ಕನ್ನಡಪ್ರಭ ವಾರ್ತೆ ಯಾದಗಿರಿ
ಹಿಂದುಳಿದ ವರ್ಗದಲ್ಲಿ ಒಡಕು ಸೃಷ್ಟಿಸಿ ರಾಜಕೀಯ ಅಧಿಕಾರ ನಿರಂತರವಾಗಿ ಅನುಭವಿಸುತ್ತಿರುವ ಪ್ರಬಲ ಜಾತಿಗಳಿಗೆ ಪ್ರತಿರೋಧ ತೋರುವ ಅಗತ್ಯವಿದೆ. ಶೋಷಿತರ ಜಾಗೃತಿ ಸಮಾವೇಶ ‘ಅಹಿಂದ’ ಶಕ್ತಿ ಪ್ರದರ್ಶನವಾಗಬೇಕಿದೆ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ತಿಳಿಸಿದರು.ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಯೋಜಿಸಲು ಉದ್ಧೇಶಿಸಿರುವ ಶೋಷಿತ ಸಮದಾಯಗಳ ಜಾಗೃತಿ ಸಮಾವೇಶಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು. ಮನುಸ್ಮೃತಿ ಆಧಾರದ ಮೇರೆಗೆ ರೂಪುಗೊಂಡ ಸಮಾಜ ಶೋಷಣೆ ಪೋಷಿಸುತ್ತಿದೆ. ಶೋಷಿತ ಸಮುದಾಯಗಳ ಮೇಲೆ ಪ್ರಬಲರು ನಿರಂತರವಾಗಿ ಸವಾರಿ ಮಾಡಿಕೊಂಡು ಬಂದಿದ್ದಾರೆ. ಶೋಷಿತ ಸಮುದಾಯದ ಧ್ವನಿ ಅಡಗಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ಬಹುದಿನ ಮುಂದುವರಿಯುವುದಿಲ್ಲ ಎಂಬುದನ್ನು ನಿರೂಪಿಸಬೇಕಿದೆ ಎಂದರು.
ನಾಗನಗೌಡ ವರದಿಯನ್ನು ಉದ್ಧೇಶಪೂರ್ವಕವಾಗಿ ತಿರಸ್ಕರಿಸಲಾಯಿತು. ಈ ಕುರಿತು ಶೋಷಿತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವಿವರಿಸಿದರು. ಎಲ್.ಜಿ.ಹಾವನೂರು ಆಯೋಗದ ವರದಿಯ ಬಗ್ಗೆಯೂ ಪ್ರಬಲ ಜಾತಿಗಳು ಅಪಸ್ವರ ಎತ್ತಿದ್ದವು. ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸು ಯಾವ ಟೀಕೆಗಳಿಗೂ ಜಗ್ಗದೇ ವರದಿ ಅನುಷ್ಠಾನಗೊಳಿಸಿದರು. ಮಂಡಲ್ ಆಯೋಗದ ವರದಿಯ ವಿರುದ್ಧ ಹಿಂದುಳಿದ ಸಮುದಾಯವನ್ನು ಎತ್ತಿಕಟ್ಟಲಾಯಿತು. ಇದೇ ಪ್ರಯತ್ನ ಕಾಂತರಾಜ್ ಆಯೋಗದ ವರದಿಯ ವಿಚಾರದಲ್ಲಿಯೂ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡದೇ ಜಾತಿ ಗಣತಿ ವರದಿ ಜಾರಿಗೆ ಸರ್ಕಾರ ಒತ್ತಾಯಿಸಬೇಕಿದೆ ಎಂದು ಹೇಳಿದರು.ದಾವಣಗೆರೆಯಲ್ಲಿ ಈಚೆಗೆ ನಡೆದ ವೀರಶೈವ-ಲಿಂಗಾಯತರ ಮಹಾ ಅಧಿವೇಶನದಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ವಿರೋಧಿಸುವುದಾಗಿ ನಿರ್ಣಯ ತೆಗೆದುಕೊಳ್ಳುವ ಮೂಲಕ ಶೋಷಿತ ಸಮುದಾಯಗಳ ಮೇಲೆ ಸವಾರಿ ಮಾಡುವ ಸಂದೇಶ ರವಾನೆಯಾಗಿದೆ. ಸರ್ಕಾರ ಇನ್ನು ವರದಿಯನ್ನೇ ಬಿಡುಗಡೆಗೊಳಿಸಿಲ್ಲ. ವೈಜ್ಞಾನಿಕ-ಅವೈಜ್ಞಾನಿಕವೆಂದು ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಶೋಷಿತರ ಉದ್ಧಾರ ಮಾಡಬೇಕೆಂದು ಒತ್ತಾಯಿಸುವುದಕ್ಕಾಗಿ 2024ರ ಜ.28 ರಂದು ಚಿತ್ರದುರ್ಗಾ ಜಿಲ್ಲೆಯಲ್ಲಿ ಸಮಾವೇಶ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸೇರಿ ಎಲ್ಲಾ ಮುಖಂಡರನ್ನು ಆಹ್ವಾನಿಸಲಾಗುವುದು. ಲಕ್ಷಾಂತರ ಸಂಖ್ಯೆಯಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಆದಿವಾಸಿ, ಅಲೆಮಾರಿಗಳು ಸಮಾವೇಶದಲ್ಲಿ ಭಾಗವಹಿಸಬೇಕೆಂದು ರಾಮಚಂದ್ರಪ್ಪ ವಿನಂತಿಸಿದರು.ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಎಣಿಗೇರಿ ಆರ್ ವೆಂಕಟರಾಮ್ ಹಾಗೂ ಅಹಿಂದ ಜಿಲ್ಲಾಧ್ಯಕ್ಷ ಮೌಲಾಲಿ ಅನಪೂರ ಮಾತನಾಡಿದರು.
ಪೂರ್ವಭಾವಿ ಸಭೆಯಲ್ಲಿ ಮಾಜಿ ಮೇಯರ್ ಎಂ. ರಾಮಚಂದ್ರಪ್ಪ, ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅಪ್ಪಣ್ಣ ಚಿನ್ನಾಕಾರ್, ಡಾ.ಭೀಮಣ್ಣ ಮೇಟಿ, ಲಾಯಕ್ ಹುಸೇನ್ ಬಾದಲ್, ಶರಣಪ್ಪ ಮಾನೆಗಾರ್, ಮರೇಪ್ಪ ಚಟ್ಟರಕರ್, ನಾಗಣ್ಣ ಬಡಿಗೇರ್, ಭೀಮರಾಯ ಠಾಣಗುಂದಿ, ಸುದರ್ಶನ್ ನಾಯಕ್, ಮಲ್ಲಿಕಾರ್ಜುನ್ ಗೋಸಿ, ಮಡಿವಾಳಪ್ಪ, ಮಲ್ಲಣ್ಣ ಐಕೂರ್, ಬಾಸು ರಾಠೋಡ್, ಸೈದಪ್ಪ ಗುತ್ತೇದಾರ್, ಚಂದ್ರಕಾಂತ್ ಅಲ್ಲಿಪೂರ್, ಚೆನ್ನಕೇಶವಗೌಡ ಬಾಣತಿಹಾಳ, ಸಿ.ಎನ್.ರವಿಕುಮಾರ್, ನಾಗರಾಜ್, ಶಿವಪುತ್ರಪ್ಪ ಜವಳಿ, ಶಾಂತಪ್ಪ ನಿಡಗುಂದಿ, ಸೂರ್ಯವಂಶಿ ಸೇರಿದಂತೆ ಇತರರು ಇದ್ದರು.