ಕುರುಗೋಡು: ರೈತರ ಜಮೀನಿನಲ್ಲಿ ಕಾರ್ಖಾನೆ ಸ್ಥಾಪಿಸಿ, ಇಲ್ಲವೇ ಜಮೀನುಗಳನ್ನು ರೈತರಿಗೆ ವಾಪಸ್ ನೀಡಿ ಎಂದು ಒತ್ತಾಯಿಸಿ ಸಮೀಪದ ಕುಡುತಿನಿಯಲ್ಲಿ ಭೂಸಂತ್ರಸ್ತ ರೈತರ ಹೋರಾಟ ಸಮಿತಿ ವತಿಯಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 369ನೇ ದಿನಕ್ಕೆ ಕಾಲಿಟ್ಟಿದೆ.ಧರಣಿಯನ್ನು ಉದ್ದೇಶಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೈನ್ಯದ ಕುಡುತಿನಿ ಅಧ್ಯಕ್ಷ ಬುಡಗ ಜಂಗಮ ಸಂಪತ್ಕುಮಾರ್ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಕುಡುತಿನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭೂಸಂತ್ರಸ್ತ ರೈತರ ಹೋರಾಟದ ಕುರಿತು ಕುಡುತಿನಿಯ ಹೋರಾಟಗಾರರು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಡುತಿನಿಯ ಭೂಸಂತ್ರಸ್ತ ರೈತರ ಬೇಡಿಕೆಗಳನ್ನು ಆದಷ್ಟು ಬೇಗನೇ ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇಂದಿನವರೆಗೂ ರೈತರ ಬೇಡಿಕೆ ಈಡೇರಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.13 ವರ್ಷಗಳ ಹಿಂದೆ ಕುಡುತಿನಿ, ಹರಗಿನಡೋಣಿ, ವೇಣಿವೀರಾಪುರ, ಕೊಳಗಲ್ಲು, ಜಾನೆಕುಂಟೆ, ಸಿದ್ದಮ್ಮನಹಳ್ಳಿ ಸೇರಿದಂತೆ ಇತರ ಗ್ರಾಮಗಳ ರೈತರಿಂದ ಕಡಿಮೆ ದರದಲ್ಲಿ ಲಕ್ಷ್ಮೀ ಮಿತ್ತಲ್, ಅಗರ್ವಾಲ್ ಇತರ ಕಾರ್ಖಾನೆ ಸ್ಥಾಪನೆಗಾಗಿ ಜಮೀನುಗಳನ್ನು ವಶಪಡಿಸಿಕೊಂಡು ಇಂದಿಗೂ ಯಾವುದೇ ಕಾರ್ಖಾನೆ ಸ್ಥಾಪಿಸದೇ ರೈತರಿಗೆ ಮೋಸ ಮಾಡಿದ್ದಾರೆ. ಅದರಲ್ಲೂ ಭೂ-ಬೆಲೆಯಲ್ಲಿ ವಂಚನೆಯಾಗಿದೆ. ಇದನ್ನು ಸರಿಪಡಿಸಿ ನ್ಯಾಯಯುತ ಬೆಲೆಯನ್ನು ರೈತರಿಗೆ ನೀಡಬೇಕೆಂದು ಎಂದು ಆಗ್ರಹಿಸಿದರು. ಅಲ್ಲದೆ ಕಾರ್ಖಾನೆಯ ಮಾಲೀಕರು ಕಾರ್ಖಾನೆ ಸ್ಥಾಪಿಸಿದರೆ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆ ಈಡೇರದಿದ್ದರೆ ಕಾರ್ಖಾನೆಯ ಮಾಲೀಕರು ರೈತರ ಜಮೀನುಗಳನ್ನು ವಾಪಸ್ ಮಾಡಬೇಕೆಂದು ಎಚ್ಚರಿಸಿದರು.ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಸಂಬಂಧಪಟ್ಟ ಮಂತ್ರಿ, ಶಾಸಕರು ಗಮನಹರಿಸಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ದೊರಕಿಸಿ, ರೈತರಿಗೆ ಅಸರೆಯಾಗಬೇಕೆಂದು ಆಗ್ರಹಿಸಿದರು.ಧರಣಿಯಲ್ಲಿ ರೈತರ ಹೋರಾಟಗಾರ ಜಂಗ್ಲಿಸಾಬ್, ಪಾಂಡು, ಬಾವಿ ಶಿವಕುಮಾರ್, ಬಿಳಿಬಾಯಪ್ಪ, ಜಗದೀಶ, ಅಂಜಿನಪ್ಪ, ಚಂದಶೇಖರ, ವೀರಾಪುರದ ವೀರೇಶ, ಪಂಪಣ್ಣ, ತಿಮ್ಮಪ್ಪ, ಮರಿಯಪ್ಪ, ಅರುಣ, ಗಂಗಮ್ಮ, ಹನುಮಕ್ಕ, ಹುಲಿಗೆಮ್ಮ, ನಾಗಮ್ಮ, ಇತರ ರೈತ ಮುಖಂಡರು ಧರಣಿಯಲ್ಲಿ ಇದ್ದರು.