲ್ಲಿರುವ ಶಿವಾಲಯದಲ್ಲಿ ಶಿವರಾತ್ರಿ ನಿಮಿತ್ತ ಶುಕ್ರವಾರ ಸಂಜೆ ಸಂಗೀತ ಶಿವರಾತ್ರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಕ್ತಿಭಾವಗಳ ಶಿವ ನೃತ್ಯ ತಾಂಡವ ಹಾಗೂ ಶಿವ ಭಜನೆ, ಶಿವಸ್ತುತಿಗಳು ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ಸರ್ವಂ ಸಂಗೀತ ಶಿವಮಯವಾಗಿತ್ತು

ನಗರದ ಬಿ.ವಿ.ವಿ. ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಆವರಣದಲ್ಲಿರುವ ಶಿವಾಲಯದಲ್ಲಿ ಶಿವರಾತ್ರಿ ನಿಮಿತ್ತ ಶುಕ್ರವಾರ ಸಂಜೆ ಸಂಗೀತ ಶಿವರಾತ್ರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿತಾರ್‌ ವಾದನದ ನಿನಾದ, ವಚನ ಸಂಗೀತ, ಶಿವಸ್ತುತಿ, ಭಕ್ತಿ ಸಂಗೀತ, ಭಕ್ತಿ ಗೀತೆಗಳು ಮತ್ತು ನಾದ ವೈಭವ ಪ್ರಸ್ತುತ ಪಡಿಸಲಾಯಿತು.

ಇದಕ್ಕೂ ಮುಂಚೆ ನಡೆದ ಕಾರ್ಯಕ್ರಮದಲ್ಲಿ ಬಿ.ವಿ. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ದೇವರನ್ನು ಪ್ರಾರ್ಥಿಸುವ ವಿಧಾನಗಳಲ್ಲಿ ಸಂಗೀತಕ್ಕೆ ಪ್ರಥಮ ಆದ್ಯತೆ ಇದೆ. ಮಹಾಶಿವರಾತ್ರಿ ನಿಮಿತ್ತ ಸಂಗೀತ ಕಾರ್ಯಕ್ರಮ ಆಯೋಜಿಸಿ ಸಂಗೀತದ ವಿವಿಧ ಪ್ರಕಾರಗಳನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ಹೇಳಿದರು.

ಡಾ.ಕಾಶಿಲಿಂಗ ಮಠ ಅವರ ಸಿತಾರ ನಾದದೊಂದಿಗೆ ಸಂಗೀತ ಶಿವರಾತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಡಾ.ದೊಡ್ಡಮನಿ ಅವರ ವಚನ ಸಂಗೀತ, ಅದಿತಿ ಅವರ ಭಕ್ತಿಗೀತೆಗಳು, ಪರಿಮಳಾ ಅವಧಾನಿ ಅವರ ಭಕ್ತಿಕುಸುಮಾಂಜಲಿ ಕಾರ್ಯಕ್ರಮಕ್ಕೆ ಮೆರುಗು ನೀಡಿದವು.

ಅರ್ಪಿತಾ ಮತ್ತು ಬಸವಜ್ಯೋತಿ ಶಿವಸ್ತುತಿಯನ್ನು, ಡಾ.ರಶ್ಮಿ ಚೌರ್ ಮತ್ತು ಡಾ. ಹಿರಣ್ಮಯಿ ಬ್ರಿದ್ ಭರತ ನಾಟ್ಯ ಪ್ರಸ್ತುತ ಪಡಿಸಿದರು. ಪುಟ್ಟರಾಜ ಗವಾಯಿ ಸ್ಕೂಲ್ ಆಫ್ ಮ್ಯೂಜಿಕ್ ಅವರಿಂದ ಭಕ್ತಿಸಂಗೀತ ಸುಧೆ ಮತ್ತು ಇಂಜಿನಿಯರಿಂಗ್ ಕಾಲೇಜಿನ ತಂಡದಿಂದ ಬಿ.ಇ.ಸಿ ಸ್ವರಗಳು ಮುಖ್ಯ ಆಕರ್ಷಣೆಯಾಗಿದ್ದವು.

ಡಾ.ಸಿದ್ಧರಾಮಯ್ಯ ಮಠಪತಿ ಅವರ ನಾದ ವೈಭವದೊಂದಿಗೆ ಸಂಗೀತ ಶಿವರಾತ್ರಿ ಕಾರ್ಯಕ್ರಮ ಮುಕ್ತಾಯಗೊಂಡಿತು. ಡಾ.ಎಸ್.ಡಿ. ಕೆಂಗಲಗುತ್ತಿ ನಿರೂಪಿಸಿದರು. ಈಶ್ವರನ ದರ್ಶನಕ್ಕೆ ಮತ್ತು ಸಂಗೀತ ಶಿವರಾತ್ರಿ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಬಿವಿವಿ ಸಂಘದ ಗೌರವಾನ್ವಿತ ಸದಸ್ಯರು, ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ ಸೇರಿದಂತೆ ಆರೋಗ್ಯ ಮಹಾವಿದ್ಯಾಲಯಗಳ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Share this article