ಕನ್ನಡಪ್ರಭ ವಾರ್ತೆ ರಾಮನಗರದುರಾಡಳಿತ, ಕರ್ತವ್ಯ ಲೋಪ, ಭ್ರಷ್ಟತೆಯನ್ನು ನಿವಾರಿಸಿ, ಸಾರ್ವಜನಿಕರ ಹಕ್ಕು ಬಾಧ್ಯತೆಗಳನ್ನು ಕಾನೂನಾತ್ಮಕವಾಗಿ ಸಂರಕ್ಷಿಸಲು ಅಸ್ತಿತ್ವಕ್ಕೆ ಬಂದಿರುವ ಲೋಕಾಯುಕ್ತ ಸಂಸ್ಥೆಯು ಶ್ರಮಿಸುತ್ತಿದೆ ಎಂದು ರಾಜ್ಯ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅಭಿಪ್ರಾಯಪಟ್ಟರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತರಿಂದ ಕುಂದುಕೊರತೆಗಳ, ದೂರುಗಳ ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ವಿಚಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ದೂರುದಾರರು ಮತ್ತು ಎದುರುದಾರರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರಾಜ್ಯದಲ್ಲಿ ಈ ಮೊದಲು ಲೋಕಾಯುಕ್ತ ಸಂಸ್ಥೆ ಇರಲಿಲ್ಲ. ಕೆಲವು ಇಲಾಖೆಗಳಲ್ಲಿ ಆಂತರಿಕವಾಗಿ ಉದ್ಬವಿಸಿದ ಸಮಸ್ಯೆಗಳಿಗೆ ಅವರವರೇ ಪರಿಹಾರ ಕಂಡುಕೊಳ್ಳುತ್ತಿದ್ದರು. ಯಾವಾಗ ಆಡಳಿತದಲ್ಲಿ ಏರುಪೇರಾಯಿತೋ, ಆಗ ದುರಾಡಳಿತ ಪ್ರಾರಂಭವಾಯಿತು. ಇದನ್ನು ತಡೆಗಟ್ಟಲು ಲೋಕಾಯುಕ್ತ ಸಂಸ್ಥೆ ಬಂದಿತು ಎಂದು ಹೇಳಿದರು.
ಸಮಸ್ಯೆಗಳನ್ನು ಪರಿಹಾರ ಮಾಡುವ ಪ್ರಯತ್ನ:ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರಿಂದ ಬರುವ ದೂರುಗಳು, ಆ ದೂರುಗಳ ವಿಲೇವಾರಿಗೆ ಕೈಗೊಂಡಿರುವ ಕ್ರಮಗಳ ಕುರಿತು ದೂರು ಸ್ವೀಕರಿಸಿದ ದಿನದಿಂದಲೇ ಪರಿಶೀಲಿಸಲಾಗುತ್ತದೆ. ಸಾಧ್ಯವಾದಷ್ಟು ಜನರು ಇರುವಲ್ಲಿಯೇ ಅವರ ಸಮಸ್ಯೆಗಳನ್ನು ಹಾಗೂ ಈಗಾಗಲೇ ದೂರುಗಳ ಮೂಲಕ ಸಲ್ಲಿಸಿರುವ ಸಮಸ್ಯೆಗಳನ್ನು ಪರಿಹಾರ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗಳ ಸಹಯೋಗದಲ್ಲಿ ರಾಮನಗರ ಜಿಲ್ಲೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ಈ ಹಿಂದೆಯೇ ಅಧಿಕಾರಿಗಳಿಗೆ ಕಳುಹಿಸಿ ಕೊಡಲಾಗಿತ್ತು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಲ್ಲಿಕೆಯಾಗಿರುವ ಸಮಸ್ಯೆಗಳು, ದೂರುಗಳ ಬಗ್ಗೆ ತಮ್ಮ ಹಂತದಲ್ಲಿ ಸಭೆ ನಡೆಸಿ, ಕೈಗೊಳ್ಳಬೇಕಾದ ಕ್ರಮಗಳನ್ನು ಅನುಸರಿಸುವಂತೆ ತಿಳಿಸಲಾಗಿತ್ತು, ಈ ಪ್ರಕ್ರಿಯೆಗಳ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.ಉಪ ಲೋಕಾಯುಕ್ತದ ಸಹ ಕಾರ್ಯದರ್ಶಿ ಕಿರಣ್ ಪಾಟೀಲ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಅಪರ ಜಿಲ್ಲಾಧಿಕಾರಿ ಚಂದ್ರಯ್ಯ, ಲೋಕಾಯುಕ್ತ ಎಸ್ಪಿ ಸ್ನೇಹಾ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ, ಉಪ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ.ಸುರೇಶ್ ಉಪಸ್ಥಿತರಿದ್ದರು.
...ಕೋಟ್ ...ರಾಜ್ಯದ ಜನಸಂಖ್ಯೆಯಲ್ಲಿ ಶೇ. 1ರಷ್ಟು ಮಾತ್ರ ಸರ್ಕಾರಿ ನೌಕರರು ಕೆಲಸ ಮಾಡುತ್ತಿದ್ದಾರೆ ಎಂದು ಅರ್ಥೈಸಿಕೊಳ್ಳಬಹುದಾಗಿದೆ, ಅಂದರೆ ರಾಜ್ಯದಲ್ಲಿರುವ ನಾಗರೀಕರ ಅನಾನುಕೂಲತೆಗಳು ಸೇರಿದಂತೆ ಎಲ್ಲಾ ಜವಾಬ್ದಾರಿಗಳು ಶೇ.1ರಷ್ಟಿರುವ ಸರ್ಕಾರಿ ನೌಕರರ ಮೇಲಿದೆ- ಕೆ.ಎನ್. ಪಣೀಂದ್ರ, ಉಪ ಲೋಕಾಯುಕ್ತ ನ್ಯಾಯಮೂರ್ತಿ------10ಕೆಆರ್ ಎಂಎನ್ 13,14.ಜೆಪಿಜಿರಾಮನಗರ ಜಿಪಂ ಸಭಾಂಗಣದಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಪಣೀಂದ್ರರವರು ಅಧಿಕಾರಿಗಳು ಮತ್ತು ದೂರುದಾರರ ಸಮ್ಮುಖದಲ್ಲಿ ಪ್ರಕರಣಗಳ ವಿಚಾರಣೆ ನಡೆಸಿದರು.------