ವಿದ್ಯಾ ಕಾಂತ್‌ರಾಜ್‌ಕನ್ನಡಪ್ರಭ ವಾರ್ತೆ ಸಕಲೇಶಪುರ ಸರ್ಕಾರ ಹೇಮಾವತಿ ನದಿ ಮರಳು ಗಣಿಗಾರಿಕೆಗಾಗಿ ಕರೆದಿರುವ ಟೆಂಡರ್ ಪ್ರಕ್ರಿಯೆ ತಾಲೂಕಿನಲ್ಲಿ ಬಾರಿ ಸದ್ದು ಮಾಡುತ್ತಿದೆ. ೨೦೨೩ರ ಏಪ್ರಿಲ್‌ವರೆಗೆ ಇದ್ದ ಮರಳು ಗಣಿಗಾರಿಕೆ ಅವಧಿ ಮುಕ್ತಾಯದ ನಂತರದ ಎರಡು ವರ್ಷದವರಗೆ ಮರಳು ಗಣಿಗಾರಿಕೆಗೆ ಅವಕಾಶವಿಲ್ಲದ ಕಾರಣ ಜನರು ಅಭಿವೃದ್ಧಿ ಕಾಮಗಾರಿಗಾಗಿ ಮರಳು ದೊರೆಯದೆ ದುಪ್ಪಟ್ಟು ದುಡ್ಡು ಕೊಟ್ಟು ಮರಳುಗಳ್ಳರಿಂದ ಮರಳು ಪಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ತಾಲೂಕಿನಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡುವಂತೆ ಒತ್ತಾಯ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರ ಮರಳು ಗಣಿಗಾರಿಕೆಗೆ ಹೊಸ ವಿಧಾನದಲ್ಲಿ ಟೆಂಡರ್‌ಗೆ ಅವಕಾಶ ಮಾಡಿಕೊಟ್ಟಿದೆ. ಈ ಬಾರಿ ಮರಳು ಟೆಂಡರ್ ಸ್ವರೂಪ: ಮೂರು ತಾಲೂಕುಗಳ ೨೬ ಮರಳು ಗಣಿಗಾರಿಕೆ ಕೇಂದ್ರದಲ್ಲಿ ಈ ಬಾರಿ ಟೆಂಡರ್‌ಗೆ ಅವಕಾಶ ಕಲ್ಪಿಸಲಾಗಿದ್ದು. ೨೦೨೫ ರ ಮರಳು ಟೆಂಡರ್ ಸ್ವರು.ಪ ೨೦೧೭ ರ ಟೆಂಡರ್ ಸ್ವರು.ಪಕ್ಕಿಂತ ಬಿನ್ನವಾಗಿದ್ದು ಕಳ್ಳಾಟಕ್ಕೆ ತಡೆ ಹಾಕುವ ಸಾಕಷ್ಟು ಪ್ರಯತ್ನ ಸರ್ಕಾರದಿಂದ ನಡೆದಿದೆ. ಈ ಬಾರಿ ಟೆಂಡರ್‌ದಾರ ಇಷ್ಟ ಬಂದ ದರಕ್ಕೆ ಟೆಂಡರ್ ಹಾಕುವಂತಿಲ್ಲ. ಪ್ರತಿ ಟನ್ ಮರಳು ಹೊರ ತೆಗೆಯಲು ೨೫೫ ರಿಂದ ೪೨೫ ರು.ಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು ಪ್ರತಿ ಮೆಟ್ರಿಕ್ ಟನ್ ಮರಳನ್ನು ೮೫೦ ರು.ಗಳಿಗೆ ಮಾತ್ರ ಮಾರಾಟ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಟೆಂಡರ್ ಪಡೆದ ಮೊತ್ತ ಹೊರತುಪಡಿಸಿ ಉಳಿಕೆ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂಬುದು ಸದ್ಯದ ಹೊಸ ಟೆಂಡರ್‌ನ ನಿಯಮ. ಈಗಾಗಲೇ ಪ್ರತಿ ಮರಳು ಕೇಂದ್ರದಲ್ಲಿ ದೊರಕುವ ಮರಳಿನ ಪ್ರಮಾಣವನ್ನು ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಿರ್ದರಿಸಿದ್ದು ಮುಂದಿನ ಐದು ವರ್ಷದಲ್ಲಿ ನಿರ್ದರಿಸಿರುವ ಮರಳಿನ ಶೇ ೫೦ ರಷ್ಟು ಮರಳನ್ನು ಹೊರ ತೆಗೆಯಲೇಬೇಕು. ತಪ್ಪಿದಲ್ಲಿ ಮುಂಗಡವಾಗಿ ಸರ್ಕಾರಕ್ಕೆ ಕಟ್ಟಿರುವ ಹಣ ಮುಟ್ಟುಗೊಲಾಗಲಿದೆ.ಇದಲ್ಲದೆ ಸಾಕಷ್ಟು ನಿಯಮಗಳನ್ನು ಟೆಂಡರ್‌ನಲ್ಲಿ ಭಾಗವಹಿಸುವವರು ಪಾಲಿಸಬೇಕಿದ್ದು ನದಿಗೆ ಯಂತ್ರಗಳನ್ನು ಇಳಿಸುವಂತಿಲ್ಲ, ಮಾನವರಿಂದ ಮಾತ್ರ ಮರಳನ್ನು ನದಿಯಿಂದ ಹೊರ ತೆಗೆಯಬೇಕು ಎಂಬ ಷರತ್ತು ಜಾರಿಗೊಳಿಸಿದ್ದರು. ಟೆಂಡರ್‌ನಲ್ಲಿ ಭಾಗವಹಿಸಲು ಸಾಕಷ್ಟು ಜನರು ಉತ್ಸಾಹ ತೊರುತ್ತಿದ್ದು ೨೬ ಕೇಂದ್ರಗಳ ಮರಳು ಗಣಿಗಾರಿಕೆ ಟೆಂಡರ್ ಪಡೆಯಲು ಕನಿಷ್ಠ ಭದ್ರತಾ ಠೇವಣಿಯನ್ನಾಗಿ ೨.೬೦ ಕೋಟಿ ರು.ಗಳನ್ನು ಸರ್ಕಾರಕ್ಕೆ ಪಾವತಿಸಬೇಕಿದೆ. ಅಪಾರ ಮೊತ್ತದ ಹಣ ಒಬ್ಬರೆ ಹೊಂದಿಸುವುದು ಕಷ್ಟಕರ ಎಂಬ ದೃಷ್ಟಿಯಿಂದ ಹಲವು ಜನರು ಹಲವು ಗುಂಪುಗಳನ್ನು ಸೃಷ್ಟಿಸಿಕೊಂಡು ಷೇರುಗಳ ಮೂಲಕ ಟೆಂಡರ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ ಬಾರಿ ನಷ್ಟ: ೨೦೧೭ರಲ್ಲಿ ನಡೆದ ಮರಳು ಗಣಿಗಾರಿಕೆ ಟೆಂಡರ್ ಕೆಲವು ಜನರಿಗೆ ಹಣ ಮಾಡಿಕೊಟ್ಟರೆ ಸಾಕಷ್ಟು ಜನರು ನಷ್ಟ ಅನುಭವಿಸಲು ಕಾರಣವಾಗಿದ್ದು ಹಾಕಿದ ಹಣ ವಾಪಸ್ ಬರಲಿಲ್ಲ ಎಂಬ ಕೊರಗು ಇಂದಿಗೂ ಹಲವರಲ್ಲಿದೆ. ಕಳೆದ ಬಾರಿ ಟೆಂಡರ್ ಪಡೆದಿದ್ದ ಸಾಕಷ್ಟು ಜನರು ನಿಯಮ ಉಲ್ಲಂಘನೆ ಹಾಗೂ ನಿಯಮ ಪೂರ್ಣಗೊಳಿಸಿದ ಕಾರಣ ದಂಡಕ್ಕೆ ಪಾತ್ರರಾಗಿದ್ದು ತಾಲೂಕಿನ ಕನಿಷ್ಠ ೨೦ ಜನರು ₹೪ ಕೋಟಿಯಿಂದ ₹೧೬ ಕೋಟಿವರಗೂ ಸರ್ಕಾರಕ್ಕೆ ಪಾವತಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದು ಇಂದಿಗೂ ವಿಚಾರಣೆ ನಡೆಯುತ್ತಿದೆ. ಇದರಿಂದಾಗಿ ಅಂದು ದಂಡಕ್ಕೆ ತುತ್ತಾಗಿರುವ ಜನರು ಇಂದಿನ ಗಣಿ ಗುತ್ತಿಗೆಯಲ್ಲಿ ಪಾಲ್ಗೊಳ್ಳುವಂತಿಲ್ಲ.
ಕಳೆದ ಬಾರಿ ಟೆಂಡರ್ ರೂಪುರೇಷೆ ಹೀಗಿತ್ತು: ೨೦೧೭ರಲ್ಲಿ ಸಕಲೇಶಪುರ ಹಾಗೂ ಆಲೂರು-ಬೇಲೂರು ತಾಲೂಕಿನ ೨೩ ಮರಳು ಗಣಿಗಾರಿಕೆಗಾಗಿ ನಡೆದ ಟೆಂಡರ್‌ನಲ್ಲಿ ಪ್ರತಿ ಮೆಟ್ರಿಕ್ ಟನ್ ಮರಳು ಎತ್ತುವ ದರ ಸೂಚಿಸಲು ಟೆಂಡರ್‌ದಾರ ಸಂಪೂರ್ಣ ಸ್ವತಂತ್ರನಾಗಿದ್ದು ಇಷ್ಟ ಬಂದ ಬೆಲೆಗೆ ಮರಳು ಎತ್ತಲು ಅವಕಾಶ ನೀಡಲಾಗಿತ್ತು. ಇದರಿಂದಾಗಿ ಪ್ರತಿ ಮರಳು ಗಣಿಗಾರಿಕೆ ಕೇಂದ್ರದ ಮರಳು ತೆಗೆಯಲು ವಿವಿಧ ದರಕ್ಕೆ ಟೆಂಡರ್ ನಡೆಸಲಾಗಿತ್ತು. ತಾಲೂಕಿನ ಕಣಿಗಲಮನೆ ಮರಳು ಗಣಿಗಾರಿಕೆ ಕೇಂದ್ರದಲ್ಲಿ ಪ್ರತಿಟನ್ ಮರಳು ಎತ್ತಲು ೨೫೦೦ ರು. ನಿಗದಿಯಾಗಿದ್ದರೆ ಕೌಡಳ್ಳಿ ಮರಳು ಗಣಿಗಾರಿಕೆ ಕೇಂದ್ರದಲ್ಲಿ ಮರಳು ಎತ್ತಲು ೭೦೦ ರು. ದರ ನಿಗದಿಯಾಗಿತ್ತು. ಇದರಿಂದಾಗಿ ವಿವಿಧ ಮರಳು ಗಣಿಗಾರಿಕೆ ಕೇಂದ್ರದಲ್ಲಿ ವಿವಿಧ ದರಕ್ಕೆ ಮರಳು ಮಾರಾಟ ಮಾಡಲಾಗುತಿತ್ತು.ರಸ್ತೆ ವಿಚಾರವೇ ಇಲ್ಲ ಸರ್ಕಾರ ೨೬ ಗಣಿಗಾರಿಕೆ ಕೇಂದ್ರಗಳ ಟೆಂಡರ್ ಕರೆದಿದ್ದರೂ ಸಾಕಷ್ಟು ಗಣಿ ಕೇಂದ್ರಗಳಿಗೆ ತಲುಪಲು ಇಂದಿಗೂ ರಸ್ತೆಗಳಿಲ್ಲ. ಆದರೆ ಕಳೆದ ಬಾರಿ ಟೆಂಡರ್‌ನಲ್ಲಿ ರಸ್ತೆ ವಿಚಾರ ಪ್ರಸ್ತಾಪಿಸಲಾಗಿದ್ದರಿಂದ ಗಣಿ ಇಲಾಖೆ ಅಧಿಕಾರಿಗಳು ಸಾಕಷ್ಟು ಶ್ರಮ ಹಾಕುವ ಮೂಲಕ ಗಣಿ ಪ್ರದೇಶಕ್ಕೆ ತಲುಪಲು ರಸ್ತೆ ಮಾಡಿ ಕೊಟ್ಟಿದ್ದರು. ಆದರೆ, ಈ ಬಾರಿ ರಸ್ತೆ ಪ್ರಸ್ತಾಪವನ್ನೆ ಮಾಡದೆ ಇಲಾಖೆ ಜಾಣ ನಡೆ ಇಟ್ಟಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಕೆಲವು ಟೆಂಡರ್‌ದಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಏಪ್ರಿಲ್ ಕೊನೆಯ ವಾರದಲ್ಲಿ ಟೆಂಡರ್ ಕರೆಯಲಾಗಿತ್ತು.ಮರಳು ಗಣಿಗಾರಿಕೆ ಪಡೆಯಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಜನರು ನೂರಾರು ಸಂಖ್ಯೆಯಲ್ಲಿ ಟೆಂಡರ್‌ನಲ್ಲಿ ಭಾಗವಹಿಸುತ್ತಿರುವ ವಿಚಾರ ಸದ್ಯ ತಾಲೂಕಿನಲ್ಲಿ ಟ್ರೆಂಡ್‌ನಲ್ಲಿದೆ.ಮಚ್ಚೆಮಂಜು. ಟೆಂಡರ್‌ನಲ್ಲಿ ಭಾಗವಹಿಸಿರುವವರು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಟೆಂಡರ್ ಹೊಸ ರೂಪದಲ್ಲಿದ್ದು ಪಾರದರ್ಶಕ ಟೆಂಡರ್ ನಡೆಸಲು ಇಲಾಖೆ ಮುಂದಾಗಿದೆ. ಗ್ರಾಹಕರಿಗೆ ಕಡಿಮೆ ಮೊತ್ತದಲ್ಲಿ ಮರಳು ನೀಡುವುದು ಸರ್ಕಾರದ ಉದ್ದೇಶಗಳಲ್ಲಿ ಒಂದಾಗಿದೆ.
ನಾಗರಾಜ್. ಅಧಿಕಾರಿ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ