ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಮುಂಗಾರು ಹಂಗಾಮು ಬತ್ತ ಬರುವ ಮುನ್ನವೇ ಬತ್ತದ ದರವೂ ಗಗನಮುಖಿಯಾಗಿದ್ದು, ಇನ್ನು ಅಕ್ಕಿಯ ದರವೂ ಆಕಾಶದತ್ತ ಸಾಗುತ್ತಿದೆ.ಇದೇ ಮೊದಲ ಬಾರಿಗೆ ಅಕ್ಕಿಯ ದರ ಬಿಡಿ ಮಾರಾಟದಲ್ಲಿ ₹60ರಿಂದ ₹65ವರೆಗೂ ಪ್ರತಿ ಕೆಜಿಗೆ ಮಾರಾಟವಾಗುತ್ತಿದೆ. ಹೋಲ್‌ಸೇಲ್‌ನಲ್ಲಿ ₹55ಕ್ಕೆ ಮಾರಾಟವಾಗುತ್ತಿದೆ.ರಾಜ್ಯಾದ್ಯಂತ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಬತ್ತ ಬೆಳೆಯುವ ಪ್ರಮಾಣ ಕುಸಿಯುವ ಸಾಧ್ಯತೆ ಇದೆ. ಹಿಂಗಾರು ಹಂಗಾಮಿ ಬೆಳೆ ಬಹುತೇಕ ಇಲ್ಲವಾಗುವುದರಿಂದ ಮಾರುಕಟ್ಟೆಯಲ್ಲಿ ದರ ಏರಿಕೆ ಪ್ರಾರಂಭವಾಗಿದೆ ಎಂದೇ ಹೇಳಲಾಗುತ್ತದೆ.ಕೃತಕ ಅಭಾವ: ಅಕ್ಕಿಯ ದರದ ಏರಿಕೆಗೆ ಪ್ರಮುಖ ಕಾರಣ ಕೃತಕ ಅಭಾವ ಎಂದೇ ಹೇಳಲಾಗುತ್ತಿದೆ. ಬತ್ತದ ಉತ್ಪಾದನೆಯಲ್ಲಿ ಕುಸಿತವಾಗುವುದರಿಂದ ಮತ್ತು ಅಕ್ಕಿಯ ದರ ಏರಿಕೆಯಾಗುತ್ತದೆ ಎನ್ನುವ ಮುನ್ಸೂಚನೆ ಸಿಕ್ಕಿರುವುದರಿಂದ ಮಾರುಕಟ್ಟೆಯಲ್ಲಿ ಅಕ್ಕಿಯ ಕೃತಕ ಅಭಾವ ಸೃಷ್ಟಿ ಮಾಡಲಾಗುತ್ತದೆ. ಈಗಾಗಲೇ ಕಾಳಸಂತೆಯಲ್ಲಿ ಅಕ್ಕಿ ಖರೀದಿಸಿ, ಸಂಗ್ರಹಿಸಿಟ್ಟುಕೊಳ್ಳುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂದೇ ಹೇಳಲಾಗುತ್ತದೆ. ಹೀಗಾಗಿ, ಅಕ್ಕಿಯ ದರ ಈಗಾಗಲೇ ಏರಿಕೆಯಾಗಿರುವಾಗಲೇ ಮತ್ತಷ್ಟು ಏರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.ಪ್ರಸಕ್ತ ಬತ್ತದ ದರ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಈಗ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹2500ರಿಂದ ₹3000ಕ್ಕೆ ಏರಿಕೆಯಾಗಿದೆ. ಇದು ಇನ್ನು ಹೆಚ್ಚಳವಾಗುತ್ತದೆ ಎನ್ನಲಾಗುತ್ತಿದೆ.ಇನ್ನು ಅಕ್ಕಿಯ ದರ ಸೋನಾ ಮಸೂರಿ ಹೊಸದು ₹4800 ಆಗಿದ್ದರೆ ಹಳೆಯದು ₹5500 ಆಗಿದೆ. ಇನ್ನು ಆರ್‌ಎನ್‌ಆರ್, ಜೀರಾ ದರಗಳು ಹೋಲ್‌ಸೇಲ್ ದರದಲ್ಲಿಯೇ ಹೆಚ್ಚಳ ಕಂಡಿವೆ. ಈ ಬಾರಿ ಅಕ್ಕಿಯ ದರ ಹಿಂದಿನ ಎಲ್ಲ ದಾಖಲೆ ಮೀರಿ ಏರಿಕೆಯಾಗುತ್ತಿದೆ ಎನ್ನುವುದು ಸದ್ಯದ ವಿಶ್ಲೇಷಣೆ.ವಿದೇಶದಲ್ಲೂ ಬೇಡಿಕೆ: ಭಾರತದ ಅಕ್ಕಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಇದೆ. ಆದರೆ, ದೇಶಿಯ ಮಾರುಕಟ್ಟೆಯಲ್ಲಿ ದರ ನಿಯಂತ್ರಣದಲ್ಲಿಡಲು ಭಾರತ ಸರ್ಕಾರ ಈಗಾಗಲೇ ಅಕ್ಕಿಯ ರಫ್ತು ಮೇಲೆ ನಿರ್ಬಂಧ ವಿಧಿಸಿದೆ. ಹೀಗಾಗಿ, ವಿದೇಶಕ್ಕೆ ರಫ್ತಿಗೆ ಬ್ರೇಕ್ ಬಿದ್ದಿದೆ. ಹಾಗೊಂದು ವೇಳೆ ಭಾರತ ಸರ್ಕಾರ ಅಕ್ಕಿಯ ಮೇಲಿನ ನಿರ್ಬಂಧ ತೆಗೆದುಹಾಕಿದ್ದೇ ಆದಲ್ಲಿ ಈ ದರ ಇನ್ನು ಹೆಚ್ಚಳವಾಗುವುದರಲ್ಲಿ ಅನುಮಾನವೇ ಇಲ್ಲ.
ಬತ್ತದ ದರ ಈಗಾಗಲೇ ಏರಿಕೆಯಾಗಿದೆ. ಆದರೆ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬತ್ತ ಕಟಾವಿಗೆ ಇನ್ನು ಒಂದೂವರೆ ತಿಂಗಳು ಬೇಕಾಗುತ್ತದೆ. ರೈತರ ಬತ್ತ ಬಂದಾಗ ಇದೇ ದರ ಇದ್ದರೆ ಬಂಪರ್ ಆಗುತ್ತದೆ ಎನ್ನುತ್ತಾರೆ ರೈತ ಉಮೇಶ ಪಲ್ಲೇದ.ಅಕ್ಕಿಯ ದರ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈಗ ಏರಿಕೆಯಾಗಿದೆ. ಇದು ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ. ಹೋಲ್‌ಸೇಲ್ ದರವೇ ₹55 ಆಗಿದ್ದು, ಬಿಡಿ ಮಾರುಕಟ್ಟೆಯಲ್ಲಿ ₹60 ಆಸುಪಾಸು ಇದೆ ಎನ್ನುತ್ತಾರೆ ವ್ಯಾಪಾರಸ್ಥ ಸಿದ್ದಣ್ಣ ನಾಲ್ವಾಡ.