ಅನಾಥ ಮಕ್ಕಳ ಪುನರ್ವಸತಿಯೇ ದತ್ತು ಸಂಸ್ಥೆ ಉದ್ದೇಶ

KannadaprabhaNewsNetwork | Published : Nov 11, 2024 11:51 PM

ಸಾರಾಂಶ

ಮಕ್ಕಳಿಗೆ ಶಾಶ್ವತ ಕುಟುಂಬದ ವ್ಯವಸ್ಥೆಯನ್ನು ಕಾನೂನು ಬದ್ಧವಾಗಿ ಕಲ್ಪಿಸಲು ದತ್ತು ಸಂಸ್ಥೆಯು ನೆರವಾಗುತ್ತದೆ. ವೀಕ್ಷಣಾಲಯ ಕಾನೂನಿನೊಂದಿಗೆ ಸಂಘಕ್ಕೊಳಪಟ್ಟ ೧೮ ವರ್ಷದೊಳಗಿನ ಮಕ್ಕಳ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ಸಂಸ್ಥೆ ತಾತ್ಕಾಲಿಕವಾಗಿ ಅಭಿರಕ್ಷಣೆ ಒದಗಿಸುತ್ತದೆ.

ಕನ್ನಡಪ್ರಭ ವಾರ್ತೆ ಕೋಲಾರ ಕುಟುಂಬದ ಪ್ರೀತಿ ವಂಚಿತ, ಅನಾಥ, ಪರಿತ್ಯಕ್ತ ಹಾಗೂ ನಿರ್ಗತಿಕ 6 ವರ್ಷದೊಳಗಿನ ಮಕ್ಕಳ ಪುನರ್ವಸತಿಗೆ ನೆರವಾಗುವುದೇ ಸರ್ಕಾರಿ ದತ್ತು ಸಂಸ್ಥೆಯ ಉದ್ದೇಶ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಿಷನ್ ವಾತ್ಸಲ್ಯ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಇಲಾಖೆಯ ವಿವಿಧ ಯೋಜನೆಗಳ ಎರಡನೇ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.ಕಾನೂನು ಬದ್ಧ ದತ್ತು ವ್ಯವಸ್ಥೆ

ಮಕ್ಕಳಿಗೆ ಶಾಶ್ವತ ಕುಟುಂಬದ ವ್ಯವಸ್ಥೆಯನ್ನು ಕಾನೂನು ಬದ್ಧವಾಗಿ ಕಲ್ಪಿಸಲು ದತ್ತು ಸಂಸ್ಥೆಯು ನೆರವಾಗುತ್ತದೆ. ವೀಕ್ಷಣಾಲಯ ಕಾನೂನಿನೊಂದಿಗೆ ಸಂಘಕ್ಕೊಳಪಟ್ಟ ೧೮ ವರ್ಷದೊಳಗಿನ ಮಕ್ಕಳ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ತಾತ್ಕಾಲಿಕವಾಗಿ ಅಭಿರಕ್ಷಣೆ ಒದಗಿಸುವ ಸಂಸ್ಥೆಯಾಗಿದೆ ಎಂದರು.ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದ ಮಕ್ಕಳ ಪ್ರಕರಣ ವಿಚಾರಣೆ ವೇಳೆಯಲ್ಲಿ ರಕ್ಷಣೆ ಮತ್ತು ಘೋ?ಣೆ ಅಗತ್ಯವಿರುವ ಮಕ್ಕಳ ಪಾಲನೆ ಮತ್ತು ರಕ್ಷಣೆಗಾಗಿ ಹಾಗೂ ದೀರ್ಘಾವಧಿ ಪುನರ್ವಸತಿಗಾಗಿ ಬಾಲಕರ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಬಾಲ ಮಂದಿರಗಳನ್ನು ಸ್ಥಾಪಿಸಲಾಗಿದೆ. ಪಾಲನಾ ಸಂಸ್ಥೆಯಲ್ಲಿ 42 ಮಕ್ಕಳು

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಒಟ್ಟು ೪೨ ಮಕ್ಕಳು ದಾಖಲಾಗಿದ್ದಾರೆ. ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಕೋವಿಡ್-೧೯ ರಿಂದ ಇಬ್ಬರು ಪೋಷಕರನ್ನು ಕಳೆದುಕೊಂಡ ೮ ಮಕ್ಕಳಿಗೆ ಮಾಸಿಕ ೩,೫೦೦/ರೂ.ಗಳ ಆರ್ಥಿಕ ಧನ ಸಹಾಯ ಆರ್.ಟಿ.ಜಿ.ಎಸ್ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಪಿ.ಎಂ ಕೇರ್ ಫಾರ್ ಚಿಲ್ಡ್ರನ್ ಯೋಜನೆಯಡಿ ಮಕ್ಕಳ ಮಾಹಿತಿ ಪಿ.ಎಂ. ಕೇರ್ ಪೋರ್ಟಲ್‌ನಲ್ಲಿ ಅಳವಡಿಸಲಾಗಿದ್ದು, ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.ರಾಜ್ಯ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಮಕ್ಕಳ ಸಹಾಯವಾಣಿ ಯಾವುದೇ ರೀತಿಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಮಕ್ಕಳ ರಕ್ಷಣೆ ಮತ್ತು ಪೋಷಣೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತು ಸೇವೆ ಒದಗಿಸಲು ಮಕ್ಕಳ ಸಹಾಯವಾಣಿ-೧೦೯೮ ನ್ನು ಇ.ಆರ್.ಎಸ್.ಎಸ್-೧೧೨ ನೊಂದಿಗೆ ವಿಲೀನಗೊಳಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಮೊರಾರ್ಜಿ ಶಾಲೆಯಲ್ಲಿ ಅವಕಾಶ

೬ ವರ್ಷ ವಯಸ್ಸಿನ ಮೇಲ್ಪಟ್ಟ ಬಾಲಕ-ಬಾಲಕಿಯರನ್ನು ಸ್ಥಳೀಯ ಮೂರಾರ್ಜಿ ದೇಸಾಯಿ ಶಾಲೆಗಳಲ್ಲಿ ದಾಖಲು ಮಾಡಲು ಕ್ರಮಕೈಗೊಳ್ಳಿ ಎಂದು ಸೂಚಿಸಿದ ಅವರು, ಈಗಾಗಲೇ ೧೧೦೮ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇದ್ದು, ಉಳಿದ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಒದಗಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಾಲಸೇವಾ ಯೋಜನೆ, ಉಪಕಾರ ಯೋಜನೆ, ಪ್ರಾಯೋಜಕತ್ವ ಯೋಜನೆ, ಪೋಕ್ಸೋ ಕಾಯ್ದೆಯಡಿ ಪರಿಹಾರ ಯೋಜನೆ, ಬಾಲನ್ಯಾಯ ಯೋಜನೆ, ಬಾಲ್ಯವಿವಾಹ ತಡೆ ಯೋಜನೆ, ಭಿಕ್ಷಾಟನಾ ನಿರ್ಮೂಲನಾ ಯೋಜನೆ, ಬಾಲ ಕಾರ್ಮಿಕರ ಕಾಯ್ದೆ, ಮಕ್ಕಳ ಸಹಾಯವಾಣಿ ಪ್ರಕರಣಗಳು, ಕುಟುಂಬ ದೌರ್ಜನ್ಯ ತಡೆ ಯೋಜನೆ, ಬಾಲಕಿಯರ ವಸತಿ ನಿಲಯಗಳ ನಿರ್ವಹಣೆ, ಸಖಿ ಒನ್ ಸ್ಟಾಪ್ ಯೋಜನೆ, ಸ್ವಾದರಗೃಹ ಯೋಜನೆ, ಪೋಷಣ್ ಅಭಿಯಾನ, ಮಿಷನ್ ಶಕ್ತಿ ಯೋಜನೆ, ಮಾತೃವಂದನ ಮತ್ತು ಗೃಹಲಕ್ಷ್ಮಿ ಯೋಜನೆಗಳು ಸೇರಿದಂತೆ ಹಲವಾರು ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್.ಹೊಸಮನಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಕೆಜಿಎಫ್ ಡಿಎಸ್‌ಪಿ ಪಾಂಡುರಂಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ ಇದ್ದರು.

Share this article