ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ದೇಶದ ಅಭಿವೃದ್ಧಿಯ ವಿಚಾರದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದ್ದು, ಅವರಿಗೆ ಎಲ್ಲರೂ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಪಟ್ಟಣದ ಎಚ್.ಡಿ. ದೇವೇಗೌಡ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಗಳವಾರ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತೀ ಪುರುಷನ ಸಾಧನೆಯ ಹಿಂದೆ ಮಹಿಳೆಯರ ಪಾತ್ರ ಇರಲಿದ್ದು, ಇಬ್ಬರು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಯಶಸ್ಸು ನಿಶ್ಚಿತ ಎಂದರು.
ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಂಡರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದ್ದು, ಈ ವಿಚಾರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಪೋಷಕ ಪಾತ್ರವನ್ನು ವಹಿಸುತ್ತಿದ್ದು, ಇಂತಹ ಸಮಾಜಮುಖಿ ಕೆಲಸ ಮಾಡುತ್ತಿರುವ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಜನಮುಖಿ ಕಾರ್ಯ ರಾಷ್ಟ್ರಕ್ಕೆ ಮಾದರಿ ಎಂದು ಪ್ರಶಂಸಿಸಿದರು.ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ್ ನೆಲ್ಲಿತ್ತಾಯ, ಜಿಲ್ಲಾ ನಿರ್ದೇಶಕ ಮುರುಳೀಧರ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕೆ.ಎಂ. ನಾಗರತ್ನಮ್ಮ, ಸಂಪತ್ಕುಮಾರ್ ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರಮೇಶ್, ತಾಲೂಕು ಒಕ್ಕಲಿಗರ ಸಂಘದ ಹಿರಿಯ ಉಪಾಧ್ಯಕ್ಷ ಎಚ್.ಪಿ. ಪರಶುರಾಮ್, ಪ್ರಧಾನಕಾರ್ಯದರ್ಶಿ ಬಿ. ಅಣ್ಣಾಜಿಗೌಡ, ಪ್ರಸೂತಿ ತಜ್ಷೆ ಡಾ.ಎಸ್.ವೈ. ಭವಾನಿ, ಮಹಾರಾಣಿ ಕಲಾ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ಚಂದ್ರಕಲಾ ಇದ್ದರು.ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ- ರವಿಶಂಕರ್
ಕೆ.ಆರ್. ನಗರ:ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಗಂಧನಹಳ್ಳಿಯಿಂದ ಕಪ್ಪಡಿ ಮಾರ್ಗವಾಗಿ ಹೆಬ್ಬಾಳು ಮೂಲಕ ಕೆ.ಆರ್. ನಗರಕ್ಕೆ ಸಂಪರ್ಕ ಕಲ್ಪಿಸಲು 25 ಕೋಟಿ ರು. ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಡಿ. ರವಿಶಂಕರ್ಹೇಳಿದರು.ಕಪ್ಪಡಿ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತಾವನೆ ಸಲ್ಲಿಸಿದ ನಂತರ ಹಣಕಾಸು ಇಲಾಖೆಯಿಂದ ಅನುಮೋದನೆಯಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಮಂಜೂರಾತಿ ದೊರೆತ ಕೂಡಲೇ ಟೆಂಡರ್ ಕರೆದು ಕೆಲಸ ಆರಂಭಿಸಲಾಗುತ್ತದೆ. , ಶೀಘ್ರದಲ್ಲಿಯೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ರಿಂದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸುವರು ಎಂದು ಅವರು ತಿಳಿಸಿದರು.ಇದರ ಜತೆಗೆ ಈ ಕ್ಷೇತ್ರ ಸೇರಿದಂತೆ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಧಾರ್ಮಿಕ ಕೇಂದ್ರಗಳ ಸಮಗ್ರ ಅಭಿವೃದ್ಧಿಗೆ ಗಮನ ಹರಿಸಲಾಗುತ್ತದೆ ಎಂದರು.ಪೂರ್ವಭಾವಿ ಸಭೆಗೆ ಆಗಮಿಸದೆ ಕರ್ತವ್ಯ ಲೋಪವೆಸಗಿದ ಅಬಕಾರಿ ನಿರೀಕ್ಷಕಿಗೆ ಮೋಹನಕುಮಾರಿ ಅವರಿಗೆ ನೋಟೀಸ್ ನೀಡುವಂತೆ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಅವರಿಗೆ ಸೂಚಿಸಿದರು.