ಬಳ್ಳಾರಿ: ಪ್ರಜಾಪ್ರಭುತ್ವದ ಆಶಯಗಳು ಬಲಗೊಳ್ಳಲು ಹಾಗೂ ದೇಶ ಆರ್ಥಿಕ, ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಮುಂಚೂಣಿಗೆ ಬರಲು ಯುವ ಸಮುದಾಯದ ಪಾತ್ರ ಮಹತ್ವದ್ದು ಎಂದು ದೂರದರ್ಶನ ಕೇಂದ್ರದ ನಿವೃತ್ತ ಉಪನಿರ್ದೇಶಕ ಡಾ.ಸುಧಾಕರ ರಾವ್ ಹೇಳಿದರು.
ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ವೀರಶೈವ ಮಹಾವಿದ್ಯಾಲಯ ವಿವಿ ಸಂಘದ ಜಿಲ್ಲಾ ಕಸಾಪ ಹಾಗೂ ವೀರಶೈವ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯಲ್ಲಿ ವೀರಶೈವ ಮಹಾವಿದ್ಯಾಲಯದ ಆಡಿಟೋರಿಯಂನಲ್ಲಿ “ರಾಷ್ಟ್ರೀಯ ಬಾಹ್ಯಾಕಾಶ ದಿನ” ಅಂಗವಾಗಿ ಗುರುವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಒಂದು ದೇಶವು ಶೈಕ್ಷಣಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಸಾಧನೆಯ ಪಥದತ್ತ ಸಾಗಲು ಯುವಕರು ಕಾರ್ಯ ಪ್ರವೃತ್ತರಾಗಬೇಕು. ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಅಭಿಪ್ರಾಯ ಕೂಡ ಮುಖ್ಯವಾಗಿದ್ದು, ಸಮಾಜ ಒಳಿತಿಗಾಗಿ ಉತ್ತಮ ಚಿಂತನೆಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಬೇಕು. ದೇಶದ ಉಜ್ವಲ ಭವಿಷ್ಯ ರೂಪಿಸುವಲ್ಲಿ ಯುವಪೀಳಿಗೆಯು ಕೈಜೋಡಿಸಬೇಕು ಎಂದರು.
ಕೇಂದ್ರ ಸರ್ಕಾರವು ನಾಗರಿಕ ಹಿತಾಸಕ್ತಿ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಮೊದಲ ಬಾರಿಗೆ ಅಪರಾಧಿಗಳಿಗೆ ಸಹಾನುಭೂತಿ, ತಂತ್ರಜ್ಞಾನ ಆಧಾರಿತ ನ್ಯಾಯ ವ್ಯವಸ್ಥೆ ಮತ್ತು ಸಕಾಲಕ್ಕೆ ನ್ಯಾಯದ ಪರಿಕಲ್ಪನೆಯಡಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಎನ್ನುವ ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿ ಮಾಡಲಾಗಿದ್ದು, ಅವುಗಳು ಸರಳ ಹಾಗೂ ಸಂಪೂರ್ಣ ಪಾರದರ್ಶಕತೆಯಿಂದ ಕೂಡಿವೆ ಎಂದು ತಿಳಿಸಿದರು.ಉಪನ್ಯಾಸ ನೀಡಿದ ಕಿಷ್ಕಿಂದ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ನಾವೀನ್ಯ ವಿಭಾಗದ ಡೀನ್ ಪ್ರೊ.ಎಸ್.ಮಂಜುನಾಥ್, ಚಂದ್ರಯಾನ-3 ಯಶಸ್ವಿ ಉಡಾವಣೆ ಭಾರತದ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ಗರಿಮೆ ತಂದಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಶಿವಮೊಗ್ಗ ಮತ್ತು ಬಳ್ಳಾರಿಯ ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಹಾಗೂ ನೋಡಲ್ ಅಧಿಕಾರಿ ಅಕ್ಷತಾ ಸಿ.ಎಚ್. ಇಸ್ರೋ ಸಂಸ್ಥೆಯು ಚಂದ್ರಯಾನ-3 ರಾಕೆಟ್ ಉಡಾವಣೆ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಸಿದ ಕಾರ್ಯ ಸಾಧನೆಯ ನಿಮಿತ್ತ ಸ್ಮರಣಾರ್ಥಕವಾಗಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಸಂಶೋಧನೆ ಮತ್ತು ಬಾಹ್ಯಾಕಾಶ ಅಧ್ಯಯನಕ್ಕೆ ಒಲವು ತೋರಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪ್ರೊ.ಮಂಜುನಾಥ್ ಎಸ್. ಚಂದ್ರಯಾನ-3 ರಾಕೆಟ್ ಉಡಾವಣೆಯ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತೋರ್ಪಡಿಸಿದರು.
ಪಿಎಂ ಸೂರ್ಯ ಘರ್ ಯೋಜನೆ, ವಿಕಸಿತ ಭಾರತ ಬಜೆಟ್, ಹೊಸ ಕ್ರಿಮಿನಲ್ ಕಾನೂನುಗಳು ಹಾಗೂ ಪಿಎಂ ದೂರದರ್ಶಿತ್ವ-2047ರ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದ ಆಕರ್ಷಣೆಯಾಗಿತ್ತು.ಚಿತ್ರಕಲೆ, ರಂಗೋಲಿ, ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೀರಶೈವ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಿ.ಮನೋಹರ್, ವೀರಶೈವ ಪಿಯು ಕಾಲೇಜಿನ ಪ್ರಾಂಶುಪಾಲ ಪಿ.ಎಸ್.ಗೌತಮ್, ವೀರಶೈವ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಅಧಿಕಾರಿ ಶರಣಬಸವ, ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರಕರಾದ ರಾಮಕೃಷ್ಣ, ಸಿ.ವಿ.ಲಕ್ಷ್ಮಿಕಾಂತ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.