ಕನ್ನಡಪ್ರಭ ವಾರ್ತೆ ಸಕಲೇಶಪುರ ಎರಡು ದಶಕಗಳ ಪಟ್ಟಣದ ತ್ಯಾಜ್ಯದ ಸಮಸ್ಯೆಗೆ ಘನತ್ಯಾಜ್ಯ ಘಟಕ ಚಾಲನೆಗೊಂಡ ನಂತರ ಮುಕ್ತಿ ದೊರೆಯಲಿದೆ ಎಂಬ ಭಾವನೆ ಪಟ್ಟಣದ ಜನರಲ್ಲಿತ್ತು. ಆದರೆ, ಅದಕ್ಕೆ ತದ್ವಿರುದ್ಧವಾಗಿ ಪಟ್ಟಣದ ರಸ್ತೆಗಳೆಲ್ಲೆಲ್ಲಾ ಹಿಂದೆ ಎಂದಿಗಿಂತಲೂ ಹೆಚ್ಚಾಗಿ ತ್ಯಾಜ್ಯ ತಾಂಡವವಾಡುತ್ತಿದ್ದು ಜನರು ಮೂಗುಮುಚ್ಚಿ ಸಂಚರಿಸಬೇಕಾಗಿದೆ. ಮಳಲಿ ಗ್ರಾಮದ ಘನತ್ಯಾಜ್ಯ ಘಟಕ ಹಲವು ಏಳುಬೀಳುಗಳನ್ನು ಎದುರಿಸಿ ಸತತ ೧೭ ವರ್ಷಗಳ ನಂತರ ಕಾಮಗಾರಿ ಮುಕ್ತಾಯಗೊಂಡು, ತಾಜ್ಯವಿಲೇವಾರಿ ನಡೆಸಲು ಸ್ಥಳಾವಕಾಶವೇ ಇಲ್ಲ ಎಂಬ ಸಂದಿಗ್ಧತೆ ಪುರಸಭೆ ಸಿಬ್ಬಂದಿಯನ್ನು ಕಾಡಲಾರಂಭಿಸಿದ ನಂತರ ಕಳೆದೊಂದು ತಿಂಗಳ ಹಿಂದೆ ಶಾಸಕರನ್ನೆ ಹೊರಗಿಟ್ಟು ಪುರಪಿತೃಗಳು ಪೂಜೆ ಸಲ್ಲಿಸುವ ಮೂಲಕ ತ್ಯಾಜ್ಯಘಟಕಕ್ಕೆ ಚಾಲನೆ ನೀಡಲಾಗಿತ್ತು. ಅಂದಿನಿಂದ ಮನೆಯಲ್ಲೆ ಹಸಿ ಹಾಗೂ ಒಣಕಸವನ್ನು ಬೇರ್ಪಡಿಸಿ ನೀಡುವಂತೆ ಪುರಸಭೆ ಸಿಬ್ಬಂದಿ ಧ್ವನಿವರ್ಧಕದ ಮೂಲಕ ವಿನಂತಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ವಾರದ ಮೂರು ದಿನ ಹಸಿಕಸ ಹಾಗೂ ಮತ್ತೆ ಮೂರು ದಿನ ಒಣಕಸ ತೆಗೆದುಕೊಳ್ಳುವ ಪರಿಪಾಠ ಆರಂಭಿಸಲಾಗಿದೆ. ಆದರೆ, ಈ ನಿಯಮವೇ ರಸ್ತೆಗಳಲೆಲ್ಲ ತ್ಯಾಜ್ಯದ ರಾಶಿ ಸೃಷ್ಟಿಗೆ ಕಾರಣವಾಗಿದೆ. ದಿನಬಿಟ್ಟು ದಿನ:
ಒಂದು ದಿನ ಹಸಿ ಮತ್ತೊಂದು ದಿನ ಒಣಕಸ ಸಂಗ್ರಹಿಸುವ ಪರಿಪಾಠ ಆರಂಭಿಸಲಾಗಿದೆ. ಆದರೆ, ಪಟ್ಟಣದ ಸಾಕಷ್ಟು ಜನರು ಪುರಸಭೆಯ ಹಸಿ ಹಾಗೂ ಒಣಕಸ ಬೇರ್ಪಡಿಸಿ ಪುರಸಬೆಗೆ ಸಿಬ್ಬಂದಿಗೆ ನೀಡುವಂತೆ ಮಾಡುತ್ತಿರುವ ಮನವಿಗೆ ಯಾವುದೇ ಬೆಲೆ ನೀಡುತ್ತಿಲ್ಲ. ಒಣ ಕಸದೊಂದಿಗೆ ಹಸಿ ಕಸವನ್ನು ಒಟ್ಟಾಗಿ ನೀಡುವ ಮನೆಗಳ ಕಸವನ್ನು ಸಿಬ್ಬಂದಿ ಸಾಗಿಸಲು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ಜನರು ತಮ್ಮ ಮನೆಯ ಕಸವನ್ನು ಪುರಸಭೆ ಸಿಬ್ಬಂದಿಗಾಗಿ ಕಾಯದೆ ರಸ್ತೆಗಳಲ್ಲೆ ಎಸೆಯುತ್ತಿದ್ದರೆ, ಮತ್ತೊಂದೆಡೆ ನಿಗದಿತ ಸಮಯಕ್ಕೆ ದಿನಂಪ್ರತಿ ತ್ಯಾಜ್ಯ ಸಂಗ್ರಹಿಸುವ ವಾಹನಗಳು ಆಗಮಿಸುತ್ತಿಲ್ಲ ಎಂಬ ದೂರು ವ್ಯಾಪಕವಾಗಿದ್ದುದೆ. ಕೆಲವೊಮ್ಮೆ ವಾರಗಳ ಕಾಲ ಕೆಲವು ಬಡಾವಣೆಗಳಿಗೆ ತ್ಯಾಜ್ಯ ಸಾಗಿಸುವ ವಾಹನಗಳು ಬಾರದ ಕಾರಣ ಅನಿವಾರ್ಯವಾಗಿ ಜನರು ತ್ಯಾಜ್ಯವನ್ನು ತಂದು ರಸ್ತೆಗಳಿಗೆ ಹಾಕುತ್ತಿದ್ದಾರೆ. ಪಟ್ಟಣದ ಕುಶಾಲನಗರ ಬಡಾವಣೆಯ ಹಲವೆಡೆ ಮಹಿಳೆಯರು ಹಸಿ ಹಾಗೂ ಒಣಕಸ ಬೇರ್ಪಡಿಸುವ ನೀಡುವ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿ ರಸ್ತೆಗೆ ತ್ಯಾಜ್ಯ ಎಸೆದು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.ತೊಟ್ಟಿಇಲ್ಲದ್ದೇ ಸಮಸ್ಯೆ:ಮನೆಮನೆ ಕಸ ಸಂಗ್ರಹಿಸುವ ಪದ್ಧತಿ ಆರಂಭವಾದ ನಂತರ ಪಟ್ಟಣದ ಬೀದಿಬೀದಿಗಳಲ್ಲಿದ್ದ ಕಸದ ತೊಟ್ಟಿಗಳನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ನಿಗದಿತ ತೊಟ್ಟಿಗೆ ಕಸಹಾಕುತ್ತಿದ್ದ ಜನರು ತೊಟ್ಟಿಗಳು ತೆರವುಗೊಂಡ ನಂತರ ಮನಬಂದಂತೆ ರಸ್ತೆಗಳಲ್ಲಿ ಕಸ ಹಾಕುತ್ತಿದ್ದಾರೆ.ಎಲ್ಲೆಲ್ಲಿ ಕಸದ ರಾಶಿ:
ಪಟ್ಟಣದ ಚಂಪಕನಗರ ಬಡಾವಣೆಯಲ್ಲಿರುವ ಕೈಗಾರಿಕ ಪ್ರದೇಶದ ರಸ್ತೆಗಳು ಸಂಪೂರ್ಣ ತ್ಯಾಜ್ಯದ ರಾಶಿಯಿಂದ ತುಂಬಿಹೋಗಿದ್ದು ತ್ಯಾಜ್ಯಕ್ಕೆ ಮಳೆ ನೀರು ಸೇರುತ್ತಿರುವುದರಿಂದ ಜನರು ಮೂಗುಮುಚ್ಚಿ ಸಂಚರಿಸ ಬೇಕಿದೆ.ಇದರೊಂದಿಗೆ ಹಿಂಡುಹಿಂಡು ಬೀದಿನಾಯಿಗಳು ತ್ಯಾಜ್ಯದ ಸುತ್ತಲು ಇರುವುದರಿಂದ ಶಾಲಾವಿದ್ಯಾರ್ಥಿಗಳು ಜೀವಭಯದಲ್ಲೆ ಸಂಚರಿಸಬೇಕಿದೆ. ಇದಲ್ಲದೆ ರೋಟರಿ ಶಾಲೆಯ ರಸ್ತೆಯು ಸಹ ತ್ಯಾಜ್ಯದ ರಾಶಿಯಿಂದ ತುಂಬಿ ತುಳುಕುತ್ತಿದ್ದು ರಸ್ತೆಗೆ ತ್ಯಾಜ್ಯ ಹಾಕಬೇಡಿ ಎಂಬ ಮನವಿಗೆ ಸ್ಥಳೀಯರು ಸ್ಪಂದಿಸುತ್ತಿಲ್ಲ ಎಂಬ ಬೇಸರದ ಮಾತು ಕೇಳಿ ಬರುತ್ತಿದೆ. ಇದಲ್ಲದೆ ಅಯ್ಯಪ್ಪಸ್ವಾಮಿ ದೇವಸ್ಥಾನದ ರಸ್ತೆ, ಭುವನೇಶ್ವರಿ ವೃತ್ತ,ಮಹೇಶ್ವರಿ ನಗರದ ಹಲವೆಡೆ ತರಕಾರಿ ಮಾರುಕಟ್ಟೆ ವೃತ್ತ ಸೇರಿದಂತೆ ಇನ್ನೂ ಕೆಲವೆಡೆ ನಿತ್ಯ ತ್ಯಾಜ್ಯದ ರಾಶಿಯೆ ಸೃಷ್ಟಿಯಾಗುತ್ತಿದೆ.ರೈಲ್ವೆ ನೌಕರರದ್ದೇ ಸಮಸ್ಯೆ:ಪಟ್ಟಣದ ಹಲವು ಕಡೆ ರೈಲ್ವೆ ನೌಕರರಿದ್ದು ಇವರು ತ್ಯಾಜ್ಯ ಸಂಗ್ರಹಿಸುವ ವಾಹನ ಬರುವ ಮುನ್ನ ದುಡಿಮೆಗೆ ತೆರಳುವುದರಿಂದ ಅನಿವಾರ್ಯವಾಗಿ ತಮ್ಮ ಮನೆಯ ತ್ಯಾಜ್ಯವನ್ನು ರಸ್ತೆಗೆ ಹಾಕುತ್ತಿದ್ದಾರೆ. ಸಾಕಷ್ಟು ರೈಲ್ವೆ ನೌಕರರಿಗೆ ಕನ್ನಡ ಬಾರದ ಕಾರಣ ಪುರಸಭೆ ವಿನಂತಿ ಅರ್ಥವಾಗದಾಗಿದೆ. ಪರಿಣಾಮ ಹಸಿ ಹಾಗೂ ಒಣಕಸವನ್ನು ಹೆಚ್ಚಾಗಿ ಇವರೇ ರಸ್ತೆಬದಿಗೆ ಎಸೆಯುವ ಮೂಲಕ ಅನೈರ್ಮಲ್ಯ ಸೃಷ್ಟಿಸುತ್ತಿದ್ದಾರೆಂಬ ಆರೋಪ ಪೌರಕಾರ್ಮಿಕರದ್ದಾಗಿದೆ.ದಂಡದ ಹಾಕಿ:
ರಸ್ತೆಗೆ ಮನಬಂದಂತೆ ತ್ಯಾಜ್ಯ ಹಾಕುವವರ ವಿರುದ್ಧ ಶಿಸ್ತುಕ್ರಮ ಜರುಗಿಸಿ ಎಂಬ ಕೂಗು ಪರಿಸರವಾದಿಗಳಿಂದ ಕೇಳಿ ಬರುತ್ತಿದ್ದು, ಈ ಬಗ್ಗೆ ದಿಟ್ಟ ನಿರ್ಧಾರ ಕೈಗೊಳ್ಳ ಬೇಕಿದ್ದ ಪುರಸಭೆ ಅಧಿಕಾರಿಗಳು ಮಾತ್ರ ಗಾಢ ನಿದ್ರೆಯಲ್ಲಿದ್ದಾರೆ.ಸಂಘಸಂಸ್ಥೆಗಳ ಆಟೋಗಳಿಗೆ ಗುಡ್‌ಬೈ:ಸ್ವಸಹಾಯ ಸಂಘ ಸಂಸ್ಥೆಗಳು ಪುರಸಭೆ ತ್ಯಾಜ್ಯ ಸಂಗ್ರಹಿಸುವ ಕಾರ್ಯದಲ್ಲಿ ಕೈಜೋಡಿಸುತ್ತಿದ್ದವು. ಇವರಿಗೆ ಪ್ರತಿ ತಿಂಗಳು ೭೦ರಿಂದ ೮೦ ಸಾವಿರ ಹಣ ಪುರಸಭೆ ಸಂದಾಯ ಮಾಡುತ್ತಿತ್ತು. ಆದರೆ, ಸರ್ಕಾರ ಇನ್ನೂ ಮುಂದೆ ಸ್ವಸಹಾಯ ಸಂಘಗಳಿಂದ ಪಡೆಯಲಾಗುತ್ತಿದ್ದ ಆಟೋಗಳನ್ನು ಗುತ್ತಿಗೆ ಪದ್ಧತಿಯಲ್ಲಿ ಪಡೆಯುವ ಕಾರ್ಯಕ್ಕೆ ಅನುಮತಿ ಇಲ್ಲದಾಗಿದ್ದು, ಅಗತ್ಯವಿರುವ ಆಟೋಗಳನ್ನು ಪುರಸಭೆಯೆ ಖರೀದಿಸಿ ತ್ಯಾಜ್ಯ ಸಂಗ್ರಹ ಮಾಡಬೇಕಾಗಿದ್ದು ಆಟೋ ಟಿಪ್ಪರ್ ಕೊಳ್ಳಲು ಪುರಸಭೆಯ ಸ್ವಂತ ನಿಧಿಯನ್ನೆ ಬಳಸಿಕೊಳ್ಳಬೇಕಾಗಿದೆ. ಇದರಿಂದಾಗಿ ಆಟೋ ಟಿಪ್ಪರ್ ಖರೀದಿ ಪ್ರಕ್ರಿಯೆ ವಿಳಂಬವಾಗಿದ್ದು ಇನ್ನೂ ಕೆಲವೇ ದಿನಗಳಲ್ಲಿ ತ್ಯಾಜ್ಯ ಸಂಗ್ರಹದಲ್ಲಿ ಖಾಸಗಿಯವರ ಪಾರಂಪತ್ಯ ಅಂತ್ಯಗೊಳ್ಳುವುದು ನಿಶ್ಚಿತವಾಗಿದೆ.
----- *ಹೇಳಿಕೆ1- ಹಸಿ ಹಾಗೂ ಒಣ ಕಸ ಬೇರ್ಪಡಿಸಿ ನೀಡುವಂತೆ ಪುರಸಭೆ ಮಾಡುತ್ತಿರುವ ಮನವಿಗೆ ಸಾರ್ವಜನಿಕರ ಸ್ಪಂದನೆ ದೊರೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಬೀದಿಗಳಲ್ಲಿ ತ್ಯಾಜ್ಯ ಹಾಕುವವರ ವಿರುದ್ಧ ದಂಡ ಹಾಕುವ ಪ್ರಕ್ರಿಯೆ ನಡೆಸಲಾಗುವುದು.
ಮಹೇಶ್ವರಪ್ಪ, ಮುಖ್ಯಾಧಿಕಾರಿ. ಪುರಸಭೆ* ಹೇಳಿಕೆ2
ಪಟ್ಟಣದ ಹಲವೆಡೆ ತ್ಯಾಜ್ಯದ ರಾಶಿಯೆ ಸೃಷ್ಟಿಯಾಗುತ್ತಿದ್ದು, ತ್ಯಾಜ್ಯದ ರಾಶಿ ಇರುವೆಡೆ ಬೀದಿನಾಯಿಗಳು ಹೆಚ್ಚಿದ್ದು ಜನರು ನಿರ್ಭೀತಿಯಿಂದ ಸಂಚರಿಸುವುದು ಅಸಾಧ್ಯವಾಗಿದೆ.
ಪ್ರವೀಣ್, ಲಕ್ಷ್ಮೀಪುರಂ ಬಡಾವಣೆ (29ಎಚ್ಎಸ್ಎನ್8ಎ)