ಗೋಮಾಳವೆಂದು ಶೆಡ್ ಹಾಕಿದ್ದ ಕೆಂಚಟ್ಟಳ್ಳಿ ಗ್ರಾಮಸ್ಥರು । ಡಿಸಿ ಆದೇಶದಂತೆ ಕ್ರಮಕನ್ನಡಪ್ರಭ ವಾರ್ತೆ ಹಾಸನ
ಟ್ರಕ್ ಟರ್ಮಿನಲ್‌ಗಾಗಿ ಮೀಸಲಿಟ್ಟ ಜಾಗದಲ್ಲಿ ಗ್ರಾಮಸ್ಥರು ಶೆಡ್ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಗೋಮಾಳದ ಜಾಗವನ್ನು ಜಿಲ್ಲಾಧಿಕಾರಿ ಆದೇಶದಂತೆ ಬುಧವಾರ ಬೆಳ್ಳಂ ಬೆಳಿಗ್ಗೆ ಪೊಲೀಸರ ಸರ್ಪಗಾವಲಿನಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ವಿಷ ಕುಡಿಯುವುದಾಗಿ ಹೇಳಿದ ಮಹಿಳಾ ಮತ್ತು ಪುರುಷ ಗ್ರಾಮಸ್ಥರನ್ನು ಮುನ್ನೆಚ್ಚರಿಕ ಕ್ರಮವಾಗಿ ಬಂಧಿಸಿದ ಘಟನೆ ನಡೆಯಿತು.ತಾಲೂಕಿನ ಕೆಂಚಟಹಳ್ಳಿ ಗ್ರಾಮದ ಹೇಮಗಂಗೋತ್ರಿ ಎದುರು ಇರುವ ಗೋಮಾಳ ಜಾಗವನ್ನು ಜಿಲ್ಲಾಡಳಿತದ ವತಿಯಿಂದ ತೆರವುಗೊಳಿಸಲಾಯಿತು. ಈ ಗೋಮಾಳ ಜಾಗದಲ್ಲಿ ಗ್ರಾಮದ ಸುಮಾರು ೩೦ ಜನ ರೈತರು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಂಡು ಬಗರ್ ಹುಕ್ಕುಂ ಕಾಯ್ದೆ ಅಡಿ ಅನ್ನದಾತರಿಗೆ ಜಮೀನು ಮಂಜೂರು ಮಾಡುವಂತೆ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದರು.
ಜಿಲ್ಲಾಡಳಿತ ರೈತರ ಮನವಿ ತಿರಸ್ಕರಿಸಿ ಸೂಕ್ತ ಪೊಲೀಸ್ ಬಂದೋಬಸ್ತ್‌ನಲ್ಲಿ ಗೋಮಾಳ ತೆರವುಗೊಳಿಸಿದೆ. ಗೋಮಾಳ ಜಮೀನಿನಲ್ಲಿ ಇದ್ದ ಶೆಡ್ ತೆರವು ಮಾಡಲು ಸುಮಾರು ೨೦೦ಕ್ಕಿಂತ ಹೆಚ್ಚು ಜನ ಪೊಲೀಸರು ಎರಡು ಬಸ್, ಎರಡು ವ್ಯಾನ್ ಹಾಗೂ ಅನೇಕ ಜೀಪ್ ಮೂಲಕ ಆಗಮಿಸಿದ್ದರು. ಈ ವೇಳೆ ಕೆಲ ಸಮಯ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ಉಂಟಾಯಿತು. ಗ್ರಾಮದ ಕೆಲ ವಿಷ ಕುಡಿಯಲು ಮುಂದಾದಾಗ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಯಿತು. ಹೆಚ್ಚು ಜನ ಪೊಲೀಸರು ಸ್ಥಳದಲ್ಲಿ ಇದ್ದುದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ.ತಾಲೂಕು ಪಂಚಾಯತಿ ಸದಸ್ಯ ದಿನೇಶ್ ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ೧೫ ವರ್ಷಗಳ ಹಿಂದೆ ಈ ಜಾಗ ಆಶ್ರಮಕ್ಕೆ ಬೇಕು ಎಂದು ಜಿಲ್ಲಾಧಿಕಾರಿ ಮತ್ತು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈ ಜಾಗ ಕೊಡುಲು ಸಾಧ್ಯವಾಗುವುದಿಲ್ಲ ಎಂದು ಹಿಂಬರಹ ಕೊಟ್ಟಿದ್ದರು. ಕಳೆದ ಎರಡು ಮೂರು ವರ್ಷಗಳ ಹಿಂದೆ ಟಕ್ ಟರ್ಮಿನಲ್‌ಗೆ ಕೊಡುವುದಾಗಿ ಹೇಳಲಾಗಿತ್ತು. ಶಿಕ್ಷಣ ಸಂಸ್ಥೆ ಇರುವ ಕಡೆ ಬೇಡ ಎಂದು ಆದೇಶ ಮಾಡಲಾಗಿತ್ತು. ರಾಜ್ಯದಲ್ಲೇ ಇದು ದೊಡ್ಡ ಸುದ್ದಿ ಆಗಿತ್ತು. ಕೆಲವರು ಏಕಾಏಕಿ ಬಂದು ಹಲವು ದಿನಗಳಿಂದ ಶೆಡ್ ಹಾಕಿ ವಾಸವಾಗಿದ್ದರು. ಆದರೆ ಅದು ಕೋರ್ಟ್‌ನಲ್ಲಿ ಇರುವುದರಿಂದ ಜಿಲ್ಲಾಡಳಿತದ ವಶಕ್ಕೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಏಕಾಏಕಿ ಬಂದು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ ಎಂದು ದೂರಿದರು.
ಕಾನೂನು ಪ್ರಕಾರ ಆಶ್ರಮಕ್ಕೆ ಅವಕಾಶ ಮಾಡಿಕೊಡಬೇಕು. ಬೇರೆ ಯಾವುದೇ ಉದ್ದೇಶಕ್ಕೆ ಮೀಸಲಿಡಬಾರದು ಎಂಬುದು ಗ್ರಾಮಸ್ಥರ ಪರವಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.ಗ್ರಾಮದ ಕಪ್ಪಣ್ಣಗೌಡ, ಸುಶೀಲಮ್ಮ, ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.ಟ್ರಕ್ ಟರ್ಮಿನಲ್ ಜಾಗದಲ್ಲಿ ಹಾಕಲಾಗಿದ್ದ ಶೆಡ್‌ಗಳನ್ನು ಹಾಸನ ಜಿಲ್ಲಾಡಳಿತದಿಂದ ತೆರವು ಮಾಡಿಸಲಾಯಿತು.