ಕನ್ನಡಪ್ರಭ ವಾರ್ತೆ ಸಿಂಧನೂರು
ನಗರದ ಕುಷ್ಟಗಿ ರಸ್ತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ಪದವಿ ವಸತಿ ನಿಲಯ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು ಶನಿವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಕುಂದು-ಕೊರತೆ ಹಾಗೂ ಸೌಲಭ್ಯಗಳ ಕುರಿತು ಪರಿಶೀಲಿಸಿದರು.ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಸುಸಜ್ಜಿತವಾದ ಬೆಡ್‌ಗಳ ವ್ಯವಸ್ಥೆ ಇಲ್ಲ, ಕೊಠಡಿಗಳಲ್ಲಿ ಫ್ಯಾನ್ ಸಮಸ್ಯೆ, ಸ್ನಾನ ಗೃಹಗಳ ಬಾಗಿಲುಗಳು ಮುರಾಬಟ್ಟೆಯಾಗಿವೆ. ಕೊಠಡಿಗಳ ಕಿಟಕಿಗಳು ಮುರಿದು ಹೋಗಿವೆ. ಈ ಕುರಿತು ವಿದ್ಯಾರ್ಥಿನಿಯರು ಗಮನ ತಂದರೂ ಕೂಡ ಸ್ಪಂದನೆ ನೀಡಿಲ್ಲವೆಂದು ಹಾಸ್ಟೆಲ್ ಮೇಲ್ವಿಚಾರಕಿ ಮಂಜುಳಾ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಾ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಕ್ಕಿಯನ್ನು ಪರಿಶೀಲಿಸಿದ ಬಸನಗೌಡ ಬಾದರ್ಲಿ ಅವರು, ಆಹಾರ ಇಲಾಖೆಯ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಹಾಸ್ಟಲ್‌ಗೆ ಪೂರೈಕೆ ಮಾಡುತ್ತಿರುವ ಅಕ್ಕಿಯು ಕಳಪೆ ಮಟ್ಟದಲ್ಲಿದ್ದು, ಇದನ್ನು ಬದಲಿಸಿ ಗುಣಮಟ್ಟದ ಅಕ್ಕಿ ಪೂರೈಕೆ ಮಾಡಬೇಕು ಎಂದು ಸೂಚಿಸಿದರು.ಗ್ರಂಥಾಲಯಗಳಲ್ಲಿ ಪುಸ್ತಕಗಳು, ದಿನಪತ್ರಿಕೆ, ಮಾಸಿಕ ಪತ್ರಿಕೆ, ಸ್ಪರ್ಧಾತ್ಮಕ ಪುಸ್ತಕಗಳ ಕೊರತೆ ಇದೆ. ಅಲ್ಲದೆ ಬಳಕೆಗೆ ಉಪ್ಪು ನೀರು ಪೂರೈಕೆ ಆಗುತ್ತಿರುವುದನ್ನು ಗಮನಿಸಿ ತಕ್ಷಣವೇ ನಗರಸಭೆ ಅಧಿಕಾರಿಗಳಿಗೆ ಕರೆ ಮಾಡಿ ಹೊಸದಾಗಿ ಪೈಪ್‌ಲೈನ್ ಹಾಕಿ ಬಳಕೆಗೆ ಸೂಕ್ತ ನೀರು ಪೂರೈಕೆ ಮಾಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿ, ಪ್ರತಿ ತಿಂಗಳು ವೇತನ ಹಾಗೂ ಅಡುಗೆ ಸಾಮಗ್ರಿ ಪೂರೈಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿಗೆ ಸೂಚಿಸಿದ ಅವರು ವಿದ್ಯಾರ್ಥಿನಿಯರೊಂದಿಗೆ ಉಪಹಾರ ಸೇವಿಸಿದರು.ತದನಂತರ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಆಲಿಸಿದರು. ಈ ವೇಳೆ ಮುಖಂಡರಾದ ಶರಣಯ್ಯ ಕೋಟೆ, ಬಾಷಾ ಬಳಗಾನೂರು ಇದ್ದರು.