ಕನ್ನಡಪ್ರಭ ವಾರ್ತೆ ಬೇಲೂರು
ಡಿಜಿಟಲ್ ತಂತ್ರಜ್ಞಾನ ಪ್ರಭಾವದಿಂದ ಜನರು ಮೊಬೈಲ್‌ಗಳಿಗೆ ಮಾರುಹೋಗಿದ್ದು, ಪುಸ್ತಕ ಓದುವ ಹವ್ಯಾಸದಿಂದ ದೂರವಾಗುತ್ತಿರುವುದು ಬೇಸರದ ವಿಷಯ ಎಂದು ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಘಟಕದ ಅಧ್ಯಕ್ಷ ಎಚ್. ಎಂ. ದಯಾನಂದ ಹೇಳಿದರು.ಪಟ್ಟಣದ ಚನ್ನಕೇಶವಸ್ವಾಮಿ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕವಿ ನಿಡಗೋಡು ದೇವರಾಜ್ ಅವರು ಸ್ವರಚಿತ ನನ್ನ ಕನಸಿನ ಗೂಡು ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ , ಮೊಬೈಲ್ ಗೀಳಿನಿಂದಾಗಿ ಪುಸ್ತಕ ಓದುಗರ ಸಂಖ್ಯೆ ಇಳಿಮುಖವಾಗುತ್ತಿದೆ. ದಿನಪತ್ರಿಕೆ, ಪುಸ್ತಕಗಳನ್ನು ಮೊಬೈಲ್‌ನಲ್ಲಿ ಓದುವ ಹವ್ಯಾಸ ಹೆಚ್ಚುತ್ತಿದೆ. ಪುಸ್ತಕಗಳು ನಾಡಿನ ಸಂಸ್ಕೃತಿಯ ಸಂಕೇತವಾಗಿದೆ. ಸಾಹಿತಿಗಳಿಗೆ ಸಂಘಸಂಸ್ಥೆಗಳು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತು ಹೆಚ್ಚಿನ ಸಹಕಾರ ನೀಡಬೇಕಿದೆ. ಇತ್ತೀಚೆಗೆ ಕವಿಗಳು ಮತ್ತು ಉದಯೋನ್ಮುಖ ಸಾಹಿತಿಗಳು ಬರುತ್ತಿದ್ದು ಕವಿ ದೇವರಾಜ್ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಮಾ.ನ.ಮಂಜೇಗೌಡ ಮಾತನಾಡಿ, ಸಾಹಿತ್ಯ ವಲಯದಲ್ಲಿ ಗುರುತಿಸಿಕೊಳ್ಳುವುದು ಸುಲಭ ಮಾತಲ್ಲ, ಸುದೀರ್ಘ ಅಧ್ಯಯನ ಮತ್ತು ಉತ್ತಮ ಬರವಣಿಗೆ ಪೂರಕವಾಗಲಿದೆ. ಸಾಹಿತಿಗಳು ಅನುಭವದಿಂದ ಸಾಹಿತ್ಯ ರಚನೆ ಮಾಡಬೇಕು. ಯುವ ಕವಿ ನಿಡಗೋಡು ದೇವರಾಜ್ ಇತ್ತೀಚಿನ ದಿನಗಳಲ್ಲಿ ಉತ್ತಮ ಕವಿತೆಗಳನ್ನು ರಚಿಸುತ್ತಿದ್ದಾರೆ. ಯುವ ಪೀಳಿಗೆಗೆ ಪುಸ್ತಕ ಓದುವುದನ್ನು ರೂಢಿ ಮಾಡಿಸಬೇಕಿದೆ. ಶಾಲಾ ಕಾಲೇಜು ಹಂತದಲ್ಲಿ ಯುವ ಜನಾಂಗಕ್ಕೆ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.ತಾಲೂಕು ಜನಪದ ಪರಿಷತ್ತು ಅಧ್ಯಕ್ಷ ವೈ.ಸಿ.ಸಿದ್ದೇಗೌಡ ಮಾತನಾಡಿ, ಸಾಹಿತ್ಯ ವಲಯಕ್ಕೆ ಬರುವ ಪ್ರತಿ ಸಾಹಿತಿಗಳು ಜನಪದದ ಬಗ್ಗೆ ಓದಬೇಕು. ಸಾಹಿತ್ಯವು ಒತ್ತಡವನ್ನು ನಿವಾರಿಸಲು ಹಾಗೂ ವ್ಯಕ್ತಿಯ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳಾದ ಆರ್. ಎಸ್. ಮಹೇಶ್, ಗುರುರಾಜ್, ಪತ್ರಕರ್ತರಾದ ಬಿ.ಎನ್.ಗಣೇಶ್, ರವಿಹೊಳ್ಳ, ಮತ್ತು ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಮೋಹನಕುಮಾರ್, ಸುರೇಶ್, ಕಿರಣ್ ಕುಮಾರ್, ಪಾಡುಪ್ರಸಾದ್, ನಿತ್ಯ, ಮಧುಮಾಲತಿ, ಲೋಕೇಶ್, ರಾಜೇಶ್ ಯದುನಂದನ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.