ಕುಕನೂರು ತಾಲೂಕಿನಲ್ಲಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ । ಕೀಟ, ರೋಗಬಾಧೆ
ಅಮರೇಶ್ವರಸ್ವಾಮಿ ಕಂದಗಲ್ಲಮಠ
ಕನ್ನಡಪ್ರಭ ವಾರ್ತೆ ಕುಕನೂರುಹೆಸರು ಬೆಳೆ ಅತೀ ಹೆಚ್ಚಿನ ಪ್ರಮಾಣದಲ್ಲಿ ತಾಲೂಕಿನಾದ್ಯಂತ ಬಿತ್ತನೆ ಆಗಿತ್ತು. ಆದರೆ ಸಕಾಲದಲ್ಲಿ ಮಳೆ ಕೊರತೆಯಿಂದ ಹೆಸರು ಬೆಳೆ ಹಸನಾಗಿ ಬೆಳೆದಿದ್ದರೂ ಸಹ ಕಾಯಿ ಕಟ್ಟಿಲ್ಲ. ಇದರಿಂದ ರೈತರಲ್ಲಿ ನಿರಾಸೆ ಭಾವ ಮೂಡಿದೆ.
ಕುಕನೂರು ತಾಲೂಕಿನಲ್ಲಿ ಅಂದಾಜು ಐದು ಸಾವಿರ ಹೆಕ್ಟೇರ್ ಹೆಸರು ಬೆಳೆ ಬಿತ್ತನೆ ಆಗಿದೆ. ಮೊದಮೊದಲು ಅಲ್ಪಸ್ವಲ್ಪ ಮಳೆಗೆ ಬೆಳೆ ಬೆಳೆದಿದೆ. ಆದರೆ ಹೂವು ಕಟ್ಟುವ ಸಮಯದಲ್ಲಿ ಮಳೆ ಬಾರದೆ ಮೊಗ್ಗುಗಳು ಬಾಡಿ ಹೋಗಿವೆ. ಇದರಿಂದ ಹೆಸರು ಬೆಳೆಯಲ್ಲಿ ಕಾಯಿಗಳೇ ಇಲ್ಲದಂತಾಗಿದೆ. ಮೊದಲೇ ಹೆಸರು ಬೆಳೆ ಅಲ್ಪಾವಧಿ ಬೆಳೆ ಆಗಿದ್ದು, ಒಮ್ಮೆ ಮೊಗ್ಗು ಕಮರಿ ಹೋದರೆ ಮತ್ತೆ ಬಿಟ್ಟು ಕಾಯಿ ಕಟ್ಟುವುದಿಲ್ಲ. ಹೆಸರು ಬೆಳೆ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ.ಕೀಟ, ರೋಗಬಾಧೆ ಅಧಿಕ:
ಹಸನಾಗಿ ಬೆಳೆದಿರುವ ಹೆಸರು ಬೆಳೆಗೆ ಕೀಟ ಹಾಗೂ ರೋಗಬಾಧೆ ಕಾಡುತ್ತಿದೆ. ಹಳದಿ ಬಣ್ಣದ ಬೂದು ರೋಗ, ಕೀಡಿ, ಶೀರು, ಮುಟಗಿ ರೋಗಬಾಧೆ ಹೆಚ್ಚಾಗಿದೆ. ಅಲ್ಲದೆ ಕೆಲವು ಕಡೆ ಇಡೀ ಹೆಸರು ಗಿಡವೇ ಕಮರಿ ಹೋಗುತ್ತಿದೆ. ರೋಗಭಾಧೆಯಿಂದ ಗಿಡ ಸೊರಗಿ ಹೋಗುತ್ತಿದೆ.ಗಿಡವೇ ಕಮರುತ್ತಿದೆ:ತಾಲೂಕಿನ ಇಟಗಿ, ಭಾನಾಫೂರ, ತಳಕಲ್ಲ, ತಳಬಾಳ, ಅಡವಿಹಳ್ಳಿ ಸೀಮಾದಲ್ಲಿ ಸುಮಾರು 800 ಎಕರೆಯಷ್ಟು ಹೆಸರು ಬೆಳೆಯಲ್ಲಿ ಇದುವರೆಗೂ ಬಾರದ ರೋಗವೊಂದು ಕಂಡು ಬರುತ್ತಿದೆ. ಹೆಸರು ಗಿಡ ಹಚ್ಚ ಹಸಿರಾಗಿ ಕಂಡರೂ ಸಹ ಅದರ ಮೊಪು, ಹೂವುಗಳು ಉದುರಿ ಬೀಳುತ್ತಿವೆ. ರೈತ ವರ್ಗ ಇದರಿಂದ ಚಿಂತೆಗೀಡಾಗಿದ್ದೂ, ಕೃಷಿ ಅಧಿಕಾರಿಗಳು ಜಮೀನಿಗೆ ಭೇಟಿ ಕೊಟ್ಟು ಅದಕ್ಕೆ ಪರಿಹಾರ ಒದಗಿಸಿಕೊಡಬೇಕಾಗಿದೆ.
ಅಧಿಕ ಖರ್ಚು:ಒಂದು ಎಕರೆಯಲ್ಲಿ ಹೆಸರು ಬೆಳೆ ಬಿತ್ತನೆ ಮಾಡಲು ರೈತರು ಈಗಾಗಲೇ ಅಧಿಕ ಹಣ ಖರ್ಚು ಮಾಡಿದ್ದಾರೆ. ಎಕರೆ ಹೊಲ ಹದ ಮಾಡಲು ₹1200, ಬಿತ್ತನೆಗೆ ₹600, ಬೀಜಕ್ಕೆ ₹800, ಕಳೆ ನಿಯಂತ್ರಣಕ್ಕೆ₹ 2000, ಕೀಟ, ರೋಗ ನಾಶಕ ಔಷಧ ಸಿಂಪಡಣೆಗೆ ₹ 1500 ಹೀಗೆ ಎಕರೆಗೆ ಅಂದಾಜು ₹5 ರಿಂದ 6 ಸಾವಿರ ಖರ್ಚು ಮಾಡಲಾಗಿದೆ. ಇಷ್ಟೆಲ್ಲ ಮಾಡಿದರೂ ಒಂದೆಡೆ ಮಳೆ ಅಭಾವ ಹಾಗೂ ರೋಗಬಾಧೆ ಕಾಡುತ್ತಿರುವುದರಿಂದ ರೈತ ವರ್ಗ ಸಂಕಷ್ಟಕ್ಕೆ ಸಿಲಿಕಿದೆ.ಹೆಸರು ಬೆಳೆಗೆ ಕುಕನೂರು ಸುತ್ತಮುತ್ತಲಿನ ಮಸಾರಿ ಹಾಗೂ ಯರೇಭಾಗದ ಗ್ರಾಮಗಳಲ್ಲಿ ಮಳೆ ಅಭಾವ ಉಂಟಾಗಿದೆ. ಮಳೆ ಅಭಾವದಿಂದ ಹೆಸರು ಬೆಳೆ ಪೂರ್ತಿ ಕಮರಿ ಹೋಗುತ್ತಿದೆ. ಇನ್ನೂ ಕೆಲವು ಕಡೆ ಬೆಳವಣಿಗೆಯೇ ಸರಿಯಾಗಿ ಆಗಿಲ್ಲ.ಹಚ್ಚ ಹಸಿರಿನಿಂದ ಹೆಸರು ಬೆಳೆ ಕಾಣುತ್ತಿದೆ. ಆದರೆ ಗಿಡದ ಮೊಗ್ಗು, ಹೂವುಗಳು ತಾವೇ ಉದುರಿ ಹೋಗುತ್ತಿವೆ. ಕೀಟ ಇಲ್ಲ. ಆದರೆ ಇದು ಯಾವ ರೋಗ ಎಂಬುದೇ ತಿಳಿಯುತ್ತಿಲ್ಲ. ಕೃಷಿ ಅಧಿಕಾರಿಗಳ ಬಂದು ಪರಿಶೀಲಿಸಿ ಮಾಹಿತಿ ನೀಡುವುದಾಗಿ ತಿಳಿಸಿದ್ದು, ಅವರ ಬರುವಿಕೆಗಾಗಿ ಕಾಯುತ್ತಿದ್ದೇವೆ ಎನ್ನುತ್ತಾರೆ ತಳಕಲ್ಲ ಗ್ರಾಮದ ರೈತ ಮಲ್ಲಿಕಾರ್ಜುನ ಗಡಗಿ
ನಮ್ಮ ಭಾಗದಲ್ಲಿ ಮಳೆಯೇ ಆಗಿಲ್ಲ. ಇದರಿಂದ ಹೆಸರು ಬೆಳೆ ಕಮರಿದೆ. ಮಳೆ ಆದರೆ ಕಾಯಿ ಕಟ್ಟುತ್ತದೆ. ಮಳೆ ಇಲ್ಲದೆ ತೇವಾಂಶ ಕೊರತೆಯಿಂದ ಹೆಸರಿಗೆ ನಾನಾ ರೋಗ ಹಾಗೂ ಕೀಟಬಾಧೆ ಸಹ ಬಂದಿದೆ. ಇದರಿಂದ ಖರ್ಚು ಮಾಡಿಕೊಂಡ ಹಣ ಸಹ ಬಾರದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ತೊಂಡಿಹಾಳ ಗ್ರಾಮದ ರೈತ ಸುರೇಶ ಕಡದಳ್ಳಿ.