ಪತ್ರಿಕಾರಂಗ ಪ್ರಜಾಪ್ರಭುತ್ವದ ಜೀವಾಳ: ಸಚಿವ ಮಹದೇವಪ್ಪ

KannadaprabhaNewsNetwork |  
Published : Feb 01, 2024, 02:09 AM IST
30ಕೆಪಿಎಸ್ಎನ್ಡಿ03: | Kannada Prabha

ಸಾರಾಂಶ

ಸಿಂಧನೂರಿನ ಬಾಬಾ ರಾಮ ದೇವ ದೇವಸ್ಥಾನದ ಹಿಂಬದಿಯಲ್ಲಿ ನೂತನವಾಗಿ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಭಾರತದಲ್ಲಿ ಸಂವಿಧಾನವೇ ಪವಿತ್ರ ಗ್ರಂಥವಾಗಿದೆ. ಪತ್ರಿಕಾರಂಗ ನಾಲ್ಕನೆ ಅಂಗವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾಗಿದೆ. ಪತ್ರಕರ್ತರು ವಿರೋಧ ಪಕ್ಷದಂತೆ ಕೆಲಸ ಮಾಡಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ನಗರದ ವಾರ್ಡ್ ನಂ.17ರ ವ್ಯಾಪ್ತಿಗೊಳಪಡುವ ವೆಂಕಟೇಶ್ವರ ಕಾಲೊನಿಯ ಬಾಬಾ ರಾಮದೇವ್ ದೇವಸ್ಥಾನದ ಹಿಂಭಾಗದಲ್ಲಿ ನಿರ್ಮಿಸಿರುವ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ಸಂವಿಧಾನದ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಜನರ ಧ್ವನಿಯಾಗಿ, ಬಾಬಾಸಾಹೇಬ್ ಅಂಬೇಡ್ಕರ್ ಧ್ವನಿ ಇಲ್ಲದವರ ಧ್ವನಿಯಾಗಿ ಪತ್ರಿಕೆಗಳನ್ನು ನಡೆಸುತ್ತಿದ್ದರು ಎಂದು ನೆನಪಿಸಿದ ಅವರು, ಜನರ ಸಂಕಷ್ಟಗಳು, ಆಳುವ ಪ್ರಭುತ್ವಗಳ ಧೋರಣೆಗಳ ಕುರಿತು ವಸ್ತುನಿಷ್ಠ ವರದಿ ಮಾಡುವ ಮೂಲಕ ಬಡಿದೆಚ್ಚರಿಸುವ ಕೆಲಸವನ್ನು ಪತ್ರಿಕಾರಂಗ ಮಾಡಬೇಕು ಎಂದು ಹೇಳಿದರು.

ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಮಾನತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲ್ಪಿಸಿದೆ. ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರಭುತ್ವದ ವೈಫಲ್ಯಗಳ ವಿರುದ್ಧ ದನಿ ಎತ್ತುವ ಚಿಂತಕರು, ಸಾಹಿತಿಗಳು, ಪತ್ರಕರ್ತರು, ಬರಹಗಾರರನ್ನೇ ದೇಶದ್ರೋಹಿಗಳೆಂದು ಜೈಲಿಗೆ ತಳ್ಳಲಾಗುತ್ತಿದೆ. ಲೋಕಸಭೆಯಲ್ಲಿಯೇ ವಿರೋಧ ಪಕ್ಷದವರನ್ನು ಹೊರಗೆ ಹಾಕಿ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ. ಈ ಮೂಲಕ ದೇಶದಲ್ಲಿ ಯಾರೂ ಧ್ವನಿ ಎತ್ತಲಾರದ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿರುವುದು ಸರ್ವಾಧಿಕಾರಿ ಧೋರಣೆ ಹಾಗೂ ಅಪಾಯಕಾರಿ ಸಂಗತಿ ಎಂದು ಟೀಕಿಸಿದರು.

ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಚ್.ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ತಹಸೀಲ್ದಾರ್ ಅರುಣ್ ಎಚ್.ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಗುರುನಾಥ, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಪ್ರಧಾನ ಕಾರ್ಯದರ್ಶಿ ಪಾಷಾ ಹಟ್ಟಿ, ಜಿಲ್ಲಾ ಉಪಾಧ್ಯಕ್ಷ ಎಂ.ವೀರಭದ್ರಪ್ಪ ಜವಳಗೇರಾ, ಜೆಡಿಎಸ್ ಅಧ್ಯಕ್ಷ ಬಸವರಾಜ ನಾಡಗೌಡ, ನಗರಸಭೆ ಸದಸ್ಯ ದಾಸರಿ ಸತ್ಯನಾರಾಯಣ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷ ನಾಗವೇಣಿ ಪಾಟೀಲ್, ಶಶಿಕಲಾ ಭೀಮರಾಯ್ ಇದ್ದರು. ಅಮರೇಶ ಅಲಬನೂರು ಸ್ವಾಗತಿಸಿದರು. ಚಂದ್ರಶೇಖರ ಯರದಿಹಾಳ ನಿರೂಪಿಸಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ