ಲಕ್ಷ್ಮಣ ಹಿರೇಕುರಬರ
ಕನ್ನಡಪ್ರಭ ವಾರ್ತೆ ತಾಂಬಾಭೀಕರ ಬರಗಾಲದಿಂದಾಗಿ ದಿಢೀರ್ ಏರಿಕೆ ಕಂಡಿದ್ದ ಉತ್ತರ ಕರ್ನಾಟಕದ ಪ್ರಮುಖ ಬೆಳೆ ಜೋಳದ ಬೆಲೆ ವಾರದ ಅಂತರದಲ್ಲಿ ಕೊಂಚ ಇಳಿಕೆಯಾಗಿದೆ. ಇದರಿಂದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ಬೆಲೆ ಏರಿಕೆಯಿಂದ ಗ್ರಾಹಕರು ಜೋಳದ ಖರೀದಿಗೆ ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ ವರ್ಷಕ್ಕಿಂತ ದರ ಡಬಲ್ ಆಗಿದ್ದರಿಂದ ಅನೇಕರು ಜೋಳ ಖರೀದಿಯನ್ನೇ ಕೈಬಿಟ್ಟಿದ್ದರು. ನೌಕರ ವರ್ಗ, ಮಧ್ಯಮ ವರ್ಗದವರು ವರ್ಷಕ್ಕೆ ಆಗುವಷ್ಟು ಮನೆಗೆ ಜೋಳ ಖರೀದಿಸುವುದು ರೂಢಿ. ಆದರೆ 2023ರ ಆಗಸ್ಟ್ ನಿಂದ ಡಿಸೆಂಬರ್ 15 ರವರೆಗೆ ಜೋಳದ ದರ ಏರಿಕೆಯಲ್ಲಿತ್ತು. ಇದೀಗ ಇಳಿಕೆ ಆಗಿದ್ದು, ವಿಜಯಪುರ ಮಾರುಕಟ್ಟೆಯಲ್ಲಿ ಹೈಬ್ರಿಡ್ ಜೋಳ ಕ್ವಿಂಟಾಲ್‌ಗೆ ₹ 3000 ರಿಂದ ₹3400 ವರೆಗೆ ಮಾರಾಟವಾಗುತ್ತಿದೆ. ವಾರದ ಹಿಂದೆ ₹3600 ರಿಂದ 3800 ರವರೆಗೆ ಮಾರಾಟವಾಗಿತ್ತು. ಬಿಳಿಜೋಳ ಕ್ವಿಂಟಾಲ್‌ಗೆ ₹5000 ರಿಂದ ₹4500 ವರೆಗೆ ಮಾರಾಟವಾಗುತ್ತಿದ್ದು, ಇದಕ್ಕೂ ಮುಂಚೆ ₹6000 ರಿಂದ ₹6400 ವರೆಗೆ ಮಾರಾಟವಾಗಿದೆ.ಕೆಲವು ದೊಡ್ಡ ನಗರಗಳಲ್ಲಿ ಬಿಳಿ ಜೋಳ ಕ್ವಿಂಟಾಲ್‌ಗೆ ₹7000 ದಿಂದ 8000 ವರೆಗೆ ಮಾರಾಟವಾಗಿದೆ. ಪ್ರಸ್ತುತ ₹6500ಕ್ಕೆಇಳಿಯಾಗಿದೆ. ಪ್ರಮುಖವಾಗಿ ವಿಜಯಪುರ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಜೋಳ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗುತ್ತದೆ. ಕಪ್ಪು ಮಣ್ಣಿನಲ್ಲಿ ಬಿಳಿಜೋಳ ಬೆಳೆದರೆ, ಮಸಾರಿ ಭಾಗದಲ್ಲಿ ಹೈಬ್ರಿಡ್ ಜೋಳ ಬೆಳೆಯಲಾಗುತ್ತದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೈ ಕೊಟ್ಟ ಪರಿಣಾಮ 2010 ಹೆಕ್ಟೇರ್ ಗುರಿ ಪೈಕಿ ಕೇವಲ 518 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಕಳೆದ ವರ್ಷ ಹಿಂಗಾರಿನಲ್ಲಿ 24000 ಹೆಕ್ಟೇರ್ ಪೈಕಿ 21480 ಹೆಕ್ಟೇರ್ ಬಿತ್ತನೆಯಾಗಿತ್ತು. ಅಲ್ಲದೆ, ಅಂದು ಮಳೆಯೂ ಉತ್ತಮವಾಗಿದ್ದರಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಜೋಳ ಆವಕವಾಗಿತ್ತು.---
ಬಾಕ್ಸ್ವಿಜಯಪುರ ಮಾರುಕಟ್ಟೆಯಲ್ಲಿ ಹೈಬ್ರಿಡ್ ಜೋಳ ಕ್ವಿಂಟಾಲ್‌ಗೆ ₹ 3000 ರಿಂದ ₹3400 ವರೆಗೆ ಮಾರಾಟವಾಗುತ್ತಿದೆ. ವಾರದ ಹಿಂದೆ ₹3600 ರಿಂದ 3800 ರವರೆಗೆ ಮಾರಾಟವಾಗಿತ್ತು. ಬಿಳಿಜೋಳ ಕ್ವಿಂಟಾಲ್‌ಗೆ ₹5000 ರಿಂದ ₹4500 ವರೆಗೆ ಮಾರಾಟವಾಗುತ್ತಿದ್ದು, ಇದಕ್ಕೂ ಮುಂಚೆ ₹6000 ರಿಂದ ₹6400 ವರೆಗೆ ಮಾರಾಟವಾಗಿದೆ.
ಕೋಟ್ಸದ್ಯ ಜೋಳದ ದರ ಇಳಿಕೆಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ₹500 ವರೆಗೆ ಕಡಿಮೆಯಾಗಿದೆ. ಬರಗಾಲ ಹಿನ್ನೆಲೆ ಮಾರುಕಟ್ಟೆಗೆ ಹಿಂಗಾರು ಜೋಳ ಬರುವುದಿಲ್ಲ ಎಂದುಕೊಂಡಿದ್ದೆವು. ಆದರೆ, ಮತ್ತೆ ಆವಕ ಪ್ರಾರಂಭವಾಗುವ ಸಾಧ್ಯತೆ ಇದೆ.
ಶರಣು ಗುಡ್ಡೊಡಗಿ. ಶ್ರೀಸಂಗನಬಸವೇಶ್ವರ ಅಡತಿ ಅಂಗಡಿ ವಿಜಯಪುರ.