ಎರಡು ಹಂತಗಳಲ್ಲಿ ಯಶಸ್ವಿಯಾಗಿ ನಡೆದ ಶಾಲಾ ಸಂಸತ್ ಚುನಾವಣೆ

KannadaprabhaNewsNetwork | Published : Jul 9, 2024 12:47 AM

ಸಾರಾಂಶ

ಶೈಕ್ಷಣಿಕ ಕಾರ್ಯಕಲಾಪಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಪತ್ಯೇತರ ಚಟುವಟಿಕೆಗಳ ಹಾಗೂ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯಿಸುವ ಭಾಗವಾಗಿ ಪ್ರಥಮ ಹಂತದಲ್ಲಿ ತರಗತಿವಾರು ನಡೆದ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮುಖ್ಯ ಚುನಾವಣಾಧಿಕಾರಿಯಿಂದ ನಾಮಪತ್ರ ಪಡೆದು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, 10 ರು. ಠೇವಣಿಯಾಗಿಟ್ಟು ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆ ವಿಭಾಗದಲ್ಲಿ ಪ್ರಸಕ್ತ ಸಾಲಿನ ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆ ಎರಡು ಹಂತಗಳಲ್ಲಿ ಯಶಸ್ವಿಯಾಗಿ ನಡೆಯಿತು.

ಶೈಕ್ಷಣಿಕ ಕಾರ್ಯಕಲಾಪಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಪತ್ಯೇತರ ಚಟುವಟಿಕೆಗಳ ಹಾಗೂ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯಿಸುವ ಭಾಗವಾಗಿ ಪ್ರಥಮ ಹಂತದಲ್ಲಿ ತರಗತಿವಾರು ನಡೆದ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮುಖ್ಯ ಚುನಾವಣಾಧಿಕಾರಿಯಿಂದ ನಾಮಪತ್ರ ಪಡೆದು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, 10 ರು. ಠೇವಣಿಯಾಗಿಟ್ಟು ನಾಮಪತ್ರ ಸಲ್ಲಿಸಿದರು.

ಒಟ್ಟು 13 ಮಂತ್ರಿ ಸ್ಥಾನಗಳಿಗೆ 24 ಮಂದಿ ವಿದ್ಯಾರ್ಥಿಗಳು ಓರ್ವ ಸೂಚಕ ಮತ್ತು ಅನುಮೋದಕರ ಸಹಿಯೊಂದಿಗೆ ಉಮೇದುವಾರಿಕೆ ಸಲ್ಲಿಸಿದ್ದರು. ಲೋಕಸಭೆ ಮತ್ತು ವಿಧಾನಸಭೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ವಿದ್ಯಾರ್ಥಿ ಅಭ್ಯರ್ಥಿಗಳು ತರಗತಿವಾರು ಮತ ಯಾಚನೆ ಮಾಡಿ ಬೆಂಬಲಿಸುವಂತೆ ಕೋರಿದರು.

ಬಳಿಕ ನಡೆದ ಮತದಾನದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಸೇರಿ ಒಟ್ಟು 128 ಮಂದಿ ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಹಕ್ಕು ಚಲಾಯಿಸಿದರು. ನಂತರ ನಡೆದ ಮತ ಎಣಿಕೆಯಲ್ಲಿ 109 ಮತಗಳು ಸ್ವೀಕಾರಾರ್ಹವಾದವು. ಇನ್ನುಳಿದಂತೆ 2 ನೋಟಾ ಮತ್ತು 17 ಕುಲಗೆಟ್ಟ ಮತಗಳಾಗಿದ್ದವು.

ಅತ್ಯಧಿಕ ಮತಗಳ ಪಡೆದು ವಿಜೇತರಾದ ಧವನಕುಮಾರ್ (77), ಸಿ.ಕೆ.ಚಿರಂಜೀವಿ (69), ಪಿ.ಎಸ್.ದಿಲೀಪ್ (65), ಯಧುಕಿರಣ್ (65), ಚಿದಂಬರ (63), ಬಿ.ಜೆ.ಲಕ್ಷ್ಮೀ (63), ಶ್ರೇಯಸ್ (61), ಆರ್.ಸಂಜಯ್ (61), ಕೆ.ಸಹನಾ (59), ಎಸ್.ಸೃಜನ್ ಬಾಲಾಜಿ (57), ಬಿ.ಎಸ್.ಲಿಖಿತಾ(57), ಸಿದ್ದರಾಜು (51), ಎಚ್.ಪಿ.ಮದನ್ (49) ಅವರು 2024-25ನೇ ಶಾಲಾ ಸಂಸತ್ತಿನ ಮಂತ್ರಿ ಮಂಡಲಕ್ಕೆ ಆಯ್ಕೆಯಾದರು.

ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯ ಶಿಕ್ಷಕ ಎನ್.ಮಹದೇವಪ್ಪ ಅವರು ಇಡೀ ಚುನಾವಣಾ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಿದರು. ಮತಗಟ್ಟೆಯ ಅಧಿಕಾರಿಗಳಾಗಿ ಶಿಕ್ಷಕರಾದ ಆರ್.ಸಿ.ನಾಗೇಗೌಡ, ಕೆ.ಎನ್.ಜಯರಾಂ, ಸಿ.ಮಹೇಶ, ಚನ್ನೇಗೌಡ, ಸಿಬ್ಬಂದಿ ಎಂ.ಎಚ್.ಕಾರ್ತಿಕ್, ಶಿಕ್ಷಕಿಯರಾದ ಬಿ.ಚಂಪಾ, ಕರೀಮುನ್ನೀಸಾ, ಶೋಭಾ ಪವಾರ, ಎಸ್.ಟಿ.ಸವಿತಾ, ಬಿ.ಆರ್.ಸೌಮ್ಯಲತಾ ಕಾರ್ಯನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ರಾಮಕೃಷ್ಣೇಗೌಡ ಚುನಾವಣೆ ಉಸ್ತುವಾರಿ ವಹಿಸಿದ್ದರು.

ಶಾಲಾ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ತುಂಬಾ ಹುರುಪಿನಿಂದಲೇ ಭಾಗವಹಿದ್ದರು. ಅವರಿಗೆ ಸಮಾಜ ವಿಜ್ಞಾನದ ಪಠ್ಯವಾದ ಪ್ರಜಾಪ್ರಭುತ್ವ ವ್ಯವಸ್ಥೆ, ಸರ್ಕಾರ, ಚುನಾವಣೆ, ಮತದಾನ ಪರಿಕಲ್ಪನೆಗಳ ಬಗ್ಗೆ ಪ್ರತ್ಯಕ್ಷವಾದ ಅನುಭವ ಉಂಟುಮಾಡಿತು. ಜೊತೆಗೆ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಸಹ ಜಾಗೃತಿ ಮೂಡಿಸುವಲ್ಲಿ ಸಫಲವಾಯಿತು.

Share this article