ಸಿದ್ದರಾಮಯ್ಯ ಸರ್ಕಾರ ಒಂದು ವರ್ಷದ ಹಾದಿ

KannadaprabhaNewsNetwork | Published : May 20, 2024 1:31 AM

ಸಾರಾಂಶ

ಸೋಮವಾರಕ್ಕೆ ಸರಿಯಾಗಿ ಒಂದು ವರ್ಷದ ಹಿಂದೆ ಕರುನಾಡಿನ 22ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ ಅವರು ತಮ್ಮ ಮುಂದೆ ಇದ್ದ ಎರಡು ಬಹುದೊಡ್ಡ ಅಗ್ನಿ ಪರೀಕ್ಷೆಯ ಪೈಕಿ ಒಂದನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇದೀಗ ಎರಡನೇ ಪರೀಕ್ಷೆ ಎದುರಿಸುವ ಸಮಯ!

ಕನ್ನಡಪ್ರಭ ವಾರ್ತೆ ಬೆಂಗಳೂರು

ಸೋಮವಾರಕ್ಕೆ ಸರಿಯಾಗಿ ಒಂದು ವರ್ಷದ ಹಿಂದೆ ಕರುನಾಡಿನ 22ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ ಅವರು ತಮ್ಮ ಮುಂದೆ ಇದ್ದ ಎರಡು ಬಹುದೊಡ್ಡ ಅಗ್ನಿ ಪರೀಕ್ಷೆಯ ಪೈಕಿ ಒಂದನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇದೀಗ ಎರಡನೇ ಪರೀಕ್ಷೆ ಎದುರಿಸುವ ಸಮಯ!

ಹೌದು, ಬಿಜೆಪಿ ಪ್ರಯೋಗಿಸಿ ಯಶಸ್ವಿಯಾಗಿರುವ ಬಲಪಂಥೀಯ ರಾಜಕಾರಣಕ್ಕೆ ಪ್ರತಿ ತಂತ್ರವಾಗಿ ಪ್ರಯೋಗವಾದ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಸಾಧಿಸಲು ನೆರವಾದ ಪಂಚ ಗ್ಯಾರಂಟಿ ಯೋಜನೆಗಳನ್ನು ಮೊದಲ ವರ್ಷದಲ್ಲೇ ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಅದರ ಅಲೆಯ ಮೇಲೇರಿ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಭರ್ಜರಿ ಎದಿರೇಟು ನೀಡುವ ನಿರೀಕ್ಷೆಯಲ್ಲಿದ್ದಾರೆ.

ತನ್ಮೂಲಕ ರಾಜ್ಯ ಬೊಕ್ಕಸಕ್ಕೆ ಭಾರಿ ಹೊರೆ ಬೀಳುವ ಈ ಯೋಜನೆಗಳು ಘೋಷಣೆ ಮಾಡಬಹುದಷ್ಟೇ, ಜಾರಿ ಅಸಾಧ್ಯ ಎಂಬ ಸವಾಲಿನ ರೂಪದ ಟೀಕೆಗಳಿಗೆ ಸಮರ್ಥ ಉತ್ತರವನ್ನು ನೀಡಿದ್ದಾರೆ. ಇದೀಗ ಗ್ಯಾರಂಟಿ ಯೋಜನೆ ಜಾರಿಗೊಳಿಸಿಯೂ ಅಭಿವೃದ್ಧಿ ಯೋಜನೆಗಳಿಗೂ ಧಕ್ಕೆ ಬರುವುದಿಲ್ಲ ಎಂಬುದನ್ನು ನಿರೂಪಿಸುವ ಹಾಗೂ ಮೊದಲ ವರ್ಷದಲ್ಲಿ ಅಷ್ಟೇನು ಅನುದಾನ ಕಾಣದ ಆದ್ಯತಾ ಕ್ಷೇತ್ರಗಳಿಗೆ ಬಲ ತುಂಬಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಸಾಧಿಸಿ ತೋರಿಸುವ ಸವಾಲು ಎದುರಾಗಿದೆ.

ದಿಟ್ಟ ನಿರ್ಧಾರ, ತಂತ್ರಗಾರಿಕೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ವರ್ಷದ ಆಡಳಿತದಲ್ಲಿ ಗ್ಯಾರಂಟಿ ಹೊರತುಪಡಿಸಿದರೆ ಹೈಲೈಟ್‌ ಎನಿಸಿದ್ದು ಜಾತಿ ಗಣತಿ ವರದಿ ಸ್ವೀಕಾರದಂತಹ ಗಟ್ಟಿ ನಿರ್ಧಾರ. ಪರಿಶಿಷ್ಟ ಜಾತಿ ಸಮುದಾಯದ ಒಳ ಮೀಸಲಾತಿ ಬೇಡಿಕೆಯ ಹೊಣೆಯನ್ನು ಕೇಂದ್ರದ ಹೆಗಲಿಗೇರಿಸಿದ ತಂತ್ರಗಾರಿಕೆ, ಕನ್ನಡ ನಾಮಫಲಕ ಕಡ್ಡಾಯದಂತಹ ದಿಟ್ಟ ಕ್ರಮ, ಹಿಂದಿನ ಸರ್ಕಾರದ ವಿವಾದಾತ್ಮಕ ಎಪಿಎಂಸಿ ಕಾಯ್ದೆ, ಧರ್ಮಾದಾಯ ಕಾಯ್ದೆ ಹಿಂಪಡೆಯುವ ತೀರ್ಮಾನಗಳು.

ಇದೇ ವೇಳೆ ಸರ್ಕಾರವನ್ನು ಬಹುವಾಗಿ ಕಾಡಿದ್ದು ಬರಗಾಲ ಹಾಗೂ ಬರ ಸಂದರ್ಭದಲ್ಲಿ ಕೇಂದ್ರ ಸರ್ಕಾರದೊಂದಿಗೆ ನಡೆದ ತಿಕ್ಕಾಟ. ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚು ಸದ್ದು ಮಾಡಿದ್ದ ಪಿಎಸ್‌ಐ ಹಗರಣ, 40 ಪರ್ಸೆಂಟ್‌ ಕಮಿಷನ್‌, ಕೊರೋನಾ ಖರೀದಿ ಹಗರಣಗಳ ತನಿಖೆ ಮೂಲಕ ಪ್ರತಿಪಕ್ಷವನ್ನು ಹದ್ದುಬಸ್ತಿನಲ್ಲಿಡುವ ಪ್ರಯತ್ನ ಕೂಡ ನಡೆಯಿತು.

ಹಾಗೇ ನೋಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ 2013-18ರ ಮೊದಲ ಅವಧಿಯ ಸರ್ಕಾರಕ್ಕೂ ಕಳೆದ ಒಂದು ವರ್ಷದ ಸಿದ್ದರಾಮಯ್ಯ 2.0 ಸರ್ಕಾರದ ಆಡಳಿತಕ್ಕೂ ಸಾಮ್ಯತೆ ಇದೆ.ಸಿದ್ದು 1.0, ಸಿದ್ದು 2.0 ಸರ್ಕಾರಕ್ಕೆ ಸಾಮ್ಯತೆ

2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಏಕಸದಸ್ಯ ಸಚಿವ ಸಂಪುಟ ಸಭೆಯಲ್ಲೇ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌, ಕೃಷಿ ಭಾಗ್ಯ ಸೇರಿದಂತೆ ಸಾಲು-ಸಾಲು ಯೋಜನೆಗಳನ್ನು ಅನುಷ್ಠಾನಗೊಳಿಸಿದರು. ಅದರ ಬೆನ್ನಲ್ಲೇ ಲೋಕಸಭೆ ಚುನಾವಣೆ ಮೂಲಕ ಅಗ್ನಿಪರೀಕ್ಷೆ ಎದುರಾಗಿತ್ತು.

ಪ್ರಸಕ್ತ ಅವಧಿಯಲ್ಲಿ ಮೊದಲ ಸಚಿವ ಸಂಪುಟ ಸಭೆಯಲ್ಲೇ ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮೀ, ಯುವನಿಧಿ ಸೇರಿ ಐದೂ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ನಿಯಮಗಳನ್ನು ರೂಪಿಸುವಂತೆ ಆದೇಶ ಹೊರಡಿಸಿದರು. ಆರು ತಿಂಗಳ ಒಳಗಾಗಿ ವಾರ್ಷಿಕ 52,000 ಕೋಟಿ ರು. ವೆಚ್ಚದಲ್ಲಿ ಐದೂ ಯೋಜನೆಗಳನ್ನೂ ಯಶಸ್ವಿಯಾಗಿ ಫಲಾನುಭವಿಗಳಿಗೆ ತಲುಪಿಸಿದರು. ಇದರಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಕುಂಟುತ್ತಾ ಸಾಗುವಾಗಲೇ ತೀವ್ರ ಬರ ಹಾಗೂ ಚುನಾವಣೆ ಎದುರಾಯಿತು. ಈ ಸಮಸ್ಯೆಗಳನ್ನು ನಿಭಾಯಿಸಲು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಇನ್ನು 2013-18ರ ಅವಧಿಯಲ್ಲಿ ಎಂ.ಎಂ. ಕಲಬುರಗಿ ಹತ್ಯೆ, ಗೌರಿ ಲಂಕೇಶ್‌ ಹತ್ಯೆಯಂತಹ ಪ್ರಕರಣಗಳು ಕಾಡಿದರೆ ಇದೀಗ ನೇಹಾ ಸೇರಿದಂತೆ ಯುವತಿಯರ ಸರಣಿ ಕೊಲೆಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ.

ಪಂಚಗ್ಯಾರಂಟಿ ಯಶಸ್ಸು

ಮೊದಲ 8 ತಿಂಗಳಲ್ಲೇ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಮಾಡಲಾಗಿದೆ. ‘ಅನ್ನಭಾಗ್ಯ’ ಯೋಜನೆಯಡಿ ಜುಲೈನಿಂದ 2024ರ ಏಪ್ರಿಲ್ ಅಂತ್ಯಕ್ಕೆ 5 ಕೆ.ಜಿ. ಹೆಚ್ಚುವರಿ ಐದು ಅಕ್ಕಿಗೆ ಬದಲಾಗಿ ನಗದು ರೂಪದಲ್ಲಿ 8,000 ಕೋಟಿ ರು. ಹಣ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ. ‘ಗೃಹಜ್ಯೋತಿ’ ಯೋಜನೆಯಡಿ ಅಡಿ 1.60 ಕೋಟಿ ಕುಟುಂಬಗಳಿಗೆ ಗರಿಷ್ಠ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌, ‘ಗೃಹಲಕ್ಷ್ಮೀ’ ಮೂಲಕ 1.17 ಕೋಟಿ ಮಹಿಳಾ ಫಲಾನುಭವಿಗಳಿಗೆ 15,000 ಕೋಟಿ ರು. ಒದಗಿಸಲಾಗಿದೆ. ಮಹಿಳೆಯರ ಉಚಿತ ಬಸ್ಸು ಪ್ರಯಾಣದ ‘ಶಕ್ತಿ’ ಯೋಜನೆಯಡಿ ಈವರೆಗೆ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಶತಕೋಟಿ ದಾಟಿದೆ.

ಜತೆಗೆ ‘ಯುವನಿಧಿ’ ಯೋಜನೆಯನ್ನೂ ಜಾರಿ ಮಾಡಿದ್ದು, ಒಟ್ಟಾರೆ ಪಂಚ ಗ್ಯಾರಂಟಿಗಳು ಸಾರ್ವಜನಿಕರಿಗೆ ಹೊಸ ಉತ್ತೇಜನ ನೀಡಿವೆ. ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದ್ದು, ತೆರಿಗೆ ಸಂಗ್ರಹ ಹೆಚ್ಚಾಗುತ್ತಿದೆ. ಸಾರ್ವತ್ರಿಕ ಮೂಲ ಆದಾಯ (ಯೂನಿವರ್ಸಲ್ ಬೇಸಿಕ್ ಇನ್‌ಕಂ) ಎಂಬುದು ಅನುಷ್ಠಾನಕ್ಕೆ ಬಂದಿದೆ ಎಂಬುದು ಸರ್ಕಾರದ ವಾದ.ಕೇಂದ್ರದೊಂದಿಗೆ ಆರ್ಥಿಕ ಸಮರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 2024-25ನೇ ಸಾಲಿನ ಆಯವ್ಯಯದಲ್ಲಿ ಬರೋಬ್ಬರಿ ಆರು ಪುಟಗಳಷ್ಟು ಕೇಂದ್ರ ಸರ್ಕಾರದಿಂದ ಆಗಿರುವ ಆರ್ಥಿಕ ಅನ್ಯಾಯದ ಬಗ್ಗೆ ಪ್ರಸ್ತಾಪಿಸಿದ್ದು, ಕಳೆದ 5 ವರ್ಷಗಳಲ್ಲಿ 1.2 ಲಕ್ಷ ಕೋಟಿ ರು.ಗಳಷ್ಟು ಅನ್ಯಾಯ ಆಗಿದೆ ಎಂದು ಅಂಕಿ-ಅಂಶಗಳ ಸಹಿತ ಕೇಂದ್ರ ಸರ್ಕಾರದ ಅನ್ಯಾಯದ ವಿರುದ್ಧ ಹರಿಹಾಯ್ದಿದ್ದಾರೆ.

ಜಿಎಸ್ಟಿಯ ಅವೈಜ್ಞಾನಿಕ ಅನುಷ್ಠಾನದಿಂದ ರಾಜ್ಯಕ್ಕೆ 59,274 ಕೋಟಿ ರು., 15ನೇ ಹಣಕಾಸು ಆಯೋಗದ ಅನ್ಯಾಯದಿಂದ 62,098 ಕೋಟಿ ರು., ವಿಶೇಷ ಅನುದಾನಗಳು ಸೇರಿ 1.2 ಲಕ್ಷ ಕೋಟಿ ರು. ನಷ್ಟ ಉಂಟಾಗಿದೆ ಎಂದು ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು.ಬರ ಪರಿಹಾರಕ್ಕಾಗಿ ಕೋರ್ಟ್‌ ಮೊರೆ

ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರಕ್ಕೆ ಎನ್‌ಡಿಆರ್‌ಎಫ್‌ ಅಡಿ ಬರ ಪರಿಹಾರಕ್ಕಾಗಿ ಮನವಿ ಮಾಡಿದ ಆರು ತಿಂಗಳಾದರೂ ಕೇಂದ್ರ ಪರಿಹಾರ ನೀಡಿರಲಿಲ್ಲ. ಹೀಗಾಗಿ ದೆಹಲಿಯಲ್ಲಿ ಹೋರಾಟ ಮಾಡಿದ್ದ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿ ಬರ ಪರಿಹಾರ ಪಡೆಯಲು ಯಶಸ್ವಿಯಾಯಿತು. ತನ್ಮೂಲಕ ಇಡೀ ದೇಶ ರಾಜ್ಯದ ಹೋರಾಟದತ್ತ ನೋಡುವಂತಾಯಿತು.

17,800 ಕೋಟಿ ರು.ಗೆ ಮನವಿ ಸಲ್ಲಿಸಿದ್ದರೆ ಕೇಂದ್ರ ಸರ್ಕಾರ 3,450 ಕೋಟಿ ರು. ಪರಿಹಾರ ನೀಡಿದೆ. ಈ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ.

ಕ್ರಾಂತಿಕಾರಕ ನಿರ್ಣಯಗಳು:

ಸ್ವಪಕ್ಷೀಯ ಒಕ್ಕಲಿಗ ಹಾಗೂ ಲಿಂಗಾಯತ ನಾಯಕರ ಆಕ್ಷೇಪದ ಹೊರತಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಗಣತಿ ವರದಿ ಸ್ವೀಕರಿಸಿದ್ದಾರೆ.

ಇನ್ನು ಕನ್ನಡಪರ ಹೋರಾಟಗಾರರ ಉಗ್ರ ಹೋರಾಟಕ್ಕೆ ಮಣಿದು ಕನ್ನಡ ನಾಮಫಲಕ ಕಡ್ಡಾಯ ಕಾಯಿದೆ ಜಾರಿ ಮಾಡಿದ್ದು, ಹಿಂದಿನ ಸರ್ಕಾರದ ವಿವಾದಾತ್ಮಕ ಎಪಿಎಂಸಿ ಕಾಯ್ದೆ, ಧರ್ಮಾದಾಯ ಕಾಯ್ದೆ ಹಿಂಪಡೆದಿದ್ದಾರೆ. ದಲಿತ ಸಮುದಾಯದಲ್ಲಿನ ದಶಕಗಳ ಬೇಡಿಕೆಯಾದ ಎಸ್ಸಿ ಒಳ ಮೀಸಲಾತಿ ಕಲ್ಪಿಸುವ ಕುರಿತು ಕೇಂದ್ರಕ್ಕೆ ಶಿಫಾರಸು ಸಲ್ಲಿಸಿದ್ದಾರೆ.

ಅಭಿವೃದ್ಧಿಗೂ ಒತ್ತು:

ಗ್ಯಾರಂಟಿ ಯೋಜನೆಗಳ ಜತೆಗೆ ಮೊದಲ ಬಜೆಟ್‌ನಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ 21,168 ಕೋಟಿ ರು., ಪರಿಷ್ಕೃತ ಅಂದಾಜಿನ ಕಾಮಗಾರಿಗಳಿಗೆ 2,230 ಕೋಟಿ ರು. ಸೇರಿದಂತೆ ಸಮರ್ಪಕ ಅನುದಾನ ನೀಡಿ ಅಭಿವೃದ್ಧಿಗೂ ಒತ್ತು ನೀಡಲಾಗಿದೆ. ಕೊರೋನಾ ಆರ್ಥಿಕ ಸಂಕಷ್ಟ, ಅನಿಯಂತ್ರಿತ ಬೆಲೆ ಏರಿಕೆ, ಬರದ ನಡುವೆಯೂ ಬಡವರ ಕೈಗೆ ಹೆಚ್ಚಿನ ಹಣ ನೀಡಿ ಹೊಸ ಆರ್ಥಿಕತೆಗೆ ಮುನ್ನುಡಿ ಬರೆದಿದ್ದಾರೆ. ಅಲ್ಲದೆ, ಹಿಂದಿನ ಸರ್ಕಾರ ರದ್ದುಪಡಿಸಿದ್ದ ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್‌ ಸೇರಿ ಸಾಲು-ಸಾಲು ಯೋಜನೆಗಳಿಗೆ ಮರುಜೀವ ನೀಡಲಾಗಿದೆ.ಜೇಬಿಗೂ ಭಾರ:

ಇದರ ನಡುವೆ ಹಣಕಾಸು ಹೊಂದಾಣಿಕೆಗಾಗಿ 2023-24 ಹಾಗೂ 2024-25ರ ಬಜೆಟ್‌ನಲ್ಲಿ ಎರಡು ಬಾರಿ ಮದ್ಯದ ಬೆಲೆ ಏರಿಕೆ ಶಾಕ್‌ ನೀಡಿದೆ. ಮುದ್ರಾಂಕ ಶುಲ್ಕ, ಮೋಟಾರು ವಾಹನ ತೆರಿಗೆಯನ್ನೂ ಹೆಚ್ಚಳ ಮಾಡಿದೆ. ತನ್ಮೂಲಕ ಗಂಡನಿಂದ ಕಿತ್ತುಕೊಂಡು ಹೆಂಡತಿಗೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದರೂ ಅದನ್ನು ಅಂಕಿ-ಅಂಶಗಳ ಮೂಲಕ ಸರ್ಕಾರ ಸಮರ್ಥಿಸಿಕೊಂಡಿದೆ.

Share this article