ಬಾಲಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿಯರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಚಾಮರಾಜನಗರ : ಪ್ರಸ್ತುತ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಡಾ.ರೇಣುಕಾದೇವಿ ಹೇಳಿದರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಾಮರಾಜನಗರ ತಾಲೂಕು ಸಂಘದ ವತಿಯಿಂದ ನಗರದ ಪಾರ್ವತಿ ನಗರದ ಬಾಲಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ. ಆಕೆ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ. ಒಬ್ಬ ಶಿಕ್ಷಕಿಯಾಗಿ, ಎಂಜಿನಿಯರ್ ಆಗಿ, ಪೈಲೆಟ್ ಆಗಿ ಕೂಡ ತನ್ನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದರಿಂದ ಪ್ರಸ್ತುತ ದೇಶದ ಆರ್ಥಿಕ ಬೆಳವಣಿಗೆ ಪ್ರಗತಿಯತ್ತ ಸಾಗಿದೆ ಎಂದರು.
ಪ್ರಸ್ತುತ ಮಹಿಳೆಯರ ಸಾಧನೆ ಎಲ್ಲ ಕ್ಷೇತ್ರಗಳಲ್ಲಿಯೂ ಇದೆ. ತಾಂತ್ರಿಕ, ಸಂಶೋಧನಾ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಮಹಿಳೆಯರು ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ಬುದ್ಧಿಶಕ್ತಿಯಿಂದ ಸಮಸ್ಯೆಗಳಿಗೆ ಪರಿಹಾರಗಳನ್ನು ತಂದು ಕೊಟ್ಟಿದ್ದಾರೆ ಎಂದರು. ಇಷ್ಟೆಲ್ಲಾ ಬದಲಾವಣೆಯಾಗುತ್ತಿದ್ದರೂ ಇನ್ನೂ ಸಮಾನತೆಗಾಗಿ ನಾವೂ ಹೋರಾಡುತ್ತಲೇ ಇದ್ದೇವೆ, ಪೂರ್ಣ ಪ್ರಮಾಣದಲ್ಲಿ ಸಮಾನತೆ ಸಿಗಬೇಕಾಗಿದೆ ಎಂದರು.
ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣರಾದವರು ಡಾ.ಅಂಬೇಡ್ಕರ್, ಅವರು ಮತದಾನದಿಂದ ವಂಚಿತರಾಗಿದ್ದವರಿಗೆ ಮತದಾನದ ಹಕ್ಕನ್ನು ಕೊಡಿಸಿದರು. ನಾವು ಆಚರಿಸುತ್ತಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು. ಜಿಲ್ಲೆಯ ಅಭಿವೃದ್ದಿಯಲ್ಲಿ ಮಹಿಳಾ ಅಧಿಕಾರ ಪಾತ್ರ ಅಪಾರವಾಗಿದೆ. ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳು ಉನ್ನತಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ವಿಶೇಷ, ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಚಾಮರಾಜನಗರದಲ್ಲಿ ಮಹಿಳಾ ಸಮಾವೇಶ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ. ರಾಜ್ಯಮಟ್ಟದ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆ ಶೀಘ್ರದಲ್ಲೇ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಮಾತನಾಡಿ, ೧೮ನೇ ಶತಮಾನದವರೆಗೂ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಹಲವಾರು ನಿರ್ಬಂಧಗಳನ್ನು ಹೇರಲಾಗಿತ್ತು ಎಂದರು. 2ನೇ ಮಹಾಯುದ್ದದ ನಂತರ ಸ್ವಾತಂತ್ರ್ಯ, ಸಮಾನತೆಯ ಆಶಯಗಳು ಪ್ರಚಲಿತಗೊಂಡು ದೇಶದಲ್ಲಿ ಬದಲಾದ ವಾತಾವರಣದಿಂದಾಗಿ ಮಹಿಳೆಯರು ಮುಂಚೂಣಿಗೆ ಬರಲು ಅವಕಾಶವಾಯಿತು ಎಂದರು.
ಡಯಟ್ ಉಪನ್ಯಾಸಕಿ ಮಂಜುಳಾ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿಯರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರಾಜ್ಯಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಭರತ್ ಭೂಷಣ್, ಎಂ.ಡಿ.ಮಹದೇವಯ್ಯ, ಸಾವಿತ್ರಿಬಾಯಿಪುಲೆ ಸಂಘದ ಜಿಲ್ಲಾಧ್ಯಕ್ಷೆ ಭವಾನಿ, ಉಪಾಧ್ಯಕ್ಷೆ ನೇತ್ರಾವತಿ, ಸುಧಾ, ಎಸ್.ಸಿ.ರಾಜು, ಕೃಷ್ಣಮೂರ್ತಿ, ಶಬಾನಾಅಂಜು, ಶಾಲಾ ಮುಖ್ಯಶಿಕ್ಷಕಿ ನಂದಿನಿ, ಸಹಶಿಕ್ಷಕರು, ಪೋಷಕರು, ಶಾಲಾಮಕ್ಕಳು ಇದ್ದರು.