ಮಳೆಗಾಲ ಮಲೆತಿರಿಕೆ ಬೆಟ್ಟ ನಿವಾಸಿಗಳಿಗೆ ಆತಂಕ

KannadaprabhaNewsNetwork | Published : Jul 2, 2025 12:20 AM
ಆತಂಕ | Kannada Prabha

ಮಳೆಗಾಲದ ಸಂದರ್ಭದಲ್ಲಿ ವಿರಾಜಪೇಟೆ ಪಟ್ಟಣದ ಬೆಟ್ಟದ ಮೇಲಿನ ನಿವಾಸಿಗಳಿಗೆ ಆತಂಕ ಕಾಡುತ್ತದೆ.

ಮಂಜುನಾಥ್ ಟಿ ಎನ್.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಮಳೆಗಾಲದ ಸಂದರ್ಭದಲ್ಲಿ ವಿರಾಜಪೇಟೆ ಪಟ್ಟಣದ ಬೆಟ್ಟದ ಮೇಲಿನ ನಿವಾಸಿಗಳಿಗೂ ಆತಂಕ ಕಾಡುತ್ತದೆ.

ಹೌದು, ಮಲೆತಿರಿಕೆ ಬೆಟ್ಟ ಜನರಿಗೆ ವಾಸಯೋಗ್ಯವಲ್ಲ, ಈ ಬೆಟ್ಟದ ಕೆಲವು ಭಾಗ ಕುಸಿಯುತ್ತದೆ ಎಂದು ಭಾರತೀಯ ಭೂ ಮತ್ತು ಗಣಿ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ವರದಿ ನೀಡಿ ಈ ಮಳೆಗಾಲಕ್ಕೆ ಏಳು ವರ್ಷವಿದು.

ಈ ನಾಲ್ಕು ವರ್ಷಗಳಲ್ಲಿ ಸರ್ಕಾರದ್ದೇ ಅಂಗ ಸಂಸ್ಥೆಯ ಅಧಿಕಾರಿಗಳು ನೀಡಿದ ವರದಿಯನ್ನು ಮೊದಮೊದಲು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದರೂ ತದನಂತರ ಅದು ಕೇವಲ ಆರಂಭ ಶೂರತ್ವದಂತೆ ಕಾಣಿಸುತ್ತಿದೆಯೇ ವಿನಾಃ ವಾಸ್ತವದಲ್ಲಿ ಇಲ್ಲಿನ ನಿವಾಸಿಗಳ ಜೀವ ಕಾಪಾಡುವ ಯಾವ ತ್ವರಿತ ಹೆಜ್ಜೆಗಳು ಸರ್ಕಾರ ಮಾಡಲಿಲ್ಲ .

ಅದಕ್ಕೆ ಭೂ ಸರ್ವೇಕ್ಷಣಾ ಇಲಾಖೆಯ ವರದಿಗೆ ಈ ಮಳೆಗಾಲಕ್ಕೆ ಏಳು ವರ್ಷಗಳು ತುಂಬುತ್ತಿರುವುದೇ ಸಾಕ್ಷಿ. ಕಳೆದ ಐದಾರು ವರ್ಷಗಳಿಂದ ವಿರಾಜಪೇಟೆಯ ಮಲೆತಿರಿಕೆ ಬೆಟ್ಟದ ನಿವಾಸಿಗಳ ಸ್ಥಿತಿ ವಿರಾಜಪೇಟೆ ಪುರಸಭೆ ಹಾಗೂ ಜಿಲ್ಲಾಡಳಿತ ಪ್ರಕಟಣೆಗಳಿಂದ ನಿರ್ಧಾರವಾಗುತ್ತಿದೆ. ಯೆಲ್ಲೋ ಅಲರ್ಟ್‌ ಬಂದರೆ ಎಚ್ಚರದಿಂದ ಇರುವುದು, ರೆಡ್‌ ಅಲರ್ಟ್‌ ಬಂದರೆ ಗಂಟುಮೂಟೆ ಕಟ್ಟಿಕೊಂಡು ಕಾಳಜಿ ಕೇಂದ್ರಕ್ಕೆ ಹೋಗಿ ತಂಗುವುದು ಮಾತ್ರ ಸಾಮಾನ್ಯದಂತಾಗಿದೆ.

ಜನರಲ್ಲಿ ಆತಂಕ ಮನೆಮಾಡಿತ್ತು:

ಕೊಡಗಿನಲ್ಲಿ 2018 ರಲ್ಲಿ ಮೊದಲ ಬಾರಿ ವಿಕೋಪ ಸಂಭವಿಸಿದಾಗ ವಿರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ 2೦೦ ಮೀಟರ್‌ ಆಳಕ್ಕೆ ಬಿರುಕು ಕಾಣಿಸಿಕೊಂಡಿತ್ತು. ಅಲ್ಲದೇ ನೆಹರು ನಗರದಲ್ಲಿಯೂ ಈ ರೀತಿಯ ಬಿರುಕು ಕಾಣಿಸಿಕೊಂಡು ಜನರಲ್ಲಿ ಆತಂಕ ಮನೆಮಾಡಿತ್ತು. ಸ್ಥಳಕ್ಕೆ ಭಾರತೀಯ ಗಣಿ ಮತ್ತು ಭೂಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಈ ಬಿರುಕು ಅಪಾಯಕಾರಿಯಾಗಿದೆ.

ಈ ಪ್ರದೇಶ ಜನವಸತಿಗೆ ಸುರಕ್ಷಿತವಾಗಿಲ್ಲ, ಅತೀಯಾದ ಮಳೆಬಂದಲ್ಲಿ ಬೆಟ್ಟ ಪ್ರದೇಶದಲ್ಲಿ ಮಣ್ಣು-ನೀರು ಸೇರಿ ಹರಿಯುತ್ತಾ ಬೆಟ್ಟ ಜಾರುವ ಸಂಭವವಿದೆ ಎನ್ನುವ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.

ಹೆಚ್ಚಾಗಿ ಕೂಲಿಕಾರ್ಮಿಕರೇ ವಾಸವಿರುವ ಈ ಪ್ರದೇಶದಲ್ಲಿ, ಎಲ್ಲರ ಬಳಿ ಜಿಲ್ಲಾಡಳಿತದ ಪ್ರಕಟಣೆ ನೋಡಲು ಸ್ಮಾರ್ಟ್ಫೋನ್‌ ಇರುವುದಿಲ್ಲ. ಜಿಲ್ಲಾಡಳಿತದ ಪ್ರಕಟಣೆ ತಲುಪದಿದ್ದರೂ ಸಂಜೆಯಾಗುತ್ತಲೇ ಪುರಸಭೆ ಅಧಿಕಾರಿಗಳು, ಪೊಲೀಸಿನವರು ಬಂದು ಸುರಿವ ಮಳೆಯಲ್ಲಿ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಬನ್ನಿ ಎಂದು ಕರೆಯುವುದು, ನಾವೂ ಬರೋದಿಲ್ಲ ಎಂದು ಹಠ ಮಾಡುವ ನಿವಾಸಿಗಳು ಇದು ಮಾಮೂಲು ಚಿತ್ರಣವಾಗಿ ಹೋಗಿದೆ.

ಹಂಚುವ ಪ್ರಕ್ರಿಯೆ ಆಗಬೇಕಿದೆ:

ನೆಹರು ನಗರ, ಅರಸು ನಗರ, ಮಗ್ಗುಲ ಗ್ರಾಮದ ನಿವಾಸಿಗಳು ಕಳೆದ ವರ್ಷದಿಂದ ಕಾಳಜಿ ಕೇಂದ್ರಕ್ಕೆ ಬರಲೂ ಹಿಂದೇಟು ಹಾಕುತ್ತಿದ್ದಾರೆ. ಮಲೆತಿರಿಕೆ ಹಾಗೂ ನೆಹರು ನಗರದ 64 ಕುಟುಂಬಗಳಿಗೆ ಆದಷ್ಟು ಬೇಗ ಮನೆ ನಿರ್ಮಿಸಿ ನಿವಾಸಿಗಳಿಗೆ ಹಂಚುವ ಪ್ರಕ್ರಿಯೆ ಆಗಬೇಕಿದೆ.

ಇಷ್ಟೆಲ್ಲ ಆತಂಕಗಳ ನಡುವೆ ಇಲ್ಲಿನ ನಿವಾಸಿಗಳು ಮಳೆಗಾಲ ಬಂದಾಗ ಹೆದರುವುದು, ಬೇಸಿಗೆ ಬಂದಾಗ ಎಂದಿನಂತೆ ಜೀವನ ನಡೆಸುವುದಕ್ಕೆ ಒಗ್ಗಿಕೊಂಡಿದ್ದಾರೆ. ಆದರೆ ಇದಕ್ಕೆ ಶಾಶ್ವತವಾದ ಪರಿಹಾರ ಬೇಕೆನ್ನುವುದು ಈ ಬೆಟ್ಟಪ್ರದೇಶದ ನಿವಾಸಿಗಳ ಆಗ್ರಹವಾಗಿದೆ.‌2018 ರಲ್ಲಿ ಅಯ್ಯಪ್ಪ ಬೆಟ್ಟದ ವ್ಯಾಪ್ತಿಯ ಬೆಟ್ಟದ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ತರಹದ ಹಾನಿ ಕೂಡ ಆಗಿಲ್ಲ. ಬಾಳುಗೋಡುವಿನಲ್ಲಿ ಇಲ್ಲಿನ ಹಕ್ಕು ಪತ್ರ ಹೊಂದಿರುವ ಕುಟುಂಬದವರಿಗೆ ಆ ಸ್ಥಳದಲ್ಲಿ ಮನೆಯನ್ನು ನಿರ್ಮಿಸಿಕೊಡಲಾಗುವುದು. ಇದರ ಬಗ್ಗೆ ಶಾಸಕರು ಸಂಬಂಧಿಸಿದ ಇಲಾಖೆಗೆ ನಿರ್ದೇಶನ ಮಾಡಿದ್ದಾರೆ.

-ಡಿ.ಪಿ.ರಾಜೇಶ್, ಸದಸ್ಯರು ವಿರಾಜಪೇಟೆ ಪುರಸಭೆ

ಮಲೆತಿರಿಕೆ ಬೆಟ್ಟಕ್ಕೆ ಹೊಂದಿಕೊಂಡಿರುವ ಇಲ್ಲಿನ ನಿವಾಸಿಗಳಲ್ಲಿ ಈ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಕಂಡುಬರುತ್ತಿಲ್ಲ. ಅಂತಹ ಸಂದರ್ಭದಲ್ಲಿ ಇಲ್ಲಿನ ಕುಟುಂಬಗಳಿಗೆ ತಾತ್ಕಾಲಿಕವಾಗಿ ಸೆಂಟ್ ಆನ್ಸ್ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಇದರ ಬಗ್ಗೆ ಶಾಸಕರ ಜೊತೆಗೆ ಚರ್ಚೆ ಮಾಡಿದ್ದು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಶಾಸಕರು ನಿರ್ದೇಶನ ನೀಡಿದ್ದಾರೆ.

। ಪಟ್ಟಡ ರಂಜಿ ಪೂಣಚ್ಚ, ಸದಸ್ಯರು ಪುರಸಭೆ ವಿರಾಜಪೇಟೆ