‘ಮನೆಗೊಂದು ಗೇರು ಗಿಡ’ ನೂತನ ಯೋಜನೆ ಶೀಘ್ರ ಜಾರಿ: ಮಮತಾ ಗಟ್ಟಿ

KannadaprabhaNewsNetwork | Published : Mar 12, 2024 2:04 AM

ಸಾರಾಂಶ

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕಾರ ಮಾಡಿದ ಮಮತಾ ಗಟ್ಟಿ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಗೇರು ಹಣ್ಣು ಮತ್ತು ಗೋಡಂಬಿಯ ಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸಲು ‘ಮನೆಗೊಂದು ಗೇರು ಗಿಡ’ ಎನ್ನುವ ವಿನೂತನ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಗೇರು ಹಣ್ಣು ಮತ್ತು ಗೋಡಂಬಿಯ ಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸಲು ‘ಮನೆಗೊಂದು ಗೇರು ಗಿಡ’ ಎನ್ನುವ ವಿನೂತನ ಯೋಜನೆಯನ್ನು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಹಮ್ಮಿಕೊಂಡಿದೆ.ನಿಗಮದ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕಾರ ಮಾಡಿದ ಮಮತಾ ಗಟ್ಟಿ ಮೊದಲ ಸುದ್ದಿಗೋಷ್ಠಿಯಲ್ಲಿ ಈ ನೂತನ ಯೋಜನೆಯನ್ನು ಘೋಷಿಸಿದರು.ಗೇರು ಹಣ್ಣು ಕಿತ್ತಳೆ ಹಣ್ಣಿಗಿಂತ 5 ಪಟ್ಟು ಅಧಿಕ ವಿಟಮಿನ್ ಸಿ ಹೊಂದಿದೆ. ಅತ್ಯುತ್ತಮ ಪೌಷ್ಟಿಕ ಆಹಾರವೂ ಹೌದು. ಹಾಗಾಗಿಯೇ ಹಿಂದೆಲ್ಲ ಪ್ರತಿ ಮನೆ ಅಂಗಳದಲ್ಲಿ ಗೇರು ಮರ ಇರುತ್ತಿತ್ತು. ಆದರೆ ಇಂದು ಗೋಡಂಬಿ ತಿನ್ನುತ್ತಾರೆಯೇ ಹೊರತು ಗೇರು ಹಣ್ಣು ತಿನ್ನುವುದು ಕಡಿಮೆಯಾಗಿದೆ. ಆದ್ದರಿಂದ ಪ್ರತಿ ಮನೆಗೂ ಗೇರು ಸಸಿ ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇನ್ನೊಂದು ವಾರದೊಳಗೆ ನಿಗಮದ ಬೋರ್ಡ್‌ ಆಫ್‌ ಮೀಟಿಂಗ್ ಸಭೆ ಕರೆದು ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಗೇರು ಕೃಷಿ ಜಾಗೃತಿ: ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹೋಬಳಿ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಿ ಸಾರ್ವಜನಿಕರಿಗೆ ಗೇರು ಕೃಷಿ ಕುರಿತು ಜಾಗೃತಿ ಮೂಡಿಸಲಾಗುವುದು. ಕಾರ್ಯಕ್ರಮಕ್ಕೆ ಅರಣ್ಯ ಸಚಿವರನ್ನು ಆಹ್ವಾನಿಸಿ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನೂ ಆಯೋಜಿಸಲಾಗುವುದು. ಗೇರು ಬೆಳೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲೂ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮಮತಾ ಗಟ್ಟಿ ಹೇಳಿದರು.50 ಕೋಟಿ ರು. ಪ್ರಸ್ತಾವನೆ: ನಿಗಮದ ವತಿಯಿಂದ ನರ್ಸರಿಗಳನ್ನು ಅಭಿವೃದ್ಧಿಪಡಿಸಲು, ಗೇರು ಗಿಡಗಳನ್ನು ನೆಡುವ ಮೂಲಕ ಅಸ್ತಿತ್ವದಲ್ಲಿರುವ ತೋಟಗಳ ಪುನಶ್ಚೇತನಕ್ಕೆ 50 ಕೋಟಿ ರು. ನೀಡುವಂತೆ ಅರಣ್ಯ ಸಚಿವರಿಗೆ ಮನವಿ ಮಾಡಲಾಗಿದ್ದು, ಅದಕ್ಕಾಗಿ ಯೋಜನೆ ತಯಾರಿಸಿ ನೀಡಲಾಗಿದೆ. ಅಲ್ಲದೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ 10 ಕೋಟಿ ರು. ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‌ಕೆವಿವೈ) ಅಡಿಯಲ್ಲಿ 8 ಕೋಟಿ ರು. ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.ನಿಗಮದ ಎಂಡಿ ಕಮಲಾ ಮಾತನಾಡಿ, ಗೇರು ಕೃಷಿಯ ರಾಷ್ಟ್ರೀಯ ಉತ್ಪಾದಕತೆ ಪ್ರತಿ ಹೆಕ್ಟೇರ್‌ಗೆ 700 ಕೆಜಿ ಇದ್ದರೆ ಕರ್ನಾಟಕದಲ್ಲಿ 450 ಕೆಜಿ ಇದೆ. ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದ ಗೇರು ಉತ್ಪಾದನೆ ಕೊಂಚ ಕಡಿಮೆಯಾಗಿದೆ. ಗೇರು ಹೂಬಿಡುವ ಕಾಲಕ್ಕೆ ಬಿಸಿಲು ಜತೆಗೆ ತಂಪಾದ ವಾತಾವರಣ ಬೇಕಾಗುತ್ತದೆ. ಈ ವರ್ಷ ಡಿಸೆಂಬರ್‌ನಲ್ಲಿ ನಾಲ್ಕು ದಿನ ಮಳೆ ಬಂದದ್ದು ಗೇರು ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆದರೂ ಗೇರು ಕೃಷಿ ಪುನಶ್ಚೇತನ ಕಾರ್ಯ ಅನುಷ್ಠಾನ ಹಂತದಲ್ಲಿದೆ ಎಂದರು.

Share this article