ಕನ್ನಡಪ್ರಭ ವಾರ್ತೆ ಹುಣಸೂರು
ಮಕ್ಕಳು ವೃದ್ಧರಾದಿಯಾಗಿ ಬಣ್ಣಬಣ್ಣದ ಓಕುಳಿ ನೀರಲ್ಲಿ ಮಿಂದೆದ್ದರು.., ಕೈಗೆ ಕಟ್ಟಿದ್ದ ನೀರಿನ ಅಂಡಿನಲ್ಲಿ (ನೀರೆರೆಚುವ ಮರದ ಚೊಂಬು) ಹುಡುಗರು ಒಬ್ಬರಿಗೊಬ್ಬರು ಹೊಡೆದುಕೊಳ್ಳಲು ಪೈಪೋಟಿ ನಡೆಸಿದರು.ಗ್ರಾಮದ ತುಂಬೆಲ್ಲಾ ಅಟ್ಟಾಡಿಸಿಕೊಂಡು ನೀರಿನ ಏಟಿನ ರುಚಿ ತೋರಿಸಿದರು.
ತಾಲೂಕಿನ ಮೋದೂರು ಗ್ರಾಮದಲ್ಲಿ ಓಕುಳಿ ಹಬ್ಬದ ಅಂಗವಾಗಿ ನಡೆದ ಬಣ್ಣದ ನೀರಿನ ಓಕುಳಿಯಾಟದ ದೃಶ್ಯ ನೋಡುಗರನ್ನು ಖುಷಿ ನೀಡುವಲ್ಲಿ ಯಶಸ್ವಿಯಾಯಿತು. ಸಗಣಿ ಓಕುಳಿಯಾಟದೊಂದಿಗೆ ಪ್ರಾರಂಭಗೊಂಡ ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವದ ಅಂಗವಾಗಿ ಎರಡನೇ ದಿನ ಬಣ್ಣದ ನೀರಿನ ಒಕುಳಿಯಾಟವನ್ನು ಆಡಿದ ಗ್ರಾಮೀಣರು ಸಂತೋಷಗೊಂಡರು.ಹರಕೆ ಹೊತ್ತುವರು ಬಂದರು..ಕುರಿಗಳ ಪ್ರದಕ್ಷಣೆ..
ಗ್ರಾಮದ ಗೌರಿಕೆರೆಯಿಂದ ಹೆಂಗಳೆಯುರು ಹಾಗೂ ಮುತ್ತೈದೆಯರು ಬಿಂದಿಗೆಯಲ್ಲಿ ಗಂಗೆಗೆ ಪೂಜೆ ಸಲ್ಲಿಸಿ ನೀರನ್ನು ಹೊತ್ತು ಗ್ರಾಮದ ಬಸವೇಶ್ವರ ಸ್ವಾಮಿ ದೇವಾಲಯದ ಆವರಣಕ್ಕೆ ತಂದರು. ಮೆರವಣಿಗೆಯಲ್ಲಿ ಕೊಂಬು, ಕಹಳೆ, ಛತ್ರ ಛಾಮರ, ಮಂಗಳ ವಾದ್ಯದವರೊಂದಿಗೆ ಬಾಯಿಗೆ ಬೀಗ ಜಡಿದುಕೊಳ್ಳುವ ಹರಕೆ ಹೊತ್ತವರು ಸ್ನಾನ ಮಾಡಿಕೊಂಡು ಮೆರವಣಿಗೆಯಲ್ಲಿ ಬಂದರು.ಮೋದೂರು ಎಂ. ಕೊಪ್ಪಲಿನ ಜನರು ಸಿಂಗಾರಗೊಂಡ ಎತ್ತಿನ ಗಾಡಿಯಲ್ಲಿ ಡ್ರಂಗಳ ಮೂಲಕ ಕೆರೆಯಿಂದ ನೀರನ್ನು ತಂದು ದೇವಾಲಯದ ಪ್ರಾಂಗಣದ ಮುಂಭಾಗ ಸಾಲಾಗಿ ನಿಲ್ಲಿಸಿದರು.
ದೇವಾಲಯದ ಆವರಣದ ಮುಂಭಾಗವಿರುವ ಓಕುಳಿತೊಟ್ಟಿಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದ ನಂತರ ಹೆಂಗಳೆಯರು ತಂದಿದ್ದ ಬಿಂದಿಗೆ ನೀರನ್ನು ತೊಟ್ಟಿಗೆ ಹಾಕಲಾಯಿತು. ನಂತರ ತೊಟ್ಟಿಯ ನೀರಿಗೂ ಅರ್ಚಕರು ಪೂಜೆ ಸಲ್ಲಿಸಿದರು. ಮೋದೂರು ಪಿ. ಕೊಪ್ಪಲು ಗ್ರಾಮಸ್ಥರು ಕರೆತಂದಿದ್ದ 500ಕ್ಕೂ ಹೆಚ್ಚು ಕುರಿಗಳನ್ನು ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಣೆ ಹಾಕಿಸಲಾಯಿತು. ಕುರಿಗಳು ಅಡ್ಡದಿಡ್ಡ ಓಡಾಡಬಾರದೆಂದು ಗ್ರಾಮದ ಯುವಕರು ಅಲ್ಲಲಿ ಅಡ್ಡಲಾಗಿ ನಿಂತು ಕುರಿಗಳು ಜೋರಾಡಿ ಓಡಿದವು.ನಂತರ ಎತ್ತಿನ ಗಾಡಿಯಲ್ಲಿ ತಂದಿದ್ದ ನೀರೆಲ್ಲವನ್ನೂ ತೊಟ್ಟಿಗೆ ಹಾಕಲಾಯಿತು. ಅರ್ಚಕರು ಸಾಂಕೇತಿಕವಾಗಿ ಓಕುಳಿಯಾಡುವ ನಾಲ್ಕಾರು ಹುಡುಗರಿಗೆ ಪೂಜೆ ಸಲ್ಲಿಸಿದ ಹೂವಿನ ಹಾರವನ್ನು ಕೊರಳಿಗೆ ಹಾಕಿ ಓಕುಳಿಯಾಡಲು ಒಪ್ಪಿಗೆ ಸೂಚಿಸಿದ್ದೇ ತಡ ಎಲ್ಲರೂ ನೀರನ್ನು ಬಿಂದಿಗೆಯಲ್ಲಿ ತುಂಬಿಸಿಕೊಂಡು ಒಬ್ಬರ ಮೇಲೊಬ್ಬರು ಎರಚಿಕೊಳ್ಳಲು ಪ್ರಾರಂಭಿಸಿದರು. ಮಹಿಳೆಯರು ದೂರದಲ್ಲಿ ನಿಂತು ನೋಡಿ ಸಂತಸಪಟ್ಟರೆ, ಪಡ್ಡೆ ಹುಡುಗರು ಗ್ರಾಮದ ಬೀದಿ ತುಂಬೆಲ್ಲ ಓಡಾಡಿಕೊಂಡು ನೀರು ಎರಚಿಕೊಂಡರು.
ಓಕುಳಿಯಾಟಕ್ಕಾಗಿ ಮನೆಮುಂದೆ ತುಂಬಿಸಿಟ್ಟಿದ್ದ ನೀರನ್ನು ತೆಗೆದು ಎರಚಿಕೊಂಡು ಸಂತಸಪಟ್ಟರು. ಓಕುಳಿ ಸಂಭ್ರಮದಲ್ಲಿ ಗ್ರಾಮದ ಯಜಮಾನರು, ಮುಖಂಡರು ಮತ್ತು ಜನಪ್ರತಿನಿಧಿಗಳು ಭಾಗವಹಿಸಿದ್ದರು.