ಹಿಂಗಾರು ಹಂಗಾಮಿಗೆ ಹದ ನೀಡಿದ ಮಳೆ

KannadaprabhaNewsNetwork | Published : Oct 13, 2024 1:01 AM

ಸಾರಾಂಶ

ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗೆಯವರೆಗೆ ಸುರಿದ ಚಿತ್ತಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಆದರೆ ಹಿಂಗಾಮು ಹಂಗಾಮಿಗೆ ಚಿತ್ತಿ ಮಳೆ ಇಂಬು ನೀಡಿದೆ.

ಶನಿವಾರ ಬೆಳಗ್ಗೆವರೆಗೂ ಧಾರಾಕಾರ ಮಳೆ ₹ ಮನೆಗೆ ನುಗ್ಗಿದ ನೀರು, ಬಿದ್ದ ಮನೆ

ಕನ್ನಡಪ್ರಭ ವಾರ್ತೆ ಕುಕನೂರು

ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗೆಯವರೆಗೆ ಸುರಿದ ಚಿತ್ತಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಆದರೆ ಹಿಂಗಾಮು ಹಂಗಾಮಿಗೆ ಚಿತ್ತಿ ಮಳೆ ಇಂಬು ನೀಡಿದೆ.

ಗುಡುಗು, ಸಿಡಿಲು, ಮಿಂಚುಗಳ ಆರ್ಭಟದೊಂದಿಗೆ ಆರಂಭವಾದ ಮಳೆ ತನ್ನ ನರ್ತನವನ್ನು ಬೆಳಗ್ಗೆಯವರೆಗೂ ನಿಲ್ಲಿಸಲೇ ಇಲ್ಲ. ಶನಿವಾರ ಬೆಳಗ್ಗೆ ಸಹ ಅತ್ಯಂತ ಜೋರಾಗಿ ಮಳೆ ಸುರಿಯಿತು. ಯರೇಭಾಗದಲ್ಲಿ ಹಿಂಗಾರು ಬೆಳೆ ಬಿತ್ತನೆ ಮಾಡಿದ್ದ ರೈತ ವರ್ಗಕ್ಕೆ ಹಾಗೂ ಬಿತ್ತನೆ ಮಾಡಲು ಸಿದ್ಧತೆ ನಡೆಸಿದ್ದ ರೈತ ವರ್ಗಕ್ಕೆ ಮಳೆ ಸುರಿದಿದ್ದು ಹರ್ಷ ತಂದಿತು. ಹಿಂಗಾರು ಹಂಗಾಮು ಹದವಾಯಿತು. ಕಡಲೆ, ಜೋಳ, ಗೋಧಿ, ಕುಸುಬೆ ಬಿತ್ತನೆ ಕಾರ್ಯಕ್ಕೆ ದಾರಿಯಾಯಿತು.

ಬನ್ನಿಕೊಪ್ಪದಲ್ಲಿ ಮನೆಗೆ ನುಗ್ಗಿದ ನೀರು:

ತಾಲೂಕಿನ ಬನ್ನಿಕೊಪ್ಪದಲ್ಲಿ ಸುರಿದ ಧಾರಾಕಾರ ಮಳೆಗೆ ಮಳೆ ನೀರು ಮನೆಗೆ ನುಗ್ಗಿದೆ. ರಾತ್ರಿ ಇಡೀ ಜನರು ಮಳೆ ನೀರನ್ನು ಹೊರಹಾಕಲು ಹರಸಾಹಸ ಪಡುವಂತಾಯಿತು. ಗ್ರಾಮದ ಪಕ್ಕ ಹೊಸದಾಗಿ ನಿವೇಶನಗಳನ್ನು ವ್ಯಕ್ತಿಯೊಬ್ಬರು ಮಾಡಿದ್ದು, ಸರಿಯಾಗಿ ಚರಂಡಿ ವ್ಯವಸ್ಥೆ ಮಾಡದ ಕಾರಣ, ಮಳೆ ನೀರು ಗ್ರಾಮದ ಮನೆಗಳಿಗೆ ನುಗ್ಗಿ ಜನರು ಪರದಾಡುವಂತೆ ಮಾಡಿತು. ಕೂಡಲೇ ಮಳೆ ನೀರು ಮನೆಗಳಿಗೆ ಬಾರದ ರೀತಿಯಲ್ಲಿ ನಿವೇಶನದ ಮಾಲೀಕರು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬಿದ್ದ ಮನೆ: ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಬಸವರಾಜ ಚಲವಾದಿ ಎಂಬವರ ಮನೆ ಮಳೆಗೆ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ. ಹಳ್ಳಗಳು ಮಳೆ ನೀರಿಗೆ ತುಂಬಿ ಹರಿದಿವೆ. ಜಮೀನುಗಳ ಬದುವುಗಳು ಒಡೆದಿವೆ. ಮಳೆಯಿಂದ ಹಿಂಗಾರು ಬೆಳೆಗೆ ಅಗತ್ಯವಾದ ತೇವಾಂಶ ಸಹ ದೊರಕಿದೆ.

Share this article