‘ಶ್ರೀಮಂತ’ ಬೆಂವಿವಿಗೆ ಈಗ ಪಿಂಚಣಿಗಾಗಿ ಕೈಚಾಚುವ ಸ್ಥಿತಿ!

KannadaprabhaNewsNetwork |  
Published : Mar 12, 2025, 12:49 AM IST
ಬೆಂಗಳೂರು ವಿವಿ  | Kannada Prabha

ಸಾರಾಂಶ

ಬೆಂಗಳೂರು ವಿಶ್ವವಿದ್ಯಾಲಯ ರಾಜ್ಯದ ಶ್ರೀಮಂತ ವಿವಿಗಳಲ್ಲಿ ಒಂದಾಗಿತ್ತು. ಆದರೆ, ಈ ವಿವಿಯನ್ನು ಮೂರು ಹೋಳುಗಳಾಗಿ ವಿಭಜಿಸಿದ ನಂತರ ಮೂಲ ಬೆಂಗಳೂರು ವಿಶ್ವವಿದ್ಯಾಲಯದ (ಈ ವಿವಿ ವಿಭಜನೆಗೊಂಡು ಬೆಂಗಳೂರು ಉತ್ತರ ಹಾಗೂ ಬೆಂಗಳೂರು ನಗರ ಎಂದು ಪ್ರತ್ಯೇಕಗೊಂಡವು) ಆಂತರಿಕ ಆದಾಯ ಕುಸಿತ, ವಿವಿಯ ಮೂಲನಿಧಿ ವೃದ್ಧಿಯಾಗದ ಹಿನ್ನೆಲೆಯಲ್ಲಿ ತನ್ನ ನಿವೃತ್ತ ನೌಕರರ ಪಿಂಚಣಿಗೆ ಸರ್ಕಾರದ ಮುಂದೆ ಕೈಚಾಚುವ ಸ್ಥಿತಿ ತಲುಪಿದೆ.

ಲಿಂಗರಾಜು ಕೋರಾ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ವಿಶ್ವವಿದ್ಯಾಲಯ ರಾಜ್ಯದ ಶ್ರೀಮಂತ ವಿವಿಗಳಲ್ಲಿ ಒಂದಾಗಿತ್ತು. ಆದರೆ, ಈ ವಿವಿಯನ್ನು ಮೂರು ಹೋಳುಗಳಾಗಿ ವಿಭಜಿಸಿದ ನಂತರ ಮೂಲ ಬೆಂಗಳೂರು ವಿಶ್ವವಿದ್ಯಾಲಯದ (ಈ ವಿವಿ ವಿಭಜನೆಗೊಂಡು ಬೆಂಗಳೂರು ಉತ್ತರ ಹಾಗೂ ಬೆಂಗಳೂರು ನಗರ ಎಂದು ಪ್ರತ್ಯೇಕಗೊಂಡವು) ಆಂತರಿಕ ಆದಾಯ ಕುಸಿತ, ವಿವಿಯ ಮೂಲನಿಧಿ ವೃದ್ಧಿಯಾಗದ ಹಿನ್ನೆಲೆಯಲ್ಲಿ ತನ್ನ ನಿವೃತ್ತ ನೌಕರರ ಪಿಂಚಣಿಗೆ ಸರ್ಕಾರದ ಮುಂದೆ ಕೈಚಾಚುವ ಸ್ಥಿತಿ ತಲುಪಿದೆ.

ವಿವಿಗಳ ವಿಭಜನೆಯಿಂದಾಗಿ ಆಂತರಿಕ ಆದಾಯ ತೀವ್ರ ಕುಸಿತಗೊಂಡು ಪಿಂಚಣಿಗೂ ದುಡ್ಡಿಲ್ಲದೆ ಆರ್ಥಿಕವಾಗಿ ದುಸ್ಥಿತಿ ಎದುರಿಸುತ್ತಿರುವ ರಾಜ್ಯದ ಅತಿ ಹಳೆಯ ವಿವಿಗಳಾದ ಧಾರವಾಡದ ಕರ್ನಾಟಕ ವಿವಿ, ಮೈಸೂರು ವಿವಿ ಮತ್ತು ಮಂಗಳೂರು ವಿವಿಗಳ ಸಾಲಿಗೆ ಈಗ ಬೆಂಗಳೂರು ನಗರ ವಿವಿಯೂ ಸೇರ್ಪಡೆಯಾಗುತ್ತಿದೆ.

ಹಿಂದಿನಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಪತಿ, ಕುಲಸಚಿವ, ಹಣಕಾಸು ಅಧಿಕಾರಿಗಳಾಗಿದ್ದ ಒಂದಷ್ಟು ದೂರದೃಷ್ಟಿಯುಳ್ಳ ಆಡಳಿತಗಾರರು ಭವಿಷ್ಯದ ದೃಷ್ಟಿಯಿಂದ ಪ್ರತೀ ವರ್ಷ ವಿವಿಯ ಆದಾಯದ ಒಂದಷ್ಟು ಮೊತ್ತವನ್ನು ಮೂಲ ನಿಧಿಯಾಗಿ ಸ್ಥಾಪಿಸಿದ್ದರು. ಅದು ಎಂಟು ವರ್ಷಗಳ ಹಿಂದೆ 700 ಕೋಟಿ ರು. ದಾಟಿತ್ತು. ಕಷ್ಟದ ಸ್ಥಿತಿಯಲ್ಲೂ ಈ ಹಣ ತೆಗೆದಿರಲಿಲ್ಲ. ಇದರಿಂದ ಬರುತ್ತಿದ್ದ ಬಡ್ಡಿ ಮೊತ್ತದಿಂದ ನಿವೃತ್ತ ನೌಕರರ ಪಿಂಚಣಿ, ಇನ್ನಿತರೆ ಸಿಬ್ಬಂದಿ ವೇತನ ಬಳಕೆಯಾಗುತ್ತಿತ್ತು. ಇಲ್ಲದೆ ಹೋಗಿದ್ದರೆ ಬೆಂಗಳೂರು ವಿವಿ ಮೂರು ಹೋಳಾದ ದಿನದಿಂದಲೇ ತೀವ್ರ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿತ್ತು ಎನ್ನುತ್ತಾರೆ ಇಲ್ಲಿ ಆಡಳಿತ ನಡೆಸಿದ ಕೆಲ ವಿಶ್ರಾಂತ ಕುಲಪತಿಗಳು.

ಪ್ರೊ.ಬಿ.ತಿಮ್ಮೇಗೌಡ ಮತ್ತು ಪ್ರೊ.ಎನ್‌.ನಿಂಗೇಗೌಡ ಕ್ರಮವಾಗಿ ಅವಿಭಜಿತ ಬೆಂಗಳೂರು ವಿವಿಯ ಕೊನೆಯ ಕುಲಪತಿ ಮತ್ತು ಕುಲಸಚಿವರು. ಅಲ್ಲಿಯವರೆಗೂ ಉತ್ತಮ ಸ್ಥಿತಿಯಲ್ಲೇ ಇದ್ದ ವಿವಿಯ ಆರ್ಥಿಕ ಸ್ಥಿತಿ ವಿಭಜನೆ ಬಳಿಕ ಕುಸಿಯಿತು. ಈ ಮಧ್ಯೆ, ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕುಲಪತಿಯಾಗಿದ್ದವರು ಉನ್ನತ ಶಿಕ್ಷಣ ಇಲಾಖೆ ಸೂಚನೆಯಂತೆ ಮೂಲ ನಿಧಿಯ ಸುಮಾರು 75 ಕೋಟಿ ರು. ಅನುದಾನ ಹೊರತೆಗೆದು ಬೆಂಗಳೂರು ವಿವಿಯಿಂದ ಬೇರ್ಪಡಿಸಿ ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದ್ದ ಯುವಿಸಿಸಿಗೆ ನೀಡಿದರು. ಇದು ವಿವಿಗೆ ದೊಡ್ಡ ಹೊಡೆತ ನೀಡಿತು. ನಂತರ ಮೂಲ ನಿಧಿಗೆ ಹೊಸ ಹಣವೂ ಸೇರ್ಪಡೆಯಾಗಲಿಲ್ಲ. ಬಡ್ಡಿಯ ಮೊತ್ತವೂ ಕಡಿಮೆಯಾಗಿ ಪಿಂಚಣಿಗೆ ಸರ್ಕಾರವನ್ನು ಬೇಡುವಂತಾಗಿದೆ ಎನ್ನುತ್ತಾರೆ ವಿವಿಯ ನಿವೃತ್ತ ಹಣಕಾಸು ಅಧಿಕಾರಿಯೊಬ್ಬರು.

ಪ್ರಸಕ್ತ ವಿವಿಯ ಆಂತರಿಕ ಆದಾಯ, ಸರ್ಕಾರ ಕಾಯಂ ನೌಕರರಿಗೆ ನೀಡುವ ವೇತನ ಎಲ್ಲವೂ ಸೇರಿದರೂ ಒಟ್ಟಾರೆ ಸುಮಾರು 250 ಕೋಟಿ ರು.ಗಳಷ್ಟಿದೆ. ಆದರೆ, ಇದರಲ್ಲಿ ಬಹುಪಾಲು 200 ಕೋಟಿ ರು.ಗಳಿಗೂ ಹೆಚ್ಚು ಕಾಯಂ ನೌಕರರ ವೇತನ, ನಿವೃತ್ತಿ ನೌಕರರ ಪಿಂಚಣಿಗೇ ಹೋಗುತ್ತದೆ. ಇನ್ನುಳಿದ ಹಣ ಅತಿಥಿ ಶಿಕ್ಷಕರು, ಗುತ್ತಿಗೆ, ಹೊರಗುತ್ತಿಗೆ ನೌಕರರ ವೇತನ, ವಿವಿ ಹಾಸ್ಟೆಲ್‌ ನಿರ್ವಹಣೆ, ರಸ್ತೆ, ಕಟ್ಟಡ ನಿರ್ವಹಣೆ, ಸಣ್ಣ ಪುಟ್ಟ ದುರಸ್ತಿ ಸೇರಿ ಒಟ್ಟಾರೆ ಕ್ಯಾಂಪಸ್‌ ನಿರ್ವಹಣೆಗೆ ಬಳಕೆಯಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಕೊರತೆ ಬಜೆಟ್‌ ಮಂಡಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಕೊರತೆ ಬಜೆಟ್‌ ಮೊತ್ತ ಹೆಚ್ಚಾಗುತ್ತಾ ಬಂದಿದೆ.

2023-24ನೇ ಸಾಲಿನಲ್ಲಿ 48.34 ಕೋಟಿ ರು. ಇದ್ದ ಕೊರತೆ ಬಜೆಟ್‌, 2024-25ನೇ ಸಾಲಿಗೆ 86.32 ಕೋಟಿ ರು.ಗೆ ತಲುಪಿದೆ. ಈ ಅವಧಿಯಲ್ಲಿ ವಿವಿಗೆ 35 ಕೋಟಿ ರು. ಅನ್ನು ಸರ್ಕಾರ ಪಿಂಚಣಿಗಾಗಿ ನೀಡಿದೆ. ಈ ವರ್ಷ ಇನ್ನೂ ಹೆಚ್ಚಿನ ಅನುದಾನ ಕೇಳಲಾಗಿದೆ. ಪ್ರಸ್ತುತ 1600 ರಷ್ಟಿರುವ ನಿವೃತ್ತರ ಸಂಖ್ಯೆ ಕೆಲ ವರ್ಷಗಳಲ್ಲಿ ಇನ್ನೂ ನೂರು ಸಂಖ್ಯೆಯಲ್ಲಿ ಹೆಚ್ಚಲಿದೆ. ಅದಕ್ಕೆ ಅನುಗುಣವಾಗಿ ಸರ್ಕಾರ ಹೆಚ್ಚಿನ ನೆರವು ನೀಡದೆ ಹೋದರೆ ಈಗ ಧಾರವಾಡದ ಕರ್ನಾಟಕ ವಿವಿ, ಮೈಸೂರು ವಿವಿಯಲ್ಲಿನ ಆರ್ಥಿಕ ದುಸ್ಥಿತಿ ಬೆಂಗಳೂರು ವಿವಿಗೂ ತಟ್ಟುವ ಕಾಲ ದೂರವಿಲ್ಲ ಎನ್ನುತ್ತಾರೆ ಹಾಲಿ ಅಧಿಕಾರಿಗಳು.

ವಿಭಜನೆ ಬಳಿಕ ಕುಸಿದ ಬೆಂ.ವಿವಿ ಆದಾಯ:

2015ರಲ್ಲಿ ಬೆಂಗಳೂರು ವಿವಿ ವಿಭಜನೆಯ ಅಧಿಸೂಚನೆ ಹೊರಡಿಸಲಾಯಿತು. 2017ರಲ್ಲಿ ಅಧಿಕೃತವಾಗಿ ‘ಬೆಂಗಳೂರು ವಿಶ್ವವಿದ್ಯಾಲಯ’, ‘ಬೆಂಗಳೂರು ನಗರ ವಿಶ್ವವಿದ್ಯಾಲಯ’ ಮತ್ತು ‘ಬೆಂಗಳೂರು ಉತ್ತರ ವಿಶ್ವವಿದ್ಯಾಲಯ’ ಎಂದು ನಾಮಕರಣಗೊಂಡು ಕಾರ್ಯಾರಂಭ ಮಾಡಿದವು.

ಬೆಂಗಳೂರು ವಿವಿಯನ್ನು ಅವೈಜ್ಞಾನಿಕವಾಗಿ ವಿಭಜನೆ ಮಾಡಿದ್ದರಿಂದ 800ಕ್ಕೂ ಹೆಚ್ಚು ಸಂಯೋಜಿತ ಕಾಲೇಜುಗಳು, 3.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂರೂ ವಿವಿಗೆ ಹಂಚಿಹೋದರು. ವಿವಿಗಳಿಗೆ ಪ್ರಮುಖ ಆದಾಯ ಮೂಲವೇ ಖಾಸಗಿ ಕಾಲೇಜುಗಳ ಸಂಯೋಜನಾ ಶುಲ್ಕ. ಆದರೆ, ಮೂಲ ಬೆಂಗಳೂರು ವಿವಿಗೆ ಬಂದ 300ಕ್ಕೂ ಕಡಿಮೆ ಕಾಲೇಜುಗಳಲ್ಲಿ ಹೆಚ್ಚಿನವು ಸರ್ಕಾರಿ ಕಾಲೇಜುಗಳಾಗಿದ್ದವು. ನಿವೃತ್ತಿ ಅಂಚಿನ ನೌಕರರೆಲ್ಲರೂ ಮೂಲ ವಿವಿಯಲ್ಲೇ ಉಳಿದರು. ಇದರಿಂದ ಸಂಯೋಜನಾ ಶುಲ್ಕ ಗಣನೀಯವಾಗಿ ಇಳಿಯಿತು, ಹೊರೆ ಹೆಚ್ಚಾಯಿತು.

ವಿದ್ಯಾರ್ಥಿಗಳ ಸಂಖ್ಯೆಯೂ ಕ್ಯಾಂಪಸ್‌ನಲ್ಲಿ ಎಲ್ಲಾ ವಿಭಾಗಗಳಲ್ಲಿ ಸುಮಾರು 7,000, ಇತರೆ ಸಂಯೋಜಿತ ಕಾಲೇಜುಗಳಲ್ಲಿ ಒಟ್ಟಾರೆ 1.30 ಲಕ್ಷ ಇದ್ದಾರೆ. ಕಾಲೇಜು, ಮಕ್ಕಳ ಸಂಖ್ಯೆಯೂ ಕಡಿಮೆಯಾಗಿದ್ದರಿಂದ ಸಂಯೋಜನಾ ಶುಲ್ಕ, ಪರೀಕ್ಷೆ, ಪ್ರವೇಶ ಶುಲ್ಕ ಸಂಗ್ರಹವೂ ಕುಸಿಯಿತು. ಹತ್ತು ವರ್ಷಗಳ ಹಿಂದೆ ಮೂಲ ವಿವಿಯಲ್ಲಿ 450 ಕೋಟಿ ರು.ಗಳಿಗೂ ಹೆಚ್ಚಿನ ಬಜೆಟ್‌ ಮಂಡಿಸುತ್ತಿದ್ದ ವಿವಿ ಈಗ ವಾರ್ಷಿಕ 250 ಕೋಟಿ ರು. ಬಜೆಟ್‌ಗೆ ಇಳಿದಿದೆ. ಮತ್ತೊಂದೆಡೆ ಯುಜಿಸಿ ಅನುದಾನ, ಸರ್ಕಾರದ ಬ್ಲಾಕ್‌ ಗ್ರ್ಯಾಂಟ್‌ ಯಾವುದೂ ಇಲ್ಲ. ಇದರಿಂದ ವಿಭಜನೆಯ ಬಳಿಕ ವಿವಿಯ ಆಂತರಿಕ ಆದಾಯ ಅರ್ಧಕ್ಕೂ ಹೆಚ್ಚು ಕುಸಿದಿದೆ.

ವಿವಿ ಇತಿಹಾಸ-ಸಾಧನೆ

1964 ನವೆಂಬರ್‌ 28ರಂದು ಆರಂಭವಾದ ಬೆಂ.ವಿವಿ ಆರಂಭದಲ್ಲಿ ಸೆಂಟ್ರಲ್‌ ಕಾಲೇಜು ಕ್ಯಾಂಪಸ್‌ನಲ್ಲಿತ್ತು. ನಂತರ 1100 ಎಕರೆಗೂ ಹೆಚ್ಚು ವಿಸ್ತೀರ್ಣದ ಜ್ಞಾನಭಾರತಿ ಕ್ಯಾಂಪಸ್‌ಗೆ ಸ್ಥಳಾಂತರ ಆಯಿತು. ಪ್ರೊ.ಎಚ್‌.ನರಸಿಂಹಯ್ಯ, ಜ್ಞಾನಪೀಠ ಪುರಸ್ಕೃತ ಸಾಹಿತಿ ವಿ.ಕೃ.ಗೋಕಾಕ್‌, ಪ್ರೊ.ಸಿದ್ದಪ್ಪ, ಪ್ರೊ.ಎಂ.ಎಸ್‌.ತಿಮ್ಮಪ್ಪ, ಡಾ.ಪ್ರಭುದೇವ್‌, ಪ್ರೊ.ತಿಮ್ಮೇಗೌಡ, ಪ್ರೊ.ಕೆ.ಆರ್‌.ವೇಣುಗೋಪಾಲ್‌ ಸೇರಿ ಅನೇಕರು ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಪ್ರೊ.ಎಸ್‌.ಎಂ.ಜಯಕರ ಅವರು ಆ ಸ್ಥಾನದಲ್ಲಿದ್ದು, ವಿವಿಯು ನ್ಯಾಕ್‌ನಿಂದ ಎ++ ಶ್ರೇಯಾಂಕ ಪಡೆದಿದೆ. ಬಹುಶಿಸ್ತೀಯ ಕೋರ್ಸುಗಳ ಅಧ್ಯಯನದಲ್ಲಿ ಮುಂಚೂಣಿಯಲ್ಲಿದೆ. ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿರುವ ದೇಶದ ಟಾಪ್‌ 150 ವಿವಿಗಳಲ್ಲಿ 24ನೇ ಸ್ಥಾನದಲ್ಲಿದೆ.

ಕೋಟ್

ಪಿಂಚಣಿಗೂ ಹಣ ಇಲ್ಲ

ವಿವಿಯ ಆಂತರಿಕ ಆದಾಯ ಕಡಿಮೆಯಾಗಿ ನಿವೃತ್ತರ ಪಿಂಚಣಿಗೆ ಹಣದ ಕೊರತೆ ಆರಂಭವಾಗಿರುವುದು ನಿಜ. ಸದ್ಯದವರೆಗೆ ಹೇಗೋ ನಿಭಾಯಿಸಿಕೊಂಡು ಬರುತ್ತಿದ್ದೇವೆ. ಸರ್ಕಾರ ಬಹಳ ಸಣ್ಣ ನೆರವು ನೀಡುತ್ತಿದೆ. ಮುಂದೆ ನಿವೃತ್ತರ ಸಂಖ್ಯೆ ಇನ್ನಷ್ಟು ಹೆಚ್ಚಾದಂತೆ ಸರ್ಕಾರ ಹೆಚ್ಚಿನ ನೆರವು ನೀಡಬೇಕಾಗುತ್ತದೆ. ಇಲ್ಲದಿದ್ದರೆ ವಿಶ್ವವಿದ್ಯಾಲಯದ ಪೂರ್ಣ ಆಂತರಿಕ ಆದಾಯವೂ ಪಿಂಚಣಿಗೆ ಸಾಲುವುದಿಲ್ಲ. ಇತರೆ ಶೈಕ್ಷಣಿಕ, ಸಂಶೋಧನಾ ಚಟುವಟಿಕೆಗಳಿಗೆ ಹೊಡೆತ ಬೀಳಬಹುದು.

ಡಾ. ಜಯಕರ ಎಸ್‌.ಎಂ, ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ

ಕೋಟ್‌

ಮೂಲನಿಧಿಗೆ ಕೈಹಾಕಬಾರದು

ನಾವು ನಮ್ಮ ಕುಟುಂಬ ನಿರ್ವಹಣೆಗೆ ಹೇಗೆ ಹಣ ಕೂಡಿಡುತ್ತೇವೋ ಹಾಗೆ ಒಂದು ವಿವಿಯ ಆಡಳಿತ ವಹಿಸಿಕೊಂಡಾಗ ಆ ವಿವಿಯ ಭವಿಷ್ಯಕ್ಕೆ ಪ್ರತೀ ವರ್ಷ ಒಂದಷ್ಟು ಅನುದಾನ ಕೂಡಿಡುತ್ತಾ ಹೋಗುವುದು ಜವಾಬ್ದಾರಿ. ಹಿಂದಿನವರು ಮಾಡಿದ್ದರು ನಾವೂ ಅದನ್ನು ಮಾಡಿದ್ದೆವು. ಮುಂದಿನವರೂ ಮಾಡಬೇಕು. ಮೂಲನಿಧಿಗೆ ಸರ್ಕಾರವಾಗಲಿ, ಯಾರೇ ಆಗಲಿ ಕೈ ಹಾಕಬಾರದು.

-- ಪ್ರೊ.ಬಿ.ತಿಮ್ಮೇಗೌಡ, ಬೆಂವಿವಿ ವಿಶ್ರಾಂತ ಕುಲಪತಿ

ಖಾಸಗಿಗಳಿಗೆ ಮಾರಾಟ

ದೇಶ, ಸಮಾಜದ ಬೆಳವಣಿಗೆಗೆ ಶಿಕ್ಷಣ, ಸಾಕ್ಷರತೆ ಬಹಳ ಮುಖ್ಯ. ಹಾಗಾಗಿ ವಿವಿಗಳ ಆಂತರಿಕ ಆದಾಯದ ಜೊತೆಗೆ ಸರ್ಕಾರಗಳೂ ಪ್ರತೀ ವರ್ಷ ನಿರ್ದಿಷ್ಟ ಅನುದಾನ ನೀಡಬೇಕು. ಆದರೆ, ಪಕ್ಷಾತೀತವಾಗಿ ಎಲ್ಲ ಸರ್ಕಾರಗಳೂ ವಿಶ್ವವಿದ್ಯಾಲಯಗಳ ಬಗ್ಗೆ ತೋರುತ್ತಿರುವ ಅಸಡ್ಡೆ ಇನ್ನೂ 10 ವರ್ಷ ಹೀಗೇ ಮುಂದುವರೆದರೆ ಬಾಗಿಲು ಹಾಕುವ ಸ್ಥಿತಿ ಬರುತ್ತದೆ ಅಥವಾ ಖಾಸಗಿಯವರ ಸಹಭಾಗಿತ್ವದಲ್ಲಿ ಉದ್ಧಾರ ಮಾಡುತ್ತೇವೆ ಎಂದು ಸಾರ್ವಜನಿಕ ವಿವಿಗಳನ್ನು ಮಾರುವ ಹುನ್ನಾರಕ್ಕೆ ಸರ್ಕಾರಗಳು ಇಳಿಯುತ್ತವೆ.

-- ಪ್ರೊ.ಕೆ.ಎನ್‌. ನಿಂಗೇಗೌಡ, ಬೆಂ.ವಿವಿ ನಿವೃತ್ತ ಕುಲಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ