ಎಸ್ಸಿ, ಎಸ್ಟಿಗೆ ಮೀಸಲಿಟ್ಟ ಹಣ ಯೋಜನೆಗಳಿಗೆ ದುರ್ಬಳಕೆ

KannadaprabhaNewsNetwork | Updated : Jul 07 2024, 10:13 AM IST

ಸಾರಾಂಶ

ರಾಜ್ಯ ಸರ್ಕಾರ ಎಸ್ಸಿ, ಎಸ್ಟಿಗೆ ಮೀಸಲಿಟ್ಟಿರುವ ಹಣವನ್ನು ಚುನಾವಣೆಗಾಗಿ ಜಾರಿಗೆ ತಂದ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡು ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೋಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಶಿಗ್ಗಾಂವಿ: ರಾಜ್ಯ ಸರ್ಕಾರ ಎಸ್ಸಿ, ಎಸ್ಟಿಗೆ ಮೀಸಲಿಟ್ಟಿರುವ ಹಣವನ್ನು ಚುನಾವಣೆಗಾಗಿ ಜಾರಿಗೆ ತಂದ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡು ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೋಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

 ಶಿಗ್ಗಾಂವಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದಿವಾಳಿ ಆಗಿರೋದು ಪ್ರತಿ ಹೆಜ್ಜೆಯಲ್ಲಿ ಪ್ರದರ್ಶನ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡುವುದರಿಂದ ಹಿಡಿದು ಎಲ್ಲಾ ದರ ಹೆಚ್ಚಳ ಮಾಡಿದ್ದಾರೆ ಗ್ಯಾರಂಟಿ ಯೋಜನೆಗಳಿಗೆ ಅನುದಾನವನ್ನು ವರ್ಗಾಯಿಸುತ್ತಿದ್ದಾರೆ. 

ಎಸ್ ಸಿ, ಎಸ್ ಟಿ ಸಮುದಾಯಗಳಿಗೆ 14000 ಕೋಟಿ ರು. ಅನುದಾನ ಬಳಕೆ ಆಗಬೇಕಿತ್ತು. ಎಲ್ಲಾ ಹಣ ಗ್ಯಾರಂಟಿಗಳಿಗೆ ಹೋಗುತ್ತಿದೆ. ಎಸ್ ಸಿ, ಎಸ್ ಟಿ ಜನಕ್ಕೂ ಗ್ಯಾರಂಟಿ ಮೂಲಕ ಅನುಕೂಲ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ‌ನವರು ಹೇಳುತ್ತಾರೆ. ಆದರೆ, ಕಾನೂನಿನಲ್ಲಿ ಅನುದಾನ ಎಸ್ ಸಿ, ಎಸ್ ಟಿ ಗಳಿಗೆ ಹೋಗಬೇಕು ಅಂತ ಇದೆ. ಆ ಕಾನೂನು ಉಲ್ಲಂಘನೆ ಆಗಿದೆ. ಎಸ್ ಸಿ, ಎಸ್ ಟಿಗಳಿಗೆ ಮೀಸಲಿಟ್ಟ ಹಣ ಎಸ್ ಸಿ, ಎಸ್‌ಟಿಗಳಿಗೇ ಬಳಸುತ್ತೇವೆ ಅಂತ ಚುನಾವಣೆ ಮೊದಲು ಹೇಳಿದ್ದರು. 

ಕಾಂಗ್ರೆಸ್ ನವರು ಓಟಿಗಾಗಿ ಮಾಡಿದ ಯೋಜನೆಗಳಿಗೆ ಎಸ್‌ಸಿ, ಎಸ್‌ಟಿ ಹಣ ಬಳಸುತ್ರಿದ್ದಾರೆ. ಎಸ್ ಸಿ, ಎಸ್‌ಟಿಗಳಿಗೆ ಸರ್ಕಾರ ಮೋಸ ಮಾಡುತ್ತಿದೆ. ಸರ್ಕಾರ ಸುಭದ್ರವಾಗಿದ್ದರೆ ಅವರ ಹಣಕ್ಕೆ ಯಾಕೆ ಕೈ ಹಾಕಿದ್ದಾರೆ. ವಾಲ್ಮೀಕಿ ನಿಗಮದ ಹಣ ಕೂಡಾ ಲೂಟಿ ಮಾಡಿದ್ದಾರೆ. ಎಸ್ ಸಿ, ಎಸ್ ಟಿ, ಒಬಿಸಿ ಜನರಿಗೆ ರಾಜ್ಯ ಸರ್ಕಾರ ಸರ್ಕಾರ ದ್ರೋಹ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಡೆಂಘೀ ಸಾವು ಮುಚ್ಚಿಡುತ್ತಿರುವ ಸರ್ಕಾರ:  ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಡೆಂಘೀ ಸಾವಿನ ಸಂಖ್ಯೆ ಕಡಿಮೆ ತೋರಿಸುತ್ತಿದ್ದಾರೆ. ಡೆಂಘೀ ರೋಗಿಗಳ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ. ಹಾವೇರಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಜನರು ದಾವಣಗೆರೆ, ಹುಬ್ಬಳ್ಳಿಗೆ ಹೋಗಿದ್ದಾರೆ. ಸರಿಯಾದ ಚಿಕಿತ್ಸೆ ಸಿಗದೇ ರೋಗಿಗಳು ಸಾವನ್ನಪ್ಪಿದರೂ ಮುಚ್ಚಿಡುತ್ತಿದ್ದಾರೆ ಎಂದು ಆರೋಪಿಸಿದರು.ಡೆಂಘೀ ಹೆಚ್ಚಾಗುತ್ತಿದೆ ಎಂದು ನಾನು ಮೊದಲೇ ಹೇಳಿದ್ದೆ ಆದರೆ, ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ. ರೋಗಿಗಳು ಪರದಾಡುತ್ತಿದ್ದಾರೆ. ಸಾವು, ನೋವು ಹೆಚ್ಚಾಗುತ್ತಿವೆ. ಈಗಾಗಲೇ ಹಲವಾರು ಸಾವು ಆಗಿದೆ. ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ಡೆಂಘೀ ಸಾವು ಹಾವೇರಿಯಲ್ಲಿ ಆಗಿದೆ. ಕೂಡಲೇ ಡಿಎಚ್‌ಒ ವರ್ಗಾವಣೆ ಮಾಡಬೇಕು. ಸಮರ್ಥ ಡಿಎಚ್ಒ ಹಾಕಬೇಕು ಯಾರನ್ನೂ ವಾಪಾಸ್ ಕಳಿಸದೇ ಚಿಕಿತ್ಸೆ ಮಾಡಬೇಕು. ಆಶಾ ಕಾರ್ಯಕರ್ತೆಯರ ಸಹಾಯ ತೆಗೆದುಕೊಂಡು ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಹೆದ್ದಾರಿ ಚರ್ಚೆ: ನಾನು ಸಂಸತ್ ಅಧಿವೇಶನಕ್ಕೆ ತೆರಳಿದ್ದಾಗ ಹಾವೇರಿ ವಿಭಾಗದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಬಳಿ ಮಾತನಾಡಿದ್ದೇನೆ. ಈ ಬಗ್ಗೆ ಚರ್ಚಿಸಲು ಅವರು ಮುಂದಿನ ವಾರ ವಿಶೇಷವಾದ ಸಮಯ ನೀಡಿದ್ದಾರೆ. ಆಮೆಗತಿಯಲ್ಲಿ ನಡೆಯುತ್ತಿರುವ ಎನ್ ಎಚ್ 4 ಕಾಮಗಾರಿ ಹಾಗೂ ಹಾನಗಲ್, ಶಿಗ್ಗಾಂವಿ, ಸವಣೂರು, ಲಕ್ಷ್ಮೇಶ್ವರ, ಗದಗ ಮಾರ್ಗವಾಗಿ ಹಾಯ್ದು ಹೋಗುವ ಇಳಕಲ್ ಕಾರವಾರ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡುವ ಯೋಜನೆ, ರಿಂಗ್ ರಸ್ತೆಗಳ ನಿರ್ಮಾಣ, ಆರ್ ಒಬಿ ನಿರ್ಮಾಣ ಮಾಡುವ ಕುರಿತು ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದೇನೆ. ಈ ಎಲ್ಲ ವಿಷಯಗಳ ಕುರಿತು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಅಗತ್ಯ ಸಹಕಾರ ನೀಡುವುದಾಗಿ ನಿತಿನ್ ಗಡ್ಕರಿ ತಿಳಿಸಿದ್ದಾರೆ ಎಂದು ಹೇಳಿದರು.

ಇನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆಗೆ ಶಿವಮೊಗ್ಗ ಶಿಕಾರಿಪುರ ಮಾರ್ಗವಾಗಿ ರಾಣೆಬೆನ್ನೂರು ಹೊಸ ರೈಲು ಮಾರ್ಗದ ಕುರಿತು ಚರ್ಚೆ ನಡೆಸಿದ್ದು, ಇದಕ್ಕೆ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಈ ಯೋಜನೆ ಹಾಗೂ ಯಲವಿಗಿ ಗದಗ ರೈಲು ಯೋಜನೆಯನ್ನು ಪ್ರಾರಂಭ ಮಾಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

Share this article