ಹಳಿಯಾಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲು

KannadaprabhaNewsNetwork | Published : Aug 7, 2024 1:02 AM

ಸಾರಾಂಶ

ಹಳಿಯಾಳ ಪುರಸಭೆಯಲ್ಲಿ ಕಾಂಗ್ರೆಸ್ ಬಹುಮತವನ್ನು ಹೊಂದಿದ್ದು, ಕಳೆದ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎ ಮೀಸಲಾತಿಯಲ್ಲಿ ಅಜರುದ್ದಿನ್ ಬಸರಿಕಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿಯಲ್ಲಿ ಸುವರ್ಣ ಆಯ್ಕೆಯಾಗಿದ್ದರು.

ಹಳಿಯಾಳ: ಪುರಸಭೆಯ ಇನ್ನುಳಿದ ಅವಧಿಗೆ ಅಧ್ಯಕ್ಷ -ಉಪಾಧ್ಯಕ್ಷರು ಆಗುವರು ಯಾರು? ಹೀಗೊಂದು ಪ್ರಶ್ನೆ ಪಟ್ಟಣದಲ್ಲಿ ಚರ್ಚೆಗೆ ಗ್ರಾಸವಾಗಿದೆ!

ಸದ್ಯ ಘೋಷಿತ ಮೀಸಲಾತಿಯ ಅನ್ವಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವು ಮಹಿಳೆಯರಿಗೆ ಮೀಲಸಾಗಿವೆ. ಆಕಾಂಕ್ಷಿತ ಸದಸ್ಯೆಯರೆಲ್ಲರೂ ದೇಶಪಾಂಡೆ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಹಳಿಯಾಳ ಪುರಸಭೆಯಲ್ಲಿ ಕಾಂಗ್ರೆಸ್ ಬಹುಮತವನ್ನು ಹೊಂದಿದ್ದು, ಕಳೆದ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎ ಮೀಸಲಾತಿಯಲ್ಲಿ ಅಜರುದ್ದಿನ್ ಬಸರಿಕಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿಯಲ್ಲಿ ಸುವರ್ಣ ಆಯ್ಕೆಯಾಗಿದ್ದರು. ಈಗ ಬಾಕಿ ಆಡಳಿತದ ಅವಧಿಗೆ ಮೀಸಲಾತಿ ಘೋಷಣೆಯಾಗಿದ್ದು, ಈ ಬಾರಿ ಎರಡೂ ಹುದ್ದೆಗಳು ಮಹಿಳೆಯರಿಗೆ ಮೀಸಲಿವೆ.ಇವರಿಗಿದೆ ಅವಕಾಶ: ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಘೋಷಣೆಯಾಗಿದ್ದರಿಂದ ಕಾಂಗ್ರೆಸ್ ಸದಸ್ಯೆಯರಾದ ನುಸ್ರತಜಹಾಂ ಬಸ್ಸಾಪುರ, ದ್ರೌಪದಿ ಅಗಸರ, ಸುವರ್ಣ ಹಾಗೂ ಲಕ್ಷ್ಮೀ ವಡ್ಡರ, ಶಮೀಮಬಾನು ಜಂಬೂವಾಲೆ ಇದ್ದಾರೆ. ಇವರಲ್ಲಿ ಉಪಾಧ್ಯಕ್ಷ ಎಸ್‌ಸಿ ಮಹಿಳಾ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿರುವ ದೇಶಪಾಂಡೆ ನಿಷ್ಠಾವಂತ ಸದಸ್ಯೆ ಲಕ್ಷ್ಮೀ ವಡ್ಡರ ಹೆಸರು ಕೇಳಿಬರುತ್ತಿದೆ. ಆದರೆ ಅಧ್ಯಕ್ಷ ಹುದ್ದೆ ಯಾರಿಗೆ ಎಂಬುದು ಎಲ್ಲರನ್ನು ಕಾಡುತ್ತಿದೆ.ದೇಶಪಾಂಡೆ ವಿರುದ್ಧ ಪ್ರಚಾರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಮಹಿಳಾ ಸದಸ್ಯರು ದೇಶಪಾಂಡೆ ವಿರುದ್ಧ ಸ್ಪರ್ಧಿಸಿದ್ದ ವಿಧಾನಪರಿಷತ್‌ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರ ಪರವಾಗಿ ಪ್ರಚಾರ ಮಾಡಿದರು. ತಮ್ಮ ನಿಷ್ಠತೆಯನ್ನು ಘೋಟ್ನೇಕರ ಅವರ ಪರ ಸಾರಲು ದೇಶಪಾಂಡೆ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದರು. ಯಾರಿಗೆ ಅವಕಾಶ?: ಕಾಂಗ್ರೆಸ್ ಸದಸ್ಯೆಯರಲ್ಲಿ ಬಹುತೆಕರು ಘೋಟ್ನೇಕರ ಅವರಿಗೆ ನಿಷ್ಠೆಯನ್ನು ತೋರಿದವರಾಗಿದ್ದಾರೆ. ಹೀಗಿರುವಾಗ ಹಿರಿಯ ಅನುಭವಿ ರಾಜಕಾರಣಿ ದೇಶಪಾಂಡೆಯವರು ತನ್ನ ಎದುರಾಳಿ ಪರವಾಗಿರುವ ಪುರಸಭಾ ಸದಸ್ಯೆಯರಿಗೆ ಹುದ್ದೆಯನ್ನು ನೀಡುವರೇ ಎಂಬುದು ಬಹು ಚರ್ಚಿತ ವಿಷಯವಾಗಿದೆ. ಆ. 12ರಂದು ಶಾಸಕ ಆರ್.ವಿ. ದೇಶಪಾಂಡೆ ಅವರು ಹಳಿಯಾಳಕ್ಕೆ ಆಗಮಿಸುವರು. ಅವರ ಆಗಮನವನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ನೈತಿಕತೆ ಇಲ್ಲ: ಆರ್.ವಿ ದೇಶಪಾಂಡೆ ಅವರು ಈ ಸದಸ್ಯೆಯರಿಗೆ ಟಿಕೆಟ್ ನೀಡಿ, ಸ್ವತಃ ಬೀದಿಗಿಳಿದು ಮನೆ ಮನೆಗೆ ತೆರಳಿ ಪ್ರಚಾರ ಮಾಡಿ ಗೆಲ್ಲಿಸಿ ತಂದರು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಈ ಮಹಿಳಾ ಸದಸ್ಯೆಯರು ದೇಶಪಾಂಡೆ ಅವರ ವಿರುದ್ಧ ಪ್ರಚಾರ ಮಾಡಿದರು. ಹೈಕಮಾಂಡ್ ಅವರನ್ನು ನೂರಾರು ಬಾರಿ ಕರೆ ಕಳಿಸಿದರೂ ಅವರು ಬಂದಿಲ್ಲ. ಹೀಗಿರುವಾಗ ಇವರು ಯಾವ ಮುಖ ಎತ್ತಿಕೊಂಡು ಹುದ್ದೆ ಕೇಳಲು ಬರುತ್ತಾರೆ? ಇವರಿಗೆ ನೈತಿಕತೆ ಉಳಿದಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ಅಜರುದ್ದಿನ್ ಬಸರಿಕಟ್ಟಿ ತಿಳಿಸಿದರು.

ಭಟ್ಕಳ ಪುರಸಭೆ: ಇಲ್ಲದ ಎಸ್ಸಿ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲು!

ಭಟ್ಕಳ: ಇಲ್ಲಿನ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ ಮೀಸಲಾತಿ ಬಂದಿದೆ.ಆದರೆ, ಪುರಸಭೆಯಲ್ಲಿ ಪರಿಶಿಷ್ಟ ಜಾತಿ ಮಹಿಳಾ ಸದಸ್ಯರಿಲ್ಲ. ಹೀಗಾಗಿ ಮೀಸಲಾತಿ ತಿದ್ದುಪಡಿ ಆಗಬೇಕಿದ್ದು, ಅಲ್ಲಿಯ ತನಕ ಕಾಯಬೇಕಾದ ಅನಿವಾರ್ಯತೆ ಬಂದಿದೆ. ಪುರಸಭೆಯಲ್ಲಿ ಪರಿಶಿಷ್ಟ ಜಾತಿ ಮಹಿಳಾ ಸದಸ್ಯರಿಲ್ಲದಿದ್ದರೂ ಅಧ್ಯಕ್ಷ ಗಾದಿಗೆ ಈ ಮೀಸಲಾತಿ ಬಂದಿರುವುದು ಸದಸ್ಯರಲ್ಲಿ ಅಚ್ಚರಿ ತಂದಿದೆ.ಭಟ್ಕಳ ಪುರಸಭೆಯಲ್ಲಿ ಪರಿಶಿಷ್ಟ ಜಾತಿ ಮಹಿಳಾ ಸದಸ್ಯರಿಲ್ಲದ ಕಾರಣ ಪುರಸಭೆಯಿಂದ ಮೀಸಲಾತಿ ಸುತ್ತೋಲೆ ತಿದ್ದುಪಡಿಗಾಗಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು, ಇದು ತಿದ್ದುಪಡಿಯಾಗಿ ಬರುವ ತನಕ ಪುರಸಭೆ ಸದಸ್ಯರ ಅವಧಿ ಮುಗಿಯುವ ಆತಂಕ ಸದಸ್ಯರದ್ದಾಗಿದೆ.

ಈಗಾಗಲೇ ಕಳೆದ ಒಂದೂವರೆ ವರ್ಷದಿಂದ ಪುರಸಭೆಯಲ್ಲಿ ಅಧ್ಯಕ್ಷರು- ಉಪಾಧ್ಯಕ್ಷರ ಆಡಳಿತವಿಲ್ಲ. ಆದಷ್ಟು ಬೇಗ ಮೀಸಲಾತಿ ತಿದ್ದುಪಡಿ ಆಗಿ ಬಂದರೆ ಅಭಿವೃದ್ಧಿಗೆ ಅನುಕೂಲವಾಗುತ್ತಿತ್ತು ಎನ್ನುವುದು ಸದಸ್ಯರ ಅಭಿಪ್ರಾಯವಾಗಿದೆ.ಅಧಿಕಾರದ ಯೋಗ:

ಇನ್ನು ಜಾಲಿ ಪಟ್ಟಣ ಪಂಚಾಯಿತಿಯಲ್ಲಿ ಚುನಾವಣೆ ಆಗಿ ಎರಡೂವರೆ ವರ್ಷದ ಬಳಿಕ ಆಯ್ಕೆಯಾದ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿಯುವ ಯೋಗ ಬಂದಿದೆ. ಇಲ್ಲಿನ ಅಧ್ಯಕ್ಷ ಗಾದಿಗೆ ಸಾಮಾನ್ಯ ಮಹಿಳಾ ಮೀಸಲಾತಿ ಹಾಗೂ ಉಪಾಧ್ಯಕ್ಷ ಗಾದಿಗೆ ಹಿಂದುಳಿದ ವರ್ಗ ಅ ಮೀಸಲಾತಿ ಬಂದಿದೆ.ಜಾಲಿ ಪಟ್ಟಣ ಪಂಚಾಯಿತಿಯ ಒಟ್ಟೂ 20 ಸದಸ್ಯರಲ್ಲಿ ತಂಝೀಂ ಬೆಂಬಲಿತ 12, ಕಾಂಗ್ರೆಸ್ 4, ಬಿಜೆಪಿ 3 ಹಾಗೂ 1 ಪಕ್ಷೇತರ ಸದಸ್ಯರಿದ್ದಾರೆ. ಇಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ತಂಝೀಂ ಬೆಂಬಲಿತ ಸದಸ್ಯರೇ ಆಗುವುದು ಬಹುತೇಕ ಖಚಿತವಾಗಿದೆ. ಎರಡೂವರೆ ವರ್ಷದ ಬಳಿಕ ಅಧ್ಯಕ್ಷ- ಉಪಾಧ್ಯಕ್ಷರು ಆಯ್ಕೆಯಾಗುತ್ತಿರುವುದಕ್ಕೆ ಸದಸ್ಯರಲ್ಲಿ ಸಂತಸಕ್ಕೆ ಕಾರಣವಾಗಿದೆ.

Share this article