ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಈ ಕುರಿತು ಮಾತನಾಡಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಮಂಡ್ಯ ಜಿಲ್ಲೆ ತೀವ್ರ ಬರಗಾಲವನ್ನು ಎದುರಿಸುತ್ತಿದೆ. ತುಮಕೂರು ರಾಜಕಾರಣ ಗಟ್ಟಿಯಾಗಿದೆ. ಅಲ್ಲಿನ ರೈತರನ್ನು ಉಳಿಸುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮಾಡುತ್ತಿದ್ದಾರೆ. ಇದಕ್ಕಾಗಿ ಮಂಡ್ಯ ಜಿಲ್ಲೆಯ ಜನರನ್ನು ಬಲಿಕೊಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರು ತಮ್ಮ ಪ್ರಭಾವ ಬಳಸಿ ತಮ್ಮ ಸ್ವಂತ ಜಿಲ್ಲೆಗೆ ನೀರನ್ನು ತೆಗೆದುಕೊಂಡು ಹೋಗುತ್ತಿದ್ದರೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಮಾತನಾಡದಿರುವುದು ಜಿಲ್ಲೆಯ ರೈತರ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.ತಾಲೂಕಿನ ಬಹುತೇಕ ಎಲ್ಲಾ ಕೆರೆಕಟ್ಟೆಗಳಲ್ಲಿ ನೀರು ಖಾಲಿಯಾಗಿದೆ. ಜನಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಕೊಳವೆ ಬಾವಿಗಳಿಗೆ ಅಂತರ್ಜಲದ ಪ್ರಮಾಣ ಕಡಿಮೆಯಾಗಿವೆ. ಹಲವು ನಿಂತುಹೋಗಿವೆ. ಬೆಳೆಗಳು ಒಣಗುತ್ತಿದೆ, ಸಾಲ ಮಾಡಿ ಬೆಳೆ ಮಾಡಿದ ರೈತನ ಕಷ್ಟವನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಜಿಲ್ಲೆಯ ತಾಲೂಕುಗಳು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದರೂ ಗೊರೂರು ಜಲಾಶಯದ ನೀರನ್ನು ಜಿಲ್ಲೆಗೆ ಹರಿಸುವ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬೊಪ್ಪನಹಳ್ಳಿಬಸವೇಗೌಡ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕರು ಕೂಡಲೇ ತನ್ನ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಸ್ಥಳೀಯ ರೈತರ ಹಿತ ಕಾಯುವ ಕೆಲಸ ಮಾಡಬೇಕಿದೆ ಎಂದು ಆಗ್ರಹಿಸಿದ್ದಾರೆ.