ಲಕ್ಷ್ಮೇಶ್ವರ: ಪಟ್ಟಣದ ಅನೇಕ ಕಡೆ ಹುಚ್ಚು ನಾಯಿ ಹಾವಳಿಗೆ ಜನರು ಬೆಚ್ಚಿ ಬಿದ್ದಿದ್ದಾರೆ. ಚಿಕ್ಕಮಕ್ಕಳು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ ಹುಚ್ಚು ನಾಯಿ..!
ಪಟ್ಟಣದ ಬಳಗಾನೂರ ಓಣಿ, ಪಾದಗಟ್ಟಿ, ಪೇಠಬಣ, ಬಸಾಪುರ ಓಣಿ, ಸೊಪ್ಪಿನಕೇರಿ ಓಣಿ ಹಾಗೂ ಹಳ್ಳಿಕೇರಿ ಸೇರಿದಂತೆ ಅನೇಕ ಕಡೆ ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದ ಘಟನೆ ಗುರುವಾರ ಸಂಜೆ ನಡೆದಿದೆ.ಪಟ್ಟಣದಲ್ಲಿ ಮಕ್ಕಳ ತುಟಿ ಹಾಗೂ ಮುಖಗಳಿಗೆ ಕಚ್ಚಿ ಗಾಯಗೊಳಿಸಿದೆ. ಅಲ್ಲದೆ ಯುವಕರಿಗೂ ಕೂಡಾ ಮನ ಬಂದಂತೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದೆ. ಹುಚ್ಚು ನಾಯಿ ದಾಳಿಗೆ ಒಳಗಾದ ಜನರು ಪಟ್ಟಣದ ಸರ್ಕಾರಿ ಆಸ್ಪತ್ರೆ ಹಾಗೂ ಮಲ್ಲಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಹಲವರು ಮನೆಗೆ ತೆರಳಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಹುಬ್ಬಳ್ಳಿ ಕಿಮ್ಸ್ ಹಾಗೂ ಗದಗ ಜೇಮ್ಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಸಾಪುರ ಓಣಿಯ ಶಿವರಾಜ ಬಳಗಾನೂರ 3ನೇ ತರಗತಿಯಲ್ಲಿ ಓದುತ್ತಿರುವ ಬಾಲಕನ ತುಟಿಗೆ ನಾಯಿ ಕಚ್ಚಿದ್ದು, 6 ಹೊಲಿಗೆಗಳು ಬಿದ್ದಿದ್ದು. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ದಾಖಲೆ ಮಾಡಲಾಗಿದೆ.ಬಸಾಪುರ ಓಣಿಯ ಆದ್ಯಾ ಪಾಟೀಲ್ ಎಂಬ 2 ವರ್ಷದ ಬಾಲಕಿಗೆ ಕಿವಿ ಕಚ್ಚಿದ್ದು ಗಂಭೀರ ಗಾಯವಾಗಿದೆ. ಅದೇ ತರಹ ಪಟ್ಟಣದ ಅನೇಕರಿಗೆ ಗದ್ದ. ಕುತ್ತಿಗೆ, ಕೈ, ಕಿವಿ, ಹೀಗೆ ನಾನಾ ಕಡೆ ನಾಯಿ ಕಚ್ಚಿದೆ. ಅಲ್ಲದೆ ಹಳ್ಳದಕೇರಿಯ ಕೆಲ ಜಾನುವಾರಗಳಿಗೆ ಹಾಗೂ ಸಿಕ್ಕ ಸಿಕ್ಕ ನಾಯಿಗಳಿಗೂ ಕಚ್ಚಿದೆ ಘಟನೆಯಿಂದ ಪಟ್ಟಣದಲ್ಲಿ ಅನೇಕರು ಭಯಭೀತರಾಗಿದ್ದಾರೆ. ಜನರು ಮನೆಯಿಂದ ಹೊರಗಡೆ ಬಾರದೆ ಭಯದಲ್ಲಿ ಕಾಲ ಕಳೆಯುವಂತಾಗಿದೆ.
ಹುಚ್ಚು ನಾಯಿ ಜನರನ್ನು ಕಚ್ಚುತ್ತಿರುವ ಸುದ್ದಿ ತಿಳಿದ ತಕ್ಷಣ ಪಟ್ಟಣದ ಪುರಸಭೆ ಆರೋಗ್ಯ ನಿರೀಕ್ಷಕ ಮುಂಜುನಾಥ ಮುದಗಲ್ ಸೇರಿದಂತೆ ಪುರಸಭೆ ಪೌರ ಕಾರ್ಮಿಕರು ಹುಚ್ಚು ಹಿಡಿದ ನಾಯಿಯನ್ನು ಹಿಡಿಯಲು ಕಾರ್ಯಾಚರಣೆ ಮಾಡಿದರು. ಆದರೆ ಹುಚ್ಚು ನಾಯಿ ಸಿಗದೇ ವಾಪಸ್ ಆಗಿದ್ದಾರೆ. ಆದರೆ ಶುಕ್ರವಾರ ಬೆಳಗ್ಗೆ ಹುಚ್ಚು ನಾಯಿ ಸತ್ತು ಬಿದ್ದಿರುವ ವಿಷಯ ತಿಳಿದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಜನರು ಮೊಬೈಲ್ ಗೆ ಕರೆ ಮಾಡಿ ದೂರ ಹೇಳಿದಾಗ ಕಾರ್ಮಿಕರನ್ನು ಕರೆದುಕೊಂಡು ಹುಚ್ಚು ನಾಯಿ ಹಿಡಿಯಲು ಪಟ್ಟಣದ ತುಂಬೆಲ್ಲ ಹುಡಕಾಡಿದ್ದು.ಬೆಳಗ್ಗೆ ನಾಯಿ ಸತ್ತು ಬಿದ್ದಿತ್ತು. ಕಾರ್ಮಿಕರು ಊರಾಚೆ ತೆಗೆದುಕೊಂಡು ಹೋಗಿ ಬಿಸಾಡಿ ಬಂದಿದ್ದಾರೆ ಎಂದು ಪುರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ಹೇಳಿದರು.
ಮನೆ ಮುಂದೆ ಆಡುತ್ತಿದ್ದ ಮೊಮ್ಮಗನಿಗೆ ನಾಯಿ ಬಂದು ಏಕಾಏಕಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ.ನಮ್ಮ ಹುಡುಗನಿಗೆ ಗಂಭೀರ ಗಾಯವಾಗಿದೆ. ತುಟಿಗಳು ಹರಿದು ಹೋಗಿದ್ದರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಪ್ಪಮ್ಮ ಬಳಗಾನೂರ ಹೇಳಿದ್ದಾರೆ.