ಕನ್ನಡಪ್ರಭ ವಾರ್ತೆ ಬೀದರ್
ದೇಶದ ಸ್ವಾತಂತ್ರ ಸಂಗ್ರಾಮದಲ್ಲಿ ಮಹಿಳೆಯರ ಹೋರಾಟ ವಿಶ್ವ ಮಾನ್ಯವಾಗಿದೆ. ಇತ್ತಿಚೀಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೂಡ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮೂಲಕ ನಾರಿ ಸಮ್ಮಾನಕ್ಕೆ ಭಾಜನರಾಗಿದ್ದಾರೆ ಎಂದು ಗೀತಾ ಪರಿವಾರದ ಉಪಾಧ್ಯಕ್ಷರು ಹಾಗೂ ನಿವೃತ್ತ ಪ್ರಾಚಾರ್ಯರಾದ ಡಾ.ಕಲ್ಪನಾ ದೇಶಪಾಂಡೆ ನುಡಿದರು.ಅವರು ಇಲ್ಲಿನ ಭೀಮನಗರದಲ್ಲಿರುವ ಜಗದಂಬಾ ಭವಾನಿ ಮಂದಿರದಲ್ಲಿ ಗೀತಾ ಪರಿವಾರದಿಂದ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಪೂಜಾ ಸೂರ್ಯವಂಶಿ ಮಾತನಾಡಿ, ನಾರಿ ಶಕ್ತಿ ಎಲ್ಲ ಸಮುದಾಯಗಳ ದೊಡ್ಡ ಶಕ್ತಿಯಾಗಿದೆ. ಇಂದು ಓರ್ವ ಮಹಿಳೆ ಬರಿ ಮಕ್ಕಳನ್ನು ಹೇರುವ ಯಂತ್ರವಾಗಿರದೆ ಬಾನಂಗಳದಲ್ಲಿ ವಿಮಾನ ಹಾರಿಸುವ, ನೀಲಿ ಸಮುದ್ರದಲ್ಲಿ ಹಡಗು ನಡೆಸುವ ಮೂಲಕ ಈಜುವ, ಬೆಟ್ಟ ಗುಡ್ಡಗಳಲ್ಲಿ ರಸ್ತೆಗಳು ನಿರ್ಮಿಸಿ ಬೃಹತ್ತಾದ ವಾಹನಗಳನ್ನು ಚಲಾಯಿಸಿ ಪುರುಷರಿಗಿಂತ ಯಾವುದರಲ್ಲಿ ಕಮ್ಮಿ ಇಲ್ಲ ಎಂಬುದು ರುಜುವಾತು ಮಾಡಿದ್ದಾಳೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ ಗೀತಾ ಪರಿವಾರದ ಅಧ್ಯಕ್ಷೆ ಕಾಂತಾ ಮಾಲಾನಿ ಮಾತನಾಡಿ, ಮಹಿಳೆಯಾದ ನಾವು ಯಾವುದರಲ್ಲಿಯೂ ಕಡಿಮೆ ಇಲ್ಲ ಎಂಬುದನ್ನು ಧೃಢಪಟ್ಟು ಮಾಡಿಕೊಳ್ಳಬೇಕು. ಎಲ್ಲ ಪೂಣ್ಯ ಕಾರ್ಯಗಳು ಹಾಗೂ ಸಭೆ, ಸಮಾರಂಭಗಳು ಮಹಿಳೆಯರಿಲ್ಲದೇ ನಡೆಯುವುದಿಲ್ಲ ಎಂಬುದಕ್ಕೆ ನಾವು ಹೆಮ್ಮೆಪಡಬೇಕು. ಆದರೆ ಇಂದು ವೈಜ್ಞಾನಿಕ ತಳಹದಿಗೆ ಜಾರಿದ ಮಹಿಳೆ ತನ್ನ ಪಾವಿತ್ರ್ಯತೆ ಧರ್ಮವನ್ನು ತ್ಯಜಿಸಿ ಡೈವೊರ್ಸ್‌ಗೆ ಅರ್ಜಿ ಹಾಕುತ್ತಿರುವುದು ವಿಪರ್ಯಾಸ ಎಂದರು.
ಈ ಸಂದರ್ಭದಲ್ಲಿ ಓಣಿಯ ಮಕ್ಕಳು ನಾಟಕ ಹಾಗೂ ಫ್ಯಾಶನ್ ಶೋ ಪ್ರದರ್ಶನದಲ್ಲಿ ಭಾಗವಹಿಸಿದರು. ಇಂದಿರಾ ಪ್ರಾರ್ಥನೆ ಗೀತೆ ಹಾಡಿದರು. ಗೀತಾ ಪರಿವಾರದ ಕಾರ್ಯದರ್ಶಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಶಿಕಲಾ ಶೇಂದ್ರೆ ನಿರೂಪಿಸಿ ವಂದಿಸಿದರು.