ಮಂಡಲ ಯುವಮೋರ್ಚ ಅಧ್ಯಕ್ಷನ ಕಾಲರ್‌ ಹಿಡಿದ ಠಾಣಾಧಿಕಾರಿ, ಕಾರ್ಯಕರ್ತರ ಆಕ್ರೋಶ

KannadaprabhaNewsNetwork |  
Published : Jun 21, 2024, 01:02 AM IST
prathibatane | Kannada Prabha

ಸಾರಾಂಶ

ಬಿಜೆಪಿ ಮಂಗಳೂರು ಮಂಡಲದ ಯುವಮೋರ್ಚ ಅಧ್ಯಕ್ಷ ಮುರಳಿ ಕೊಣಾಜೆ ಅವರನ್ನು ಉಳ್ಳಾಲ ಠಾಣಾಧಿಕಾರಿ ಎಚ್.ಎನ್. ಬಾಲಕೃಷ್ಣ ಹಿಡಿದು ಎಳೆದಾಡಿದ ಪರಿಣಾಮ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಗಳೂರು ಮಂಡಲ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ಪೊಲೀಸ್ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ತಡೆಗೆ ಮುಂದಾದ ಬಿಜೆಪಿ ಮಂಗಳೂರು ಮಂಡಲದ ಯುವಮೋರ್ಚ ಅಧ್ಯಕ್ಷ ಮುರಳಿ ಕೊಣಾಜೆ ಅವರನ್ನು ಉಳ್ಳಾಲ ಠಾಣಾಧಿಕಾರಿ ಎಚ್.ಎನ್. ಬಾಲಕೃಷ್ಣ ಹಿಡಿದು ಎಳೆದಾಡಿದ ಪರಿಣಾಮ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವುದನ್ನು ಖಂಡಿಸಿ ಬಿಜೆಪಿ ಮಂಗಳೂರು ಮಂಡಲದ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ಫ್ಲೈಓವರ್ ನಡಿ ಗುರುವಾರ ರಸ್ತೆತಡೆ ನಡೆಸಲಾಗಿತ್ತು. ಸಭೆಯಲ್ಲಿ ಬಿಜೆಪಿ ಮುಖಂಡರಾದ ಮಾಜಿ ಶಾಸಕ ಜಯರಾಮ ಶೆಟ್ಟಿ, ಸಂತೋಷ್ ರೈ ಬೋಳಿಯಾರ್, ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ದಿನೇಶ್ ಅಮ್ಟೂರು, ಮಹೇಶ್ ಜೋಗಿ, ಮಂಡಲ ಪ್ರಭಾರ ಅಧ್ಯಕ್ಷ ಹೇಮಂತ್ ಶೆಟ್ಟಿ ದೇರಳಕಟ್ಟೆ, ಧನಲಕ್ಷ್ಮೀ ಗಟ್ಟಿ ಸೇರಿದಂತೆ ಮಂಗಳೂರು ಮಂಡಲದ ಮುಖಂಡರು ಪಾಲ್ಗೊಂಡಿದ್ದರು.

ಮಾತಿನ ಚಕಮಕಿ: ನಂತರ ಬಿಜೆಪಿ ಕಾರ್ಯಕರ್ತರು ಸಾಂಕೇತಿಕವಾಗಿ ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾದಾಗ ಸ್ಥಳದಲ್ಲಿದ್ದ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ತಡೆಹಿಡಿದಿದ್ದಾರೆ. ಹೆದ್ದಾರಿ ತಡೆದಲ್ಲಿ ಕಾನೂನು ಕ್ರಮಕೈಗೊಳ್ಳಲು ಮೇಲಧಿಕಾರಿಗಳ ಆದೇಶವಿರುವುದಾಗಿ ಹೇಳಿದ್ದಾರೆ. ಈ ನಡುವೆ ಮಂಡಲ ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ಮುರಳಿ ಕೊಣಾಜೆ ಹೆದ್ದಾರಿ ತಡೆಗೆ ರಸ್ತೆಗೆ ಇಳಿದಿದ್ದು, ಅವರ ಅಂಗಿಯ ಕಾಲರ್‌ ಪಟ್ಟಿ ಹಿಡಿದುಕೊಂಡು ಠಾಣಾಧಿಕಾರಿ ಬಾಲಕೃಷ್ಣ ಹೆದ್ದಾರಿಯಿಂದ ಬದಿಗೆ ಕರೆತಂದಿದ್ದಾರೆ. ಇದು ಯುವಮೋರ್ಚಾ ಕಾರ್ಯಕರ್ತರ ಹಾಗೂ ಠಾಣಾಧಿಕಾರಿ ವಿರುದ್ಧ ವಾಗ್ವಾದಕ್ಕೆ ಕಾರಣವಾಯಿತು.

ಮಧ್ಯಪ್ರವೇಶಿಸಿದ ಮಂಗಳೂರು ದಕ್ಷಿಣ ಉಪವಿಭಾಗದ ಪ್ರಭಾರ ಎಸಿಪಿ ರವೀಶ್ ನಾಯ್ಕ್ ಅವರು ಬಿಜೆಪಿ ಪ್ರಮುಖರಲ್ಲಿ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಯುವಮೋರ್ಚಾ ಮುಖಂಡರಿಗೇ ಈ ಗತಿ ಆದರೆ ಇನ್ನು ಕಾರ್ಯಕರ್ತರ ಪಾಡೇನು ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ