ಕನ್ನಡಪ್ರಭ ವಾರ್ತೆ ಸಕಲೇಶಪುರ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ತಾಲೂಕಿನಲ್ಲಿ ವ್ಯಾಪಕ ಮಣ್ಣಿನ ದಂಧೆ ನಡೆಯುತ್ತಿದ್ದು, ಕೆರೆಯ ಹೂಳನ್ನು ಬಿಡದೆ ದೋಚಲಾಗುತ್ತಿದೆ.ಪಟ್ಟಣದ ಹೊರವಲಯದ ಸುತ್ತ ಭತ್ತದ ಗದ್ದೆಗಳಿದ್ದು, ಈ ಭತ್ತದ ಗದ್ದೆಗಳನ್ನು ಸೀಳಿದಂತೆ ಬೈಪಾಸ್ ರಸ್ತೆ ಹಾದುಹೋಗಿರುವುದರಿಂದ ಪಟ್ಟಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಿದೆ. ಹಾಸನ, ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳೆಲ್ಲ ಪಟ್ಟಣದ ಹೊರವಲಯದ ಭತ್ತದ ಗದ್ದೆಗಳನ್ನೆಲ್ಲ ಖರೀದಿಸಿ ಲೇಔಟ್ ನಿರ್ಮಾಣಕ್ಕೆ ಕೈಹಾಕಿದ್ದು, ತಗ್ಗು ಪ್ರದೇಶದಲ್ಲಿರುವ ಭತ್ತದ ಗದ್ದೆಗಳಿಗೆಲ್ಲ ಮಣ್ಣು ತುಂಬಿ ಸಮತಟ್ಟು ಮಾಡಲಾಗುತ್ತಿರುವುದರಿಂದ ತಾಲೂಕಿನ ೨೦ ಕಿ.ಮೀ. ದೂರದಿಂದ ಮಣ್ಣು ತರಲಾಗುತ್ತಿದೆ. ಪರಿಣಾಮ ಬೆಟ್ಟಗುಡ್ಡಗಳೆಲ್ಲ ಸಮತಟ್ಟಾಗುತ್ತಿದ್ದು, ತಗ್ಗುಪ್ರದೇಶ ಹೇಮಾವತಿ ಹಿನ್ನೀರು ನಿಲುಗಡೆಯಾಗುವ ಪ್ರದೇಶಗಳೆಲ್ಲ ಈಗ ಲೇಔಟ್‌ಗಳಾಗುತ್ತಿವೆ.
ಎಷ್ಟೇ ಹಣ ನೀಡಿದರು ಲೇಔಟ್ ನಿರ್ಮಾಣಗಾರರಿಗೆ ಮಣ್ಣು ದೊರೆಯದ ಕಾರಣ ಕೆಲವು ಲೇಔಟ್ ನಿರ್ಮಾಣಗಾರರು ಸರ್ಕಾರಿ ಕೆರೆಯ ಹೂಳನ್ನೂ ಬೀಡದೆ ದೋಚುತ್ತಿದ್ದಾರೆ.ಪ್ರಪಾತವನ್ನು ಮೇಲೆತ್ತುವ ಕೆಲಸ:
ತಾಲೂಕಿನ ಕೊಲ್ಲಹಳ್ಳಿ ಗ್ರಾಮ ಸಮೀಪ ಬೈಪಾಸ್ ಜಂಕ್ಷನ್‌ನಲ್ಲಿ ಸುಮಾರು ೨೦೦ ಅಡಿ ಪ್ರಪಾತಕ್ಕೆ ಮಣ್ಣು ತುಂಬುವ ಕೆಲಸ ಕಳೆದ ಆರು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದ್ದು, ನಿತ್ಯ ಹತ್ತಾರು ಟಿಪ್ಪರ್ ಮಣ್ಣನ್ನು ತಂದು ಹಾಕಿ ಸಮತಟ್ಟು ಮಾಡಲಾಗುತ್ತಿದೆ. ಪರಿಣಾಮ ಇಲ್ಲಿಗೆ ಮಣ್ಣು ಹಾಕುವ ಉದ್ದೇಶದಿಂದ ಮಳಲಿ ಗ್ರಾಮ ಸಮೀಪದ ಬೆಟ್ಟವನ್ನೇ ಸಮತಟ್ಟು ಮಾಡಲಾಗಿದೆ. ಪ್ರಪಾತಕ್ಕೆ ಮಣ್ಣು ಸುರಿಯುತ್ತಿರುವ ಪರಿಣಾಮ ಮಳೆಯ ನೀರು ಹರಿಯುವ ಭಾರೀ ಗಾತ್ರದ ಕೊಲ್ಲಿ ಮುಚ್ಚಿ ಹೋಗಿದ್ದು, ಮಳೆಯ ನೀರು ಹರಿಯುವುದೆಲ್ಲಿ ಎಂಬ ಪ್ರಶ್ನೆ ಎದ್ದಿದೆ. ಈ ಬೃಹತ್ ಕೊಲ್ಲಿಯಿಂದಲೇ ಗ್ರಾಮಕ್ಕೆ ಕೊಲ್ಲಿಹಳ್ಳಿ ಎಂದು ಹೆಸರು ಬಂದಿದ್ದು, ಇಂತಹ ಕೊಲ್ಲಿ ರಿಯಲ್ ಎಸ್ಟೇಟ್‌ನವರ ದುರಾಸೆಗೆ ಮರೆಯಾಗಿದೆ. ಈ ಬಗ್ಗೆ ಕಳೆದ ಆರು ತಿಂಗಳಿನಿಂದ ನಿರಂತರವಾಗಿ ಉಪವಿಭಾಗಾಧಿಕಾರಿ ಸೇರಿ ಇತರೆ ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಗಮನ ಸೆಳೆದರೂ ಅಕ್ರಮವಾಗಿ ಮಣ್ಣು ತುಂಬುವ ಪ್ರಕ್ರಿಯೆ ಮಾತ್ರ ನಿಲುಗಡೆಯಾಗುತ್ತಿಲ್ಲ.ಪ್ರಾಕೃತಿಕ ಅಸಮತೋಲನ:
ಭಾರೀ ಪ್ರಮಾಣದಲ್ಲಿ ಮಣ್ಣು ತೆಗೆಯುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ತಾಲೂಕಿನಲ್ಲಿ ಪ್ರಾಕೃತಿಕ ಅಸಮತೋಲನ ಸೃಷ್ಟಿಯಾಗಿದ್ದು, ಮೋಡಗಳನ್ನು ತಡೆದು ಮಳೆ ಸುರಿಸುತ್ತಿದ್ದ ಸಾಕಷ್ಟು ಬೆಟ್ಟ,ಗುಡ್ಡಗಳು ಇಂದು ನೆಲಸಮವಾಗಿವೆ, ಭಾರೀ ಪ್ರಮಾಣದ ತಗ್ಗುಪ್ರದೇಶಗಳೆಲ್ಲ ಇಂದು ಎತ್ತರದ ಪ್ರದೇಶಗಳಾಗಿ ನಿರ್ಮಾಣಗೊಂಡಿವೆ. ಪರಿಣಾಮ ಸ್ವಾಭಾವಿಕವಾಗಿ ಹರಿಯಬೇಕಿದ್ದ ಮಳೆ ನೀರು ಹರಿಯಲು ಅವಕಾಶವಿಲ್ಲದೇ ಸಾಕಷ್ಟು ಪ್ರದೇಶಗಳಲ್ಲಿ ಕೃತಕ ಕೆರೆಗಳು ನಿರ್ಮಾಣವಾಗಿವೆ. ಕುಸಿಯುತ್ತಿದೆ ಗುಡ್ಡ:ತಾಲೂಕಿನ ದೊಡ್ಡತಪ್ಪಲೆ ಗ್ರಾಮ ಸಮೀಪ ಅವೈಜ್ಞಾನಿಕವಾಗಿ ಬಿಳಿಮಣ್ಣಿನ ಗುಡ್ಡವನ್ನು ಹೆದ್ದಾರಿ ಕೆಲಸಕ್ಕಾಗಿ ಬಗೆಯುತ್ತಿರುವ ಪರಿಣಾಮ, ಸದ್ಯದ ಮಳೆಗೆ ಗುಡ್ಡವು ಕುಸಿಯಲಾರಂಭಿಸಿದೆ. ೨೦೧೮ ರಲ್ಲಿ ಈ ಪ್ರದೇಶದಲ್ಲಿ ಮಣ್ಣು ತೆಗೆಯಲಾಗಿದ್ದ ಪರಿಣಾಮ ಮಳೆಗಾಲದಲ್ಲಿ ಗುಡ್ಡದ ಕಲ್ಲುಗಳು ಹೆದ್ದಾರಿಗೆ ಕುಸಿದು ಹೆದ್ದಾರಿಯಲ್ಲಿ ಸಾಗುತ್ತಿದ್ದ ಟ್ಯಾಂಕರ್‌ಗೆ ಅಪ್ಪಳಿಸಿದ ಪರಿಣಾಮ, ಟ್ಯಾಂಕರ್ ಪ್ರಪಾತಕ್ಕೆ ಬಿದ್ದು ಟ್ಯಾಂಕರ್ ಚಾಲಕ ಹಾಗೂ ನಿರ್ವಾಹಕರಿಬ್ಬರೂ ಮೃತಪಟ್ಟಿದ್ದು, ಮತ್ತೆ ಅಂತಹದ ಘಟನೆ ಯಾವ ಕ್ಷಣದಲ್ಲಾದರೂ ಜರುಗುವ ಸಾದ್ಯತೆ ಹೆಚ್ಚಿದೆ, ಈ ಬಗ್ಗೆ ಹಲವು ಬಾರಿ ಪತ್ರಿಕೆ ಎಚ್ಚರಿಸುವ ಕೆಲಸ ಮಾಡಿದ್ದರೂ ಸೂಕ್ಷ್ಮಮಣ್ಣಿನ ಗುಡ್ಡವನ್ನು ಮನಸೋ ಇಚ್ಛೆ ನಿರಂತರವಾಗಿ ಬಗೆಯಲಾಗುತ್ತಿದೆ. ಈ ಬಗ್ಗೆ ಸಕಲೇಶಪುರದ ಉಪವಿಭಾಗಾಧಿಕಾರಿ ಶೃತಿ ಮಾತನಾಡಿ, ತಾಲೂಕಿನಾದ್ಯಂತ ಅಕ್ರಮ ಮಣ್ಣು ಸಾಗಟದ ಬಗ್ಗೆ ಗಣಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿ, ಈ ಅಕ್ರಮದ ಬಗ್ಗೆ ನಾನು ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಮಣ್ಣಿಗೆ ಭಾರೀ ಬೇಡಿಕೆ:ಸದ್ಯ ಪಟ್ಟಣ ಸುತ್ತಮುತ್ತ ಮಣ್ಣಿನ ತೀವ್ರಕೊರತೆ ಎದುರಾಗಿರುವ ಪರಿಣಾಮ ದೂರ ದೂರದಿಂದ ಮಣ್ಣನ್ನು ತರಲಾಗುತ್ತಿದ್ದು, ಮಣ್ಣು ಮಾರಾಟ ಮಾಡುವ ವ್ಯಕ್ತಿ ಪ್ರತಿ ಲಾರಿ ಲೋಡ್ ಮಣ್ಣಿಗೆ ಒಂದು ಸಾವಿರದಿಂದ ಎರಡು ಸಾವಿರದವರೆಗೆ ಬೆಲೆ ನಿಗಧಿಪಡಿಸಿದ್ದು, ಟಿಪ್ಪರ್ ಬಾಡಿಗೆ ಸೇರಿ ಪ್ರತಿಲಾರಿ ಲೋಡ್ ಮಣ್ಣಿಗೆ ನಾಲ್ಕರಿಂದ ಐದು ಸಾವಿರದವರಗೆ ಖರ್ಚು ತಗಲುತ್ತಿದೆ. ಸದ್ಯ ಪಟ್ಟಣದ ಹೊರವಲಯಾದ್ಯಂತ ೨೮ ಕ್ಕೂ ಅಧಿಕ ಲೇಔಟ್‌ಗಳು ವಿವಿಧ ಹಂತದಲ್ಲಿ ಅಭಿವೃದ್ದಿಗೊಳ್ಳುತ್ತಿವೆ. ಬಹುತೇಕ ಈ ಎಲ್ಲ ಲೇ ಔಟ್‌ಗಳಿಗೆ ಮಣ್ಣು ತುಂಬಿಸುವ ಪ್ರಕ್ರಿಯೆ ವೇಗದಿಂದ ಸಾಗಿದ್ದು, ಈ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕ ಬೇಕಿರುವ ಅಧಿಕಾರಿಗಳು ಮಾತ್ರ ಕಳ್ಳಾಟ ಆಡುತ್ತಾ ದಿನದೂಡುತ್ತಿದ್ದಾರೆ.
ಗಣಿ ಇಲಾಖೆ ಅಧಿಕಾರಿಯ ಜಾಣ ಕುರುಡು: ತಾಲೂಕಿನ ಹಲವೆಡೆ ಅಕ್ರಮವಾಗಿ ಮಣ್ಣು ತೆಗೆಯುವುದು ಹಾಗೂ ಮಣ್ಣು ತುಂಬುವ ಪ್ರಕ್ರಿಯೆ ಬಗ್ಗೆ ತಾಲೂಕಿನ ಉಸ್ತುವಾರಿ ನೋಡಿಕೊಳ್ಳುವ ಗಣಿ ಇಲಾಖೆಯ ಅಧಿಕಾರಿ ಲಕ್ಷ್ಮೀ ಕಿರಣ್ ಅವರ ಗಮನಕ್ಕೆ ತಂದರೆ, ಈ ವಿಚಾರ ನನಗೆ ತಿಳಿದಿಲ್ಲ, ಮತ್ತೊಮ್ಮೆ ನಮಗೆ ಅಕ್ರಮ ಗಣಿಗಾರಿಕೆಯ ವಿಳಾಸ ಹೇಳಿ ಎನ್ನುವ ಮೂಲಕ ಅಮಾಯಕರಂತೆ ವರ್ತಿಸುವ ಈ ಅಧಿಕಾರಿಯು ನಂತರ ಮಣ್ಣು ತುಂಬಿಸುತಿರುವ ರಿಯಲ್ ಎಸ್ಟೇಟ್ ಉದ್ಯಮಿಯಿಂದಲೇ ಸುದ್ದಿಗಾರರಿಗೆ ಕರೆಮಾಡಿಸಿ ಅಕ್ರಮ ಮಣ್ಣು ದಂಧೆಯ ಬಗ್ಗೆ ಪ್ರಶ್ನಿಸದಂತೆ ಒತ್ತಡ ಹೇರುತ್ತಿದ್ದಾರೆ.