ನಾರಾಯಣ ಹೆಗಡೆ
ಹಾವೇರಿ : ಕರ್ನಾಟಕ ಜಾನಪದ ಕಲೆಗಳ ಕಣಜ. ಅಂಥ ಜಾನಪದದ ಅಧ್ಯಯನಕ್ಕೆ ವಿಸ್ತೃತವಾದ ನೆಲೆಗಳನ್ನು ಒದಗಿಸುವ ಮಹತ್ವಾಕಾಂಕ್ಷೆಯಿಂದ ಆರಂಭವಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಈಗ ವಿದ್ಯಾರ್ಥಿಗಳ ಕೊರತೆ ತೀವ್ರಗೊಂಡಿದೆ.
ಜಾನಪದ ವಿವಿಯ ಎಂಟು ನಿಕಾಯಗಳಡಿ 16 ಸ್ನಾತಕೋತ್ತರ ವಿಭಾಗಗಳು ನಡೆಯುತ್ತಿದೆ. ಆದರೆ, ವಿವಿಧ ಕೋರ್ಸುಗಳಿಗೆ ಕಳೆದ ಸಾಲಿನಲ್ಲಿ 1000 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈ ಬಾರಿ 500ಕ್ಕೆ ಇಳಿದಿದೆ. ವಿದ್ಯಾರ್ಥಿಗಳ ಸಂಖ್ಯೆ ಅರ್ಧಕ್ಕರ್ಧ ಕುಸಿಯಲು ಜಾನಪದ ಕೋರ್ಸುಗಳ ವ್ಯಾಸಂಗ ಮಾಡಿದವರಿಗೆ ಸರಿಯಾಗಿ ಉದ್ಯೋಗಾವಕಾಶಗಳು ಸಿಗದಿರುವುದೇ ಕಾರಣ. ಹಾಗಾಗಿ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಗಮನಹರಿಸಬೇಕು ಎನ್ನುವುದು ವಿವಿ ಆರಂಭವಾದ ದಿನದಿಂದಲೂ ಇರುವ ಕೂಗು. ಜಾನಪದ ವಿವಿ ಆರಂಭವಾಗಿ 13 ವರ್ಷಗಳಾಗಿವೆ. ಆರಂಭಿಕ ದಿನಗಳಲ್ಲಿ ನಿಧಾನವಾಗಿ ಏರುಗತಿಯಲ್ಲಿದ್ದ ವಿದ್ಯಾರ್ಥಿಗಳ ದಾಖಲಾತಿ, ಇತ್ತೀಚಿನ ಕೆಲ ವರ್ಷಗಳಲ್ಲಿ ಇಳಿಕೆಯಾಗಿದ್ದು ಆತಂಕ ತಂದಿದೆ.
2022ರಲ್ಲಿ ವಿವಿಧ ವಿಭಾಗಗಳಿಂದ 600 ದಾಟಿದ್ದ ವಿದ್ಯಾರ್ಥಿಗಳ ಸಂಖ್ಯೆ, 2023ರಲ್ಲೂ ಹೆಚ್ಚು ಕಡಿಮೆ ಇದೇ ಸಂಖ್ಯೆಯಲ್ಲಿತ್ತು. ಆದರೆ, ಕಳೆದ ಸಾಲಿನಲ್ಲಿ ಇದು 1000 ತಲುಪಿತ್ತು. ಈ ಬಾರಿ ಇದ್ದಕ್ಕಿದ್ದಂತೆ 500ಕ್ಕೆ ಇಳಿದಿದೆ. ಆರಂಭಿಕ ವರ್ಷಗಳಿಗೆ ಹೋಲಿಸಿದರೆ ವಿವಿಯಲ್ಲಿ ದಾಖಲಾತಿ ಹಿಂದಿನ ಕೆಲ ವರ್ಷಗಳಿಂದ ಏರುತ್ತಾ ಸಾಗಿತ್ತು. ಪ್ರವಾಸೋದ್ಯಮ, ಪತ್ರಿಕೋದ್ಯಮ ಸೇರಿ ಎಂಎ, ಎಂಬಿಎ, ಎಂಎಸ್‌ಡಬ್ಲ್ಯು ಕೋರ್ಸ್‌ಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ಆದರೆ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಕೊಂಚ ಕಡಿಮೆಯಾದಂತಿದೆ. ಆದರೆ, ಪ್ರವೇಶ ಪ್ರಕ್ರಿಯೆಗೆ ಇನ್ನೂ ಸಮಯಾವಕಾಶ ಇರುವುದರಿಂದ ಇನ್ನಷ್ಟು ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ದಾಖಲಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ವಿವಿಯ ಅಧಿಕಾರಿಗಳು.
ಜಾನಪದ ವಿವಿಯಲ್ಲಿ ಪ್ರಸ್ತುತ ದೊಡ್ಡಾಟ (ಜಾನಪದ ನಾಟಕ), ಡೊಳ್ಳು ಕುಣಿತ, ಕಂಸಾಳೆ, ತೊಗಲು ಬೊಂಬೆಯಾಟ (ಗೊಂಬೆಯಾಟ) ಸಾಂಪ್ರದಾಯಿಕ ಕಸೂತಿ, ಜಾನಪದ ಪ್ರವಾಸೋದ್ಯಮ, ಜಾನಪದ ಹಾಡುಗಳು, ಜಾನಪದ ನೃತ್ಯಗಳು, ಬಿದಿರಿನ ಕಲೆ, ಜಾನಪದ ಸಮರ ಕಲೆಗಳು, ಜಾನಪದ ಕ್ರೀಡೆಗಳು, ತಾಳವಾದ್ಯ ಮತ್ತು ಯೋಗ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನೀಡುತ್ತಿದೆ. ಬಯಲು ರಂಗಮಂದಿರ, ಯಕ್ಷಗಾನ, ಸಾಂಪ್ರದಾಯಿಕ ಹಚ್ಚೆ ಕಲೆ, ಮಾರ್ಷಲ್ ಆರ್ಟ್ಸ್ ಮತ್ತು ಯೋಗದಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನೂ ನೀಡುತ್ತಿದೆ. ಜಾನಪದ ಕಾವ್ಯ, ಸಾಂಪ್ರದಾಯಿಕ ಡೈರಿ ಉದ್ಯಮ ಮತ್ತು ಸಾಂಪ್ರದಾಯಿಕ ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳನ್ನು ಸಹ ನಡೆಸುತ್ತಿದೆ.
ಅನುದಾನ ಬಹಳ ಕಡಿಮೆ:
ರಾಜ್ಯದ ಮೂಲೆ ಮೂಲೆಯಲ್ಲೂ ಇರುವ ವಿಭಿನ್ನ, ವಿಶಿಷ್ಟ ಹಾಗೂ ಅಮೂಲ್ಯ ಜಾನಪದ ಸಂಪತ್ತಿನ ಅಧ್ಯಯನ ಮತ್ತು ಅದನ್ನು ಮುಂದಿನ ಪೀಳಿಗೆಗೆ ರಕ್ಷಿಸುವ ಉದ್ದೇಶ, ಗುರಿಹೊಂದಿಗೆ ಸಾಗುತ್ತಿರುವ ವಿವಿಗೆ ಆಂತರಿಕ ಆದಾಯ, ಸರ್ಕಾರದ ಆರ್ಥಿಕ ನೆರವು ಎರಡೂ ತೀರಾ ಕಡಿಮೆ. ಎರಡೂ ಸೇರಿದರೂ ಕೋಟಿ ರು. ಕೂಡ ಆಗುವುದಿಲ್ಲ. ಆಂತರಿಕ ಆದಾಯ 50ರಿಂದ 60 ಲಕ್ಷ ರು. ಇದ್ದರೆ, ಸರ್ಕಾರದ ನೆರವು 30ರಿಂದ 40 ಲಕ್ಷ ರು. ದಾಟದು. ಹಾಗಾಗಿ ಆರಂಭದಿಂದಲೂ ನಿರೀಕ್ಷಿತ ಮಟ್ಟದಲ್ಲಿ ವಿವಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಜಾನಪದ ವಿಶ್ವವಿದ್ಯಾಲಯದಲ್ಲಿ ವ್ಯವಸ್ಥಿತ ಗ್ರಂಥಾಲಯ, ಒಬಿಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಅಗತ್ಯವಿದೆ. ವಿವಿ ಸ್ಥಾಪನೆಗೆ ತೋರಿದ ಆಸಕ್ತಿಯನ್ನು ಸರ್ಕಾರಗಳು ಅದರ ಅಭಿವೃದ್ಧಿಗೆ ತೋರುತ್ತಿಲ್ಲ. ಒಟ್ಟು 168 ಎಕರೆ ಜಾಗವಿದೆ. ಈ ಆಸ್ತಿಯೂ ಖಾಸಗಿಯವರಿಂದ ಕಬಳಿಕೆ ಆಗಿರುವ ಆರೋಪವೂ ಇದೆ. ಇರುವ ಜಮೀನು ಉಳಿಸಿಕೊಳ್ಳಲೂ ವಿವಿ ಪರದಾಡುತ್ತಿದೆ.
ಸಿಬ್ಬಂದಿ ಕೊರತೆ: ಜಾನಪದ ವಿಶ್ವವಿದ್ಯಾಲಯಕ್ಕೆ ಎರಡು ವರ್ಷಗಳ ಹಿಂದೆ ಬೋಧಕ, ಬೋಧಕೇತರ ಸೇರಿ 25 ಕಾಯಂ ನೇಮಕಾತಿಯಾಗಿದೆ. ಆದರೆ, ಇನ್ನೂ 25 ಜನ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ವೇತನ ನೀಡಲು ಕೂಡ ಪರದಾಡುವ ಸ್ಥಿತಿಯಿದೆ. ವಿವಿ ಅಡಿ ಬೀದರ್, ಜೋಯಿಡಾ, ಮಲೆಮಹದೇಶ್ವರ ಬೆಟ್ಟ, ಮೈಸೂರು, ಮಂಡ್ಯದಲ್ಲಿ ಪ್ರಾದೇಶಿಕ ಕೇಂದ್ರಗಳಿವೆ.
ಈ ಆರ್ಥಿಕ ಸಾಲಿನಲ್ಲಿ ವಿವಿಗೆ ಸರ್ಕಾರದಿಂದ ಬಂದಿರುವ ಅನುದಾನ ಕೇವಲ ₹38 ಲಕ್ಷ. ಪ್ರತಿ ತಿಂಗಳು ವಿದ್ಯುತ್ ಬಿಲ್ ₹1 ಲಕ್ಷ ಬರುತ್ತಿದ್ದು, ತಾತ್ಕಾಲಿಕ ಸಿಬ್ಬಂದಿ ವೇತನಕ್ಕೆ ಸುಮಾರು ₹35-40 ಲಕ್ಷಗಳ ಅಗತ್ಯವಿದೆ. ಆಂತರಿಕ ಸಂಪನ್ಮೂಲವೂ ಇಲ್ಲದ್ದರಿಂದ ನಿರ್ವಹಣೆಯೇ ದೊಡ್ಡ ಸವಾಲು. ಇನ್ನು ಸಂಶೋಧನೆ, ಪುಸ್ತಕ ಪ್ರಕಟಣೆ ಇತ್ಯಾದಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ಅನುದಾನವಿಲ್ಲದ್ದರಿಂದ ಅಭದ್ರತೆ ಹಾಗೂ ಅಸಹಾಯಕತೆಯಲ್ಲೇ ಕಾಲ ನೂಕುವಂತಾಗಿದೆ.
ಸಂಶೋಧನೆಗೆ ಆದ್ಯತೆ: ಜ್ಞಾನ ಶಿಸ್ತಿನ ಬಹುಮುಖಿತ್ವ ಗುರುತಿಸಲು ಕ್ಷೇತ್ರ ಕಾರ್ಯದ ಮೂಲಕ ಗುಣಮಟ್ಟದ ಸಂಶೋಧನೆ ಅತ್ಯವಶ್ಯವಾಗಿದ್ದು, ಆ ನಿಟ್ಟಿನಲ್ಲಿ ಜಾನಪದ ವಿವಿ ತನ್ನ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಎಂಫಿಲ್ ಹಾಗೂ ಪಿಎಚ್.ಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸುತ್ತಿದೆ. ಜಾನಪದ ವಿಷಯದ ವ್ಯಾಪ್ತಿ ಜಾಗತಿಕ ಮಟ್ಟದ್ದಾಗಿರುವುದರಿಂದ ಇದರಲ್ಲಿ ಸಂಶೋಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಅಲ್ಲದೆ ಜಾನಪದದ ಅಧ್ಯಯನಕ್ಕೆ ಇರುವ ಏಕೈಕ ವಿವಿ ಇದಾಗಿರುವುದರಿಂದ ಸಾಕಷ್ಟು ಜನ ಸಂಶೋಧನೆಗೆ ಮುಂದಾಗುತ್ತಿದ್ದಾರೆ.
ಈಗಾಗಲೇ 33 ಮಂದಿ ಸಂಶೋಧನಾ ಪ್ರಬಂಧ ಮಂಡಿಸಿ ವಿವಿಯಿಂದ ಪಿಎಚ್.ಡಿ ಪಡೆದಿದ್ದಾರೆ. ಇನ್ನೂ 150 ಮಂದಿ ಸಂಶೋಧನಾ ಅಧ್ಯಯನ ನಡೆಸುತ್ತಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶ, ಜಾನಪದ ನಿಘಂಟು ಸೇರಿ 200ಕ್ಕೂ ಹೆಚ್ಚು ಪುಸ್ತಕಗಳನ್ನು ವಿವಿ ಪ್ರಕಟಿಸಿದೆ.
ದೇಶದ ಸಂಸ್ಕೃತಿ ಬಿಂಬಿಸುವ ಮ್ಯೂಸಿಯಂ ಸ್ಥಾಪನೆಗೆ ಚಿಂತನೆ
ಜಾನಪದ ವಿವಿಗೆ ಆಂತರಿಕ ಸಂಪನ್ಮೂಲವೂ ಇಲ್ಲ. ವಿದ್ಯಾರ್ಥಿಗಳ ಪ್ರವೇಶ, ಡಿಪ್ಲೊಮಾ ಕೋರ್ಸ್‌ನಿಂದ ಬರುವ ಶುಲ್ಕ ಸೇರಿ ವಾರ್ಷಿಕವಾಗಿ ಬರುವ ಸಂಪನ್ಮೂಲ ₹60 ಲಕ್ಷ ಮೀರುವುದಿಲ್ಲ. ದೇಶದ ಪ್ರತಿಯೊಂದು ಭಾಗದ ಜಾನಪದ ಸಂಸ್ಕೃತಿ ಬಿಂಬಿಸುವ 50 ಎಕರೆ ಜಾಗದಲ್ಲಿ ಮ್ಯೂಸಿಯಂ ಸ್ಥಾಪಿಸುವ ಉದ್ದೇಶವನ್ನು ವಿವಿ ಹೊಂದಿದೆ. ದೇಶದ ಸಂಸ್ಕೃತಿ ಪರಿಚಯಿಸುವ ಜತೆಗೆ ಆಂತರಿಕ ಸಂಪನ್ಮೂಲ ಹೆಚ್ಚಿಸಿಕೊಳ್ಳುವುದು ಅದರ ಉದ್ದೇಶ. ಅದಕ್ಕಾಗಿ ಸರ್ಕಾರಕ್ಕೆ ₹200 ಕೋಟಿ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನುದಾನ ಸಿಕ್ಕರೆ ಮ್ಯೂಸಿಯಂ ತಲೆಎತ್ತಲಿದೆ. ಆಗ ವಾರ್ಷಿಕ ಅನುದಾನಕ್ಕಾಗಿ ಸರ್ಕಾರವನ್ನು ನೆಚ್ಚಿಕೊಳ್ಳುವ ಅಗತ್ಯವೂ ಇರುವುದಿಲ್ಲ.
ಜಾನಪದ ವಿವಿ ಇತರ ವಿವಿಗಳಿಗಿಂತ ಭಿನ್ನವಾಗಿದೆ. ವಿವಿಗೆ ಅನುದಾನದ ಕೊರತೆಯಿದ್ದರೂ ಅಭಿವೃದ್ಧಿ ಕುಂಠಿತವಾಗಿಲ್ಲ. ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಎದ್ದು ಕಾಣುತ್ತಿದೆ. ವಿವಿಧ ಚಟುವಟಿಕೆ, ಮೂಲ ಸೌಕರ್ಯಕ್ಕೆ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರೊ. ಟಿ.ಎಂ. ಭಾಸ್ಕರ್, ಕುಲಪತಿ, ಕಜಾವಿವಿ