ಎಸ್.ಜಿ. ತೆಗ್ಗಿನಮನಿನರಗುಂದ: ತಾಲೂಕಿನಲ್ಲಿ ಈ ಬಾರಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆಗಳೆಲ್ಲಾ ಒಣಗುತ್ತಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಮಲಪ್ರಭಾ ಜಲಾಶಯದತ್ತ ಚಿತ್ತ ನೆಟ್ಟಿದ್ದಾರೆ!
ಆದರೆ ಕಳೆದೊಂದು ತಿಂಗಳಿನಿಂದ ಮಳೆ ಕೈ ಕೊಟ್ಟಿದ್ದರಿಂದ ತೇವಾಂಶ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತ ಸಮುದಾಯಕ್ಕೆ ದಿಕ್ಕು ತೋಚದಾಗಿದೆ.
ಈ ಭಾಗದ ರೈತರ ಜೀವನಾಡಿಯಾಗಿರುವ ಮಲಪ್ರಭಾ ಜಲಾಶಯಕ್ಕೆ ಕಳೆದೊಂದು ತಿಂಗಳಲ್ಲಿ ಒಳಹರಿವು ಹೆಚ್ಚಿದ್ದು ಅಪಾರ ನೀರು ಸಂಗ್ರಹವಾಗಿದೆ. ಜಲಾಶಯ ತುಂಬಲು ಇನ್ನೂ 8 ಅಡಿ ಬಾಕಿ ಇದೆ. ಆದರೆ ಸದ್ಯ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ ಪ್ರದೇಶದಲ್ಲಿ ಮಳೆ ಆಗದ್ದರಿಂದ ರೈತರು ಜಲಾಶಯಕ್ಕೆ ಹೊಂದಿಕೊಂಡಿರುವ ಕಾಲುವೆಗಳಿಗೆ ನೀರು ಬಿಡುವುದನ್ನು ಕಾಯುತ್ತಿದ್ದಾರೆ.ನೀರಿನ ಸಂಗ್ರಹ:ಈ ಜಲಾಶಯ ಒಟ್ಟು 2079.50 ಅಡಿ, (37.731) ಟಿಎಂಸಿ ನೀರು ಸಂಗ್ರಹ ಮಾಡಿಕೊಳ್ಳಬಹುದು. ಸದ್ಯ ಜಲಾಶಯದಲ್ಲಿ 2071.05 ಅಡಿ ನೀರು ಸಂಗ್ರಹವಿದೆ. ಇದರಲ್ಲಿ 2055 ಅಡಿಯಷ್ಟು ನೀರನ್ನು ಕುಡಿಯಲಿಕ್ಕೆ ಬೇಕು, ಉಳಿದ ನೀರನ್ನು ಕೃಷಿಗೆ ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಈ ನೀರು ಸದ್ಯ ಬಲದಂಡೆ ಮತ್ತು ಎಡದಂಡೆ, ಕಾಲುವೆಗಳಿಗೆ 1 ತಿಂಗಳ ಪೂರೈಕೆ ಮಾಡಬಹುದು.
ತಾಲೂಕಿನ ರೈತರು ಮುಂಗಾರು ಹಂಗಾಮಿನಲ್ಲಿ ಪ್ರತಿ 1 ಎಕರೆಗೆ 20 ಸಾವಿರ ರು. ಖರ್ಚು ಮಾಡಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಕೈ ಕೊಟ್ಟಿದ್ದರಿಂದ ಈ ಬೆಳೆ ಉಳಿಯಬೇಕೆಂದರೆ ಕಾಲುವೆಗೆ ಸದ್ಯ ಸರ್ಕಾರ ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆಗ್ರಹಿಸಿದರು.