ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಅವರು ಕ್ರಾಂತಿಕಾರ ನಿಲುವು ಮತ್ತು ಅಭಿವೃದ್ಧಿಯ ಒಲವು ಎರಡನ್ನೂ ಮೈಗೂಡಿಸಿಕೊಂಡಿದ್ದ ಅಪ್ರತಿಮ ನಾಯಕ, ಹೋರಾಟಗಾರರು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 38 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಹಸಿರು ಕ್ರಾಂತಿಗೆ ನಾಂದಿದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶದಲ್ಲಿ ಹತ್ತು ಹಲವು ಗಂಭೀರ ಸಮಸ್ಯೆಗಳಿದ್ದವು. ಅನಕ್ಷರತೆ, ಬಡತನ, ಅಪೌಷ್ಟಿಕತೆ, ಆಹಾರದ ಕೊರತೆ ಮತ್ತಿತರ ಸಮಸ್ಯೆಗಳು ಸವಾಲುಗಳಾಗಿದ್ದವು. ಅಂತಹ ಸಂದರ್ಭದಲ್ಲಿ ಸವಾಲುಗಳನ್ನು ದಿಟ್ಟವಾಗಿ ಮೆಟ್ಟಿ ನಿಂತು ಅಭಿವೃದ್ಧಿಗೆ ನಾಂದಿ ಹಾಡಿದ ಮಹಾನ್ ನಾಯಕರಲ್ಲಿ ಡಾ. ಬಾಬು ಜಗಜೀವನರಾಂ ಕೂಡಾ ಒಬ್ಬರು. ಆಹಾರದ ಸಮಸ್ಯೆ ಅತ್ಯಂತ ಗಂಭೀರವಾಗಿದ್ದಾಗ ದೇಶದ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಹಲವು ಮಹತ್ವದ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಹಸಿರು ಕ್ರಾಂತಿಗೆ ನಾಂದಿ ಹಾಡಿದರು ಎಂದರು.
ಗಿರಣಿ ಮಾಲೀಕರ ವಿರುದ್ಧ ಹೋರಾಟಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಎಲ್. ನಾಗರಾಜು ಉಪನ್ಯಾಸ ನೀಡಿ, ಉಪ ಪ್ರಧಾನ ಮಂತ್ರಿಯಾಗಿ ಸಮಾಜದ ಅಭಿವೃದ್ಧಿಗಾಗಿ ಬಾಬು ಜಗಜೀವನರಾಂ ಅವರು ಹೆಚ್ಚು ಶ್ರಮಿಸಿದ್ದಾರೆ. ಬನಾರಸ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ ಓದುವ ಸಂದರ್ಭದಲ್ಲಿ ಅಲ್ಲಿ ಕೆಲಸ ಮಾಡುವವರಿಂದ ಶೋಷಣೆಗೆ ಒಳಗಾದ ದಲಿತರನ್ನು ಕಂಡು ಅಲ್ಲಿರುವ ಎಲ್ಲಾ ದಲಿತ ಕಾರ್ಮಿಕರನ್ನು ಒಗ್ಗೂಡಿಸಿ ಗಿರಣಿ ಮಾಲಿಕರ ವಿರುದ್ಧ ದೊಡ್ಡದಾದ ಬೃಹತ್ ಪ್ರತಿಭಟನೆಯನ್ನು ನಡೆಸಿ ಜಯ ಸಾಧಿಸಿದರು ಎಂದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಅಪರ ಡೀಸಿ ಡಾ.ಎನ್. ಭಾಸ್ಕರ್, ಹೆಚ್ಚುವರಿ ಎಸ್ಪಿ ಆರ್.ಐ ಖಾಸಿಂ, ಎಸಿ ಡಿ.ಎಚ್.ಅಶ್ವಿನ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದ ರೆಡ್ಡಿ, ಸಹಾಯಕ ನಿರ್ದೇಶಕರಾದ ಶೇಷಾದ್ರಿ, ಸಮುದಾಯದ ಮುಖಂಡರು ಇದ್ದರು.