ಗೋಕರ್ಣ: ಕಾಲಕ್ಕೆ ಇರುವ ಶಕ್ತಿ ಅದ್ಭುತ, ಅನಂತ, ಅಪಾರ. ಅದು ನೀಡುವ ಪೆಟ್ಟನ್ನು ತಾಳಿ ಉಳಿದುಕೊಳ್ಳುವವರು ಯಾರೂ ಇಲ್ಲ. ಕಾಲವೇ ನಮ್ಮನ್ನು ಮುಗಿಸಲು ಮುಂದಾದರೆ ಕಾಪಾಡುವವರು ಯಾರೂ ಇಲ್ಲ. ನಾವು ಕಾಲಾತೀತರಾಗಬೇಕಾದರೆ ಭಗವಂತನ ಮೊರೆ ಹೋಗುವುದೊಂದೇ ದಾರಿ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 13ನೇ ದಿನ ಕಾಲ ಪ್ರವಚನ ಸರಣಿಯನ್ನು ಮುಂದುವರಿಸಿ, ಎಲ್ಲರೂ ಕಾಲವಶ. ಪ್ರಾಣ ಬಿಟ್ಟ ಬಳಿಕ ಮಾತ್ರ ಕಾಲವಶವಲ್ಲ. ಜೀವನದ ಪ್ರತಿ ಘಟ್ಟವೂ ಕಾಲವಶವೇ. ಕಾಲ ಕುಣಿಸಿದಂತೆ ನಾವು ಪ್ರತಿಯೊಂದು ಕೆಲಸಗಳನ್ನೂ ಮಾಡುತ್ತೇವೆ ಎಂದರು.ಜೀವನ ಸಮುದ್ರ. ಕಾಲ ಅಲೆಗಳು. ಅದು ಅಪ್ಪಳಿಸಿದ ಪರಿಣಾಮ ಸಂಸಾರದ ಎಲ್ಲ ಸಂಬಂಧಗಳೂ ಬೇರ್ಪಡುತ್ತವೆ. ಪ್ರತಿಯೊಂದೂ ಕಾಲಪ್ರಭಾವದಿಂದ ಘಟಿಸುತ್ತದೆ. ಕಾಲವನ್ನು ಮೀರಿ ಉಳಿದುಕೊಳ್ಳುವುದು ಭಗವಂತನ ವಿಭೂತಿ ಮಾತ್ರ. ಭಗವಂತ ಕಾಲಾತೀತ ಎಂದು ವಿಶ್ಲೇಷಿಸಿದರು.ಸತ್ಯ ಎನ್ನುವುದು ನಿತ್ಯ. ಹಿಂದೆಯೂ ಇತ್ತು; ಈಗಲೂ ಇದೆ. ಮುಂದೂ ಇರುತ್ತದೆ. ಆದ್ದರಿಂದಲೇ ಇದು ಸತ್ಯಕ್ಕೆ ಮಾತ್ರ ಅನ್ವಯವಾಗುತ್ತದೆ. ನಾವೇ ನಮಗೆ ಮರೆತು ಹೋಗುವ ಕಾಲಘಟ್ಟದಲ್ಲಿ ಇಂದಿಗೂ ಒಬ್ಬ ಮಹಾಪುರುಷನನ್ನು ನೆನಪಿಸಿಕೊಳ್ಳುತ್ತೇವೆ ಎಂದರೆ ಆತ ಕಾಲಾತೀತ ಎಂದೇ ಅರ್ಥ. ಅಂಥ ರಾಮ ನಿತ್ಯಸತ್ಯ ಎಂದರು.ಆತ್ಮಸಾಧನೆ ಮಾಡುವವರ ಆಯಸ್ಸು ವೃದ್ಧಿಯಾಗುತ್ತದೆ. ಅವರ ಮೇಲೆ ಕಾಲ ಬೀರುವ ಪ್ರಭಾವ ಕಡಿಮೆಯಾಗುತ್ತದೆ. ನವಗ್ರಹಕ್ಕಿಂತ ರಾಮನ ಅನುಗ್ರಹ ದೊಡ್ಡದು ಎಂದರು.ಶ್ರೀಮಠದ ಶಾಖಾ ಮಠಗಳ ಐತಿಹಾಸಿಕ ದಾಖಲೆಗಳನ್ನು ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಗಣಪತಿ ಕೃಷ್ಣಯ್ಯ ಹೆಗಡೆ ಗೋಳಗೋಡು ಅನಾವರಣಗೊಳಿಸಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ., ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ, ಮಹಾಮಂಡಲ ಪ್ರಾಂತ ಕಾರ್ಯದರ್ಶಿ ರುಕ್ಮಾವತಿ ರಾಮಚಂದ್ರ, ಸಿದ್ದಾಪುರ ಮಂಡಲ ಅಧ್ಯಕ್ಷ ಮಹೇಶ್ ಚಟ್ನಳ್ಳಿ, ಕಾರ್ಯದರ್ಶಿ ಚಂದನ್ ಶಾಸ್ತ್ರಿ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ. ಹೆಗಡೆ ಹೊಸಾಕುಳಿ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಭಟ್ ಸೂರಿ ನಿರೂಪಿಸಿದರು.