ಕನ್ನಡಪ್ರಭ ವಾರ್ತೆ ಮಂಡ್ಯ
ಕೆರೆಯಲ್ಲಿದ್ದ ನೂರಾರು ಮೀನುಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.ತೂಬಿನಕೆರೆ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದು ಮೂರು ದಿನಗಳಿಂದ ಮೀನುಗಳು ಬೆರಳಣಿಕೆಯಷ್ಟು ಕರೆಯಲ್ಲಿ ಮರಣ ಹೊಂದಿರುವುದು ಕಂಡು ಬಂದಿದೆ, ನಂತರ ಬುಧವಾರದಿಂದೀಚೆಗೆ ನೂರಾರು ಮೀನುಗಳು ಕೆರೆಯ ದಡದಲ್ಲಿ ಸತ್ತು ಬಿದ್ದಿವೆ, ಸತ್ತಿರುವ ಮೀನುಗಳಲ್ಲಿ ಮುಕ್ಕಾಲು ಕೆಜಿ ತೂಗುವ ಹಾಗೂ ಸಣ್ಣಸಣ್ಣ ಮೀನುಗಳ ಕಳೆಬರವೇ ಹೆಚ್ಚಿದೆ.
ಗ್ರಾಮಸ್ಥರು ಕರೆಯ ದಡದಲ್ಲಿ ಮೀನುಗಳು ಸತ್ತಿರುವುದರಿಂದ ಗಾಬರಿಗೊಂಡು ಮೀನು ಹಿಡಿಯಲು ಅಲ್ಲಿಗೆ ಬರುತ್ತಿದ್ದ ಕೆಲವು ಯವಕರಿಗೆ ಮೀನುಗಳು ಸತ್ತಿರುವ ವಿಷಯ ತಿಳಿಸಿ ಎಚ್ಚರಿಸಿದ್ದಾರೆ, ನಂತರ ಕೆರೆಯ ದಡದ ಬಳಿ ಸುತ್ತಲೂ ಮೀನುಗಳು ಸತ್ತಿರುವ ದೃಶ್ಯ ಕಂಡು ಬಂದಿದೆ. ಮೀನುಗಳು ಇಷ್ಟೊಂದು ಸಂಖ್ಯೆಯಲ್ಲಿ ಸಾವನ್ನಪ್ಪಲು ಕಾಣವೇನೆಂಬುದನ್ನು ತಿಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ತೂಬಿನಕೆರೆ ಗ್ರಾಮ ಪಂಚಾಯ್ತಿಯ ಪಿಡಿಒ ಸ್ವಾಮಿ ಅವರು, ಕೆರೆಯ ಪರಿಶೀಲನೆ ನಡೆಸಿದರು. ಜೊತೆಗೆ ಇಲ್ಲಿ ವಿಷಯುಕ್ತ ಪದಾರ್ಥಗಳು ಸೇರುವ ತ್ಯಾಜ್ಯವೇ ಇಲ್ಲ. ಆದರೂ ಇಷ್ಟೊಂದು ಮೀನುಗಳು ಮರಣ ಹೊಂದಿರುವುದು ಆಶ್ಚರ್ಯಕರವಾಗಿದೆ, ಈ ಬಗ್ಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಮೋಡ ಮುಸುಕಿದ ವಾತಾವರಣದಿಂದ ನೀರಿನಲ್ಲಿ ಆಮ್ಲಜನಕ ಕಡಿಮೆಯಾಗಿ ಕೆಲವು ಮೀನುಗಳು ಮರಣ ಹೊಂದಿರಬಹುದು ಎಂದಿದ್ದಾರೆ, ಹಾಗಾಗಿ ಮತ್ತಷ್ಟು ಮಾಹಿತಿ ಸಿಗುವವರೆಗೂ ಇಲ್ಲಿ ಮೀನುಗಳನ್ನು ಹಿಡಿಯಬಾರದು ಎಂದು ತಿಳಿಸಿದರು.
ಕುರಿಗಾಹಿಗಳ ಕೊಟ್ಟಿಗೆಯಲ್ಲಿದ್ದ ಕುರಿಗಳ ಕಳವುಕಿಕ್ಕೇರಿ: ಹೋಬಳಿ ವ್ಯಾಪ್ತಿಯ ರಾಮನಹಳ್ಳಿ, ಬೀಚೇನಹಳ್ಳಿ ಗ್ರಾಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕುರಿಗಳನ್ನು ಕಳವು ಮಾಡಿ ಹೊತ್ತಿಕೊಂಡು ಹೋಗಿರುವ ಪ್ರಕರಣ ಬುಧವಾರ ತಡರಾತ್ರಿ ಜರುಗಿದೆ.ಕುರಿಗಾಹಿಗಳು ತಮ್ಮ ಕುರಿಗಳನ್ನು ಕೊಟ್ಟಿಗೆ ಬಿಟ್ಟು ಮಲಗಿದ್ದರು. ತಡರಾತ್ರಿಯಲ್ಲಿ ಕೊಟ್ಟಿಗೆ ಬಾಗಿಲು ಮುರಿದ ದುಷ್ಕರ್ಮಿಗಳು ಭಾರೀ ಪ್ರಮಾಣದಲ್ಲಿ ಕುರಿಗಳನ್ನು ಕದ್ದೊಯ್ದಿದ್ದಾರೆ.ಬೀಚೇನಹಳ್ಳಿ ಗ್ರಾಮದ ಬಿ.ಎಂ.ರವಿ ಅವರ ಕೊಟ್ಟಿಗೆ ಬಾಗಿಲು ಮುರಿದು ಗಬ್ಬದ 2 ಕುರಿಗಳನ್ನು ಕಳವು ಮಾಡಿದ್ದರೆ, ರಾಮನಹಳ್ಳಿ ಗ್ರಾಮದ ಜವರೇಗೌಡನ ಮಂಜೇಗೌಡರ ಕೊಟ್ಟಿಗೆಯಲ್ಲಿದ್ದ 14 ಕುರಿ, ಕೆಂಪೇಗೌಡನ ಮಂಜೇಗೌಡರ ಕೊಟ್ಟಿಗೆಯಲ್ಲಿದ್ದ ಒಂದು ಮೇಕೆಯನ್ನುಕದ್ದು ಪರಾರಿಯಾಗಿದ್ದಾರೆ.ಒಂದೆಡೆ ಕೊಟ್ಟಿಗೆಗೆ ನುಗ್ಗಿ ಚಿರತೆ ಸಾಕು ಪ್ರಾಣಿಗಳನ್ನು ತಿನ್ನುತ್ತಿರುವ ಪ್ರಕರಣ ಮಾಸುವ ಮುನ್ನವೇ ದೊಡ್ಡ ಪ್ರಮಾಣದಲ್ಲಿ ಕುರಿಗಳು ಕಳುವಾಗಿರುವುದರಿಂದ ಕಳ್ಳಕಾಕರ ಭಯದಿಂದ ಗ್ರಾಮದ ಜನರು ಆತಂಕ- ಭಯದ ವಾತಾವರಣದಲ್ಲಿ ಕಾಲ ದೂಡುವಂತಾಗಿದೆ.ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ.ಗಸ್ತು ಹೆಚ್ಚಿಸಲಾಗಿದೆ. ಅಪರಿಚಿತ ವ್ಯಕ್ತಿಗಳು ಗ್ರಾಮಗಳಲ್ಲಿ ಸುಳಿದಾಡುವುದು ಕಂಡುಬಂದಲ್ಲಿ ತಕ್ಷಣವೇ ಮಾಹಿತಿ ನೀಡಿದರೆ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸಹಾಯವಾಗಲಿದೆ ಎಂದು ಇನ್‌ಸ್ಪೆಕ್ಟರ್ ರೇವತಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.