ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ನಿಧಾನವಾಗಿ ಚಳಿ ಹೆಚ್ಚಾಗುತ್ತಿದೆ. ಇಬ್ಬನಿಯಿಂದಾಗಿ ಹೊರಗೆ ತಣ್ಣಗೆ ಮೈ ನಡುಗಿಸುವ ಚಳಿ. ನಗರ ಮತ್ತು ಹೊರವಲಯದಾದ್ಯಂತ ಮಂಜು ದಟ್ಟವಾಗಿ ಹರಡುತ್ತಿದೆ. ಬೆಳಗ್ಗೆ 9 ಗಂಟೆಯಾದರೂ ಎದುರಿಗಿರುವವರ ಮುಖ, ವಾಹನ ಕಾಣಿಸದಷ್ಟು ಮಂಜು ಆವರಿಸುತ್ತಿದೆ.ನಗರದ ಸುತ್ತಮುತ್ತ ಕಳೆದ ನಾಲ್ಕೈದು ದಿನಗಳಿಂದ ವಾತಾವರಣದಲ್ಲಿ ಏರುಪೇರಾಗಿ ಬೆಳಗ್ಗೆ ಎಂಟಾದರೂ ಆವರಿಸಿದ ಮಂಜು, ಚುಮು ಚುಮು ಚಳಿ ಜನರನ್ನು ಥರಗುಟ್ಟಿಸುತ್ತಿದೆ.
ಮಂಜಿನಿಂದ ಆವರಿಸಿದ ಬೆಟ್ಟಸೂರ್ಯ ಮುಳಗುತ್ತಿದ್ದಂತೆ ಆರಂಭವಾಗುವ ತಣ್ಣನೆಯ ಚಳಿ ರಾತ್ರಿ ಪೂರಾ ವಾತಾವರಣದೊಂದಿಗೆ ಬೆರೆತು ಬೆಳಗ್ಗೆ 9 ಗಂಟೆಯಾದರೂ ಮಂಜು ಆವರಿಸಿಕೊಂಡು ಜನರನ್ನು ಮನೆಯಿಂದ ಹೊರಬಾರದಂತೆ ಮಾಡಿದೆ. ಕಳೆದ ಕೆಲ ದಿನಗಳಿಂದಲೂ ನಗರದ ಸುತ್ತಮುತ್ತ ಈ ರೀತಿ ವಾತಾವಣವಿದ್ದು, ನಂದಿಗಿರಿ, ಸ್ಕಂದಗಿರಿ, ಗೋರ್ವಧನಗಿರಿ, ಚನ್ನಗಿರಿ, ಜಾಲಾರಿ ನರಸಿಂಹಸ್ವಾಮಿ ಬೆಟ್ಟ ಸಂಪೂರ್ಣವಾಗಿ ಮಂಜಿನಿಂದ ಮುಚ್ಚಿ ಹೋಗಿ ಜನರಿಗೆ ಮಲೆನಾಡಿನ ಅನುಭವ ನೀಡುತ್ತಿದೆ.
ಮಂಜಿನ ಎಫೆಕ್ಟ್‌ನಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದ್ದು, ವಾಹನ ಸವಾರರು ತೀವ್ರ ಪರದಾಡುವಂತಾಗಿದೆ. ದಟ್ಟ ಮಂಜಿನಿಂದಾಗಿ ಒಂಬತ್ತು ಗಂಟೆಯಾದರೂ ವಾಹನಗಳು ಹೆಡ್‌ಲೈಟ್ ಹಾಕಿಕೊಂಡು ಸಂಚರಿಸಬೇಕಾದ ಸ್ಥಿತಿ ಉಂಟಾಗಿದೆ. ನಿತ್ಯ ಕೆಲಸಕ್ಕೆ ಹೋಗುವ ರೈತರು, ಪರಸ್ಥಳಕ್ಕೆ ಕೆಲಸಕ್ಕೆ ತರಳುವವರು ಮತ್ತು ಶಾಲಾ-ಕಾಲೇಜಿಗೆ ತೆರಳುವವರು ಅನಿವಾರ್ಯವಾಗಿ ಮನೆಯಿಂದ ಹೊರಬುವಂತಾಗಿದೆ.ರಸ್ತೆ ಬದಿ ಬೆಂಕಿ ಕಾಯಿಸುವ ಗುಂಪು ಚುಮು ಚುಮು ಚಳಿಯಿಂದ ತಪ್ಪಿಸಿಕೊಳ್ಳಲು ಜನತೆ ಬೆಂಕಿ ಕಾಯಿಸಲು ಮುಂದಾಗುತ್ತಿದ್ದು, ಕೆಲಸ ಕಾರ್ಯಗಳಿಗೆ ಬೆಳಗ್ಗೆ ಹೊರಡುವ ಜನತೆ ಬಸ್ ನಿಲ್ದಾಣಗಳಲ್ಲಿ, ಟೀ ಶಾಪ್ ಎದುರು. ಹೀಗೆ ಅಲ್ಲಲ್ಲಿ ಗುಂಪಾಗಿ ನಿಂತು ಬೆಂಕಿ ಕಾಯಿಸಿಕೊಳ್ಳುತ್ತಿದ್ದಾರೆ. ಬಸ್ ನಿಲ್ದಾಣ, ರೈಲ್ವೇನಿಲ್ದಾಣ ಮತ್ತಿತರ ಕಡೆ ಚಳಿಗೆ ಮುದುಡಿ ಮಲಗಿರುವ ಜನತೆ ಎಲ್ಲೆಡೆ ಕಂಡು ಬರುತ್ತಿದ್ದರು. ಚಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಜನರು ಸ್ವೆಟರ್ ಮೊರೆ ಹೋಗುತ್ತಿದ್ದಾರೆ.