ಪ್ರಗತಿ ವರದಿ ನೀಡಿದ ಅಧಿಕಾರಿಗಳ ತರಾಟೆ

KannadaprabhaNewsNetwork | Published : Jul 6, 2024 12:45 AM

ಸಾರಾಂಶ

ತಾಲೂಕು ಮಟ್ಟದ ಅಧಿಕಾರಿಗಳು ಹೀಗೆ ವರ್ತಿಸಿದರೆ ಇನ್ನು ನಿಮ್ಮ ಕೈಕೆಳಗೆ ಕೆಲಸ ಮಾಡುವ ಸಿಬ್ಬಂದಿ ಯಾವ ಹಂತದಲ್ಲಿ ಕಚೇರಿಯಲ್ಲಿ ಕಾರ್ಯ ಮಾಡಬಹುದು

ಶಿರಹಟ್ಟಿ: ಸಮಯಕ್ಕೆ ಸರಿಯಾಗಿ ಸಭೆಗೆ ಬಾರದ ಹಾಗೂ ಪ್ರಗತಿ ವರದಿ ನೀಡದೇ ಬೇಜವಾಬ್ದಾರಿ ತೋರಿದ ತಾಲೂಕು ಮಟ್ಟದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನೋಟಿಸ್‌ ನೀಡುವಂತೆ ಜಿಪಂ ಮುಖ್ಯ ಯೋಜನಾಧಿಕಾರಿ ಎನ್.ಕೆ. ನಿರ್ಮಲಾ ಹೇಳಿದರು.

ಶುಕ್ರವಾರ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸಮಯ ಪ್ರಜ್ಞೆ ಇರದ ಅಧಿಕಾರಿಗಳು ಸಭೆಗೆ ಬರುವ ಅಗತ್ಯವಿಲ್ಲ. ಪ್ರತಿ ಸಭೆಯಲ್ಲಿ ಇದೇ ಪ್ರವೃತ್ತಿ ನಡೆಯುತ್ತಿದ್ದು, ಇನ್ನು ಮುಂದೆ ಇದನ್ನು ಸಹಿಸಲು ಸಾಧ್ಯವಿಲ್ಲ. ಪ್ರತಿ ತಿಂಗಳು ೫ ರೊಳಗಾಗಿ ಆಯಾ ಇಲಾಖೆ ಮಾಹಿತಿ ನೀಡಬೇಕೆಂಬುದು ನಿಯಮವಿದ್ದು, ಬಹುತೇಕ ಅಧಿಕಾರಿಗಳು ಅದನ್ನು ಉಲ್ಲಂಘಿಸುತ್ತಿರುವುದು ಅಕ್ಷಮ್ಯ ಅಪರಾಧ. ಇಂದಿನ ಸಭೆಗೆ ೧೧ ಗಂಟೆ ನಂತರ ಬಂದ ಎಲ್ಲ ಅಧಿಕಾರಿಗಳಿಗೆ ತಕ್ಷಣ ನೋಟಿಸ್ ಜಾರಿ ಮಾಡಿ ಎಂದು ಖಡಕ್ ಸೂಚನೆ ನೀಡಿದರು.

ಕನಿಷ್ಟ ಪಕ್ಷ ಶಾಲೆಗೆ ಹೋಗುವ ಮಕ್ಕಳಲ್ಲಿ ಇರುವ ಸಮಯಪ್ರಜ್ಞೆ ನಿಮಗಿಲ್ಲ. ತಾಲೂಕು ಮಟ್ಟದ ಅಧಿಕಾರಿಗಳು ಹೀಗೆ ವರ್ತಿಸಿದರೆ ಇನ್ನು ನಿಮ್ಮ ಕೈಕೆಳಗೆ ಕೆಲಸ ಮಾಡುವ ಸಿಬ್ಬಂದಿ ಯಾವ ಹಂತದಲ್ಲಿ ಕಚೇರಿಯಲ್ಲಿ ಕಾರ್ಯ ಮಾಡಬಹುದು. ಪ್ರತಿ ಸಭೆಯಲ್ಲಿ ಇಂತಹ ಪ್ರವೃತ್ತಿ ಮುಂದುವರೆದರೆ ಸಹಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಶಿಕ್ಷಣ ಇಲಾಖೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ಮೆನು ಪ್ರಕಾರ ಮಕ್ಕಳಿಗೆ ಊಟ ಬಡಿಸಬೇಕು. ತಮಗೆ ತೋಚಿದ್ದನ್ನು ಮಾಡುವಂತಿಲ್ಲ. ಮುಖ್ಯವಾಗಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುವಂತಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ದಿನಕ್ಕೊಮ್ಮೆ ಕೆಲ ಶಾಲೆಗಳಿಗೆ ಭೇಟಿ ನೀಡಿ ವರದಿ ಪಡೆಯಬೇಕು. ಬಿಸಿಯೂಟ ಕೊಠಡಿ ಹಾಗೂ ಶೌಚಾಲಯ ಶುಭ್ರತೆ ಬಗ್ಗೆ ಗಮನಹರಿಸಬೇಕು ಎಂದು ಶಿಕ್ಷಣಾಧಿಕಾರಿಗೆ ಸಲಹೆ ನೀಡಿದರು.

ದೇವರಾಜ ಅರಸು ನಿಗಮ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಲಿಯುತ್ತಿರುವ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಬೇಕು. ಕೆಲ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸಂಪೂರ್ಣ ಕಳಪೆ ಹಂತದಲ್ಲಿದೆ. ಹಿಂದುಳಿದಿರುವ ಮಕ್ಕಳ ಬಗ್ಗೆ ನಿಗಾ ವಹಿಸಿ ಅವರಿಗೆ ವಿಶೇಷ ತರಬೇತಿ ನೀಡಬೇಕು. ಪ್ರಮುಖವಾಗಿ ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ವಾಷಿಂಗ್ ಮಷಿನ್, ಶುದ್ಧ ಕುಡಿವ ನೀರಿನ ಘಟಕದ ಬಗ್ಗೆ ಮುತುವರ್ಜಿ ವಹಿಸಬೇಕು. ಯಾವುದೇ ಹಂತದಲ್ಲಿ ನೀರು ಕಲುಷಿತಗೊಳ್ಳಬಾರದು. ಸರ್ಕಾರ ಮಕ್ಕಳಿಗಾಗಿ ಜಾರಿಗೆ ತಂದಿರುವ ಯೋಜನೆ ಸದುಪಯೋಗಪಡಿಸಿಕೊಳ್ಳುವಂತೆ ತಾಕೀತು ಮಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಆಹಾರ ಮಕ್ಕಳಿಗೆ ನೀಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಮೇಲ್ಚಿಚಾರಕಿಯರು ಈ ಕುರಿತು ಗಮನಹರಿಸಬೇಕು. ಮುಖ್ಯವಾಗಿ ಗರ್ಭಿಣಿಯರಿಗೆ ಉತ್ತಮವಾದ ಪೌಷ್ಟಿಕ ಆಹಾರ ಪೂರೈಕೆ ಮಾಡಬೇಕು. ಖಾಸಗಿ ಸ್ಥಳಗಳಲ್ಲಿರುವ ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಅಂಗನವಾಡಿ ಕೇಂದ್ರಗಳ ಸ್ಥಿತಿಗತಿಗಳ ಬಗ್ಗೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.

ಅರಣ್ಯ ಇಲಾಖೆ ಅಡಿ ಕಳೆದ ಸಾಲಿನಲ್ಲಿ ೫ ಸಾವಿರ ಸಸಿಗಳನ್ನು ರಸ್ತೆ ಬದಿ ನೆಟ್ಟಿರುವುದಾಗಿ ಸಭೆಗೆ ಮಾಹಿತಿ ನೀಡುತ್ತಿದ್ದು, ಅದರ ಸ್ಥಿತಿಗತಿ ಏನಾಗಿದೆ ಎಂಬುದರ ಬಗ್ಗೆ ನನಗೆ ವರದಿ ನೀಡಬೇಕು. ಸ್ಥಳ ಸಮೇತ ಮಾಹಿತಿ ನೀಡಿ.ನಾನೇ ಸ್ವಂತ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಬಹುತೇಕ ಸಸಿಗಳು ನಿರ್ವಹಣೆ ಕೊರತೆಯಿಂದ ಒಣಗಿಹೋಗಿವೆ. ಸಾಮಾಜಿಕ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ ಸಮಗ್ರ ಮಾಹಿತಿ ಸಿದ್ದಪಡಿಸಿಕೊಳ್ಳಬೇಕು ಎಂದು ಹೇಳಿದರು.

ತಾಲೂಕಾಸ್ಪತ್ರೆಯಲ್ಲಿ ವಿಕಲಚೇತನರಿಗೆ ಸಿಗುವ ಸೌಲಭ್ಯಗಳನ್ನು ವೈದ್ಯರು ಪ್ರಾಮಾಣಿಕವಾಗಿ ಒದಗಿಸಿಕೊಡಬೇಕು. ವಿಕಲಚೇತನರಿಗೆ ಸರ್ಕಾರ ವಿಶೇಷ ಅನುದಾನ ನೀಡುತ್ತಿದೆ. ಅದರ ಬಳಕೆ ಪೂರ್ಣ ಪ್ರಮಾಣದಲ್ಲಿ ಆಗಬೇಕು. ತಾಲೂಕಾಸ್ಪತ್ರೆಯಲ್ಲಿ ವಿಕಲಚೇತನರಿಗೆ ವೈದ್ಯಕೀಯ ಉಪಕರಣಗಳು ಇಲ್ಲದಿದ್ದಲ್ಲಿ ಕೊರತೆಯಿರುವ ಪಟ್ಟಿಯನ್ನು ಸಿದ್ದಪಡಿಸಿ. ನಾನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

ತಾಪಂ ಇಓ ಎಸ್.ಎಸ್. ಕಲ್ಮನಿ, ಕೃಷಿ ಇಲಾಖೆ ಅಧಿಕಾರಿ ರೇವಣೆಪ್ಪ ಮನಗೂಳಿ, ತೋಟಗಾರಿಕೆ ಇಲಾಖೆ ಅಧಿಕಾರಿ ಸುರೇಶ ಕುಂಬಾರ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಕೌಸಿಕ ದಳವಾಯಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶರಣಯ್ಯ ಕುಲಕರ್ಣಿ, ಬಿಸಿಎಂ ಇಲಾಖೆಯ ಮರಿಗೌಡ ಸುರಕೋಡ ಸೇರಿದಂತೆ ತಾಲೂಕು ಮಟ್ಟದ ಅನೇಕ ಅಧಿಕಾರಿಗಳು ಹಾಜರಿದ್ದರು.

Share this article