ಸ್ವಚ್ಛತೆಗಾಗಿ ಕಾಯುತ್ತಿವೆ ಹಳ್ಳಗಳು

KannadaprabhaNewsNetwork |  
Published : Mar 19, 2024, 12:53 AM IST
ಪೋಟೊ17ಕೆಎಸಟಿ1: ಕುಷ್ಟಗಿ ತಾಲೂಕಿನ ದೋಟಿಹಾಳ ವ್ಯಾಪ್ತಿಗೆ ಬರುವ ಹಳ್ಳದಲ್ಲಿ ಜಾಲಿಗಿಡ ಇನ್ನಿತರ ಗಿಡಗಂಟಿಗಳು ಬೆಳೆದು ನಿಂತಿರುವದು.ಪೋಟೊ17ಕೆಎಸಟಿ1.1: ಕುಷ್ಟಗಿ ತಾಲೂಕಿನ ಕೇಸೂರು ವ್ಯಾಪ್ತಿಗೆ ಬರುವ ಹಳ್ಳದಲ್ಲಿ ಜಾಲಿಗಿಡ ಇನ್ನಿತರ ಗಿಡಗಂಟಿಗಳು ಬೆಳೆದು ನೀರು ನಿಂತಿರುವದು. | Kannada Prabha

ಸಾರಾಂಶ

ರೈತರ ಜೀವನಾಡಿ ಎಂದೇ ಕರೆಯಲ್ಪಡುವ ತಾಲೂಕಿನ ಹಳ್ಳಗಳು ಸ್ವಚ್ಛತೆಗಾಗಿ ಕಾಯುತ್ತಿವೆ.

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ । ಒತ್ತುವರಿ ತೆರವಿಗೆ ಆಗ್ರಹ

ಸಮರ್ಪಕ ಅನುಷ್ಠಾನಗೊಂಡಿಲ್ಲ ನರೇಗಾ ಯೋಜನೆಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭವಾರ್ತೆ ಕುಷ್ಟಗಿ

ರೈತರ ಜೀವನಾಡಿ ಎಂದೇ ಕರೆಯಲ್ಪಡುವ ತಾಲೂಕಿನ ಹಳ್ಳಗಳು ಸ್ವಚ್ಛತೆಗಾಗಿ ಕಾಯುತ್ತಿವೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಗಿಡ, ಕಸಕಡ್ಡಿ, ಕಲ್ಲು, ಮುಳ್ಳುಗಳು ತುಂಬಿಕೊಂಡು ಹಾಳಾಗುತ್ತಿವೆ.

ತಾಲೂಕಿನ ದೋಟಿಹಾಳ, ಕೇಸೂರು, ಬಿಜಕಲ್, ಬಳೂಟಗಿ, ತೆಗ್ಗಿಹಾಳ, ಬನ್ನಟ್ಟಿ, ಮುದೆನೂರು ಸೇರಿದಂತೆ ಹತ್ತಾರು ಹಳ್ಳಗಳಲ್ಲಿ ಜಾಲಿಗಿಡ ಮರಗಳು, ಹುಲ್ಲು, ಕಸ, ಸೇರಿ ನಾನಾ ಬಗೆಯ ಗಿಡ-ಗಂಟಿಗಳು ಬೆಳೆದು ಹಳ್ಳಗಳು ಸಂಪೂರ್ಣ ಹಳ್ಳದ ರೂಪವನ್ನೇ ಕಳೆದುಕೊಂಡಿವೆ. ಇದನ್ನು ಸ್ವಚ್ಛಗೊಳಿಸಿ ನೀರನ್ನು ಉಪಯೋಗ ಮಾಡಲು ಅನುಕೂಲ ಮಾಡಿಕೊಡಬೇಕು ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ನಿಡಶೇಸಿ ಕೆರೆಯಿಂದ ಹರಿದು ಬರುವ ಹಳ್ಳವು ಬಿಜಕಲ್‌ದಿಂದ ಬಳೂಟಗಿ ಮಾರ್ಗವಾಗಿ ಮುದೇನೂರು ಹಳ್ಳಕ್ಕೆ ಸೇರುತ್ತದೆ. ಬನ್ನಟ್ಟಿ ಹಳ್ಳಕ್ಕೆ ಟೆಂಗುಂಟಿ, ತೆಗ್ಗಿಹಾಳ, ದೋಟಿಹಾಳ, ಜಾಲಿಹಾಳ, ಟಕ್ಕಳಕಿ ಭಾಗದ ಒಟ್ಟು ಸುಮಾರು ಹತ್ತು ಹಳ್ಳಗಳು ಒಂದೇ ಕಡೆ ಸೇರುತ್ತವೆ. ಕುಷ್ಟಗಿ ತಾಲೂಕಿನಲ್ಲೇ ಇವುಗಳನ್ನು ದೊಡ್ಡ ಹಳ್ಳಗಳು ಎಂದು ಕರೆಯಲಾಗುತ್ತದೆ.

ಹಳ್ಳಗಳ ಮಧ್ಯದ ಭಾಗದಲ್ಲಿ ಜಾಲಿ ಮರಗಳು, ಹುಲ್ಲು ಬೆಳೆದಿದೆ. ಅಲ್ಲದೆ ಅಕ್ರಮ ಮರಳು ದಂಧೆಗೆ ನಲುಗಿರುವ ಹಳ್ಳಗಳಲ್ಲಿ ಬೃಹತ್ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿವೆ. ಸುಮಾರು 50-60 ಮೀಟರ್ ಅಗಲದ ಹಳ್ಳಗಳು ಈಗ ಮಾರುದ್ದವಷ್ಟೆ ಮಾತ್ರ ಉಳಿದಿವೆ. ಕೆಲ ರೈತರು ಹಳ್ಳದ ಜಾಗ ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ಮತ್ತು ಮರಳು ದಂಧೆಗೆ ಬಳಸಿಕೊಳ್ಳುತ್ತಿರುವುದರಿಂದ ಹಳ್ಳದ ನಕ್ಷೆಯೇ ಸಂಪೂರ್ಣ ಬದಲಾಗಿದೆ. ಈ ಹಿಂದೆ ಬೇಸಿಗೆ ಕಾಲದಲ್ಲಿ ಹತ್ತಾರು ಗ್ರಾಮಗಳು ಹಳ್ಳದ ನೀರನ್ನೇ ನಂಬಿ ಜೀವನ ಸಾಗಿಸುತ್ತಿದ್ದವು. ಎತ್ತು, ಎಮ್ಮೆ, ಆಕಳು, ಕುರಿ, ಮೇಕೆಗಳಿಗೆ ಇಲ್ಲಿ ನೀರು ಕುಡಿಸಲಾಗುತ್ತಿತ್ತು. ಆದರೆ ಕಳೆದ ಸುಮಾರು 10 ವರ್ಷಗಳಿಂದ ಹಳ್ಳದಲ್ಲಿ ಅಂತರ್ಜಲಮಟ್ಟ ಕುಸಿದು ಹನಿ ನೀರಿಗಾಗಿ ಪರದಾಡುವಂತಾಗಿದೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಹಳ್ಳ, ಕೆರೆ ನಿರ್ಮಾಣ, ನಾಲಾ ಹೂಳೆತ್ತುವುದು, ಹೊಲದಲ್ಲಿ ಬದು ನಿರ್ಮಾಣ, ಕೃಷಿಹೊಂಡ, ರಸ್ತೆ ನಿರ್ಮಾಣ ಸೇರಿ ನಾನಾ ಅಭಿವೃದ್ಧಿ ಕಾರ್ಯ ಜಾರಿಯಲ್ಲಿದ್ದರೂ ಯಾವೊಬ್ಬ ಅಧಿಕಾರಿಯೂ ಹಳ್ಳದ ಸ್ವಚ್ಛತೆಯ ಕಡೆ ಗಮನ ಹರಿಸಿಲ್ಲ. ಹೀಗಾಗಿ ಈ ಭಾಗದಲ್ಲಿ ನರೇಗಾ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹಳ್ಳಗಳನ್ನು ಸ್ವಚ್ಛತೆಗೊಳಿಸುವ ಜತೆಗೆ ಅಗತ್ಯ ಇರುವ ಕಡೆಗಳಲ್ಲಿ ಚೆಕ್‌ ಡ್ಯಾಂ ನಿರ್ಮಿಸಬೇಕು. ಒತ್ತುವರಿಯಾಗಿರುವ ಹಳ್ಳದ ಜಾಗ ತೆರವುಗೊಳಿಸಬೇಕು ಎನ್ನುವ ಕೂಗು ಇದೀಗ ತಾಲೂಕಿನ ರೈತರು, ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ