ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಭೇಟಿ, ಪಟ್ಟು ಬಿಡದ ಹೋರಾಟಗಾರರು

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ಮುಂಡರಗಿದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಎರಡು ದಿನಗಳಿಂದ ಪುರಸಭೆ ಕಚೇರಿ ಎದುರಿನಲ್ಲಿ ಹೋರಾಟ ನಡೆಸುತ್ತಿದ್ದು, ಮಂಗಳವಾರ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಪನಿಭಾಗಾಧಿಕಾರಿ ಭೇಟಿ ನೀಡಿದರು. ಈ ವೇಳೆ ಉಪವಿಭಾಗಾಧಿಕಾರಿ ಸಭೆ ನಡೆಸಿ ಒಂದು ವಾರ ಕಾಲಾವಕಾಶ ನೀಡುವಂತೆ ಕೋರಿದರು.

ಮುಂಡರಗಿ: ತಾಲೂಕು ಸ್ಥಳವಾದ ಮುಂಡರಗಿದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಎರಡು ದಿನಗಳಿಂದ ಪುರಸಭೆ ಕಚೇರಿ ಎದುರಿನಲ್ಲಿ ಹೋರಾಟ ನಡೆಸುತ್ತಿದ್ದು, ಮಂಗಳವಾರ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಪನಿಭಾಗಾಧಿಕಾರಿ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಹೋರಾಟಗಾರರ ಪರವಾಗಿ ನಿಂಗರಾಜ ಹಾಲಿನವರ, ಎಚ್.ಡಿ. ಪೂಜಾರ, ಚಿನ್ನಪ್ಪ ವಡ್ಡಟ್ಟಿ, ಸೋಮಣ್ಣ ಹೈತಾಪೂರ ಮಾತನಾಡಿ, ತಾವು ಅನೇಕ ವರ್ಷಗಳಿಂದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕಾಗಿ ಒತ್ತಾಯಿಸಿ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ನಮ್ಮ ಬೇಡಿಕೆ ಈಡೇರುವವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯಕ ಮಾತನಾಡಿ, ಅದಕ್ಕೆ ಸರ್ಕಾರದ ನಿಯಮಗಳಿದ್ದು, ಒಂದಿಷ್ಟು ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ಪ್ರತಿಭಟನೆ ಹಿಂಪಡೆಯುವಂತೆ ಕೇಳಿಕೊಂಡರು. ಇದಕ್ಕೆ ಪ್ರತಿಭಟನಾಕಾರರು ಒಪ್ಪಲಿಲ್ಲ. ನಂತರ ಉಪವಿಭಾಗಾಧಿಕಾರಿ, ತಹಸೀಲ್ದಾರ್‌ ಹಾಗೂ ಸಿಪಿಐ ಮತ್ತು ಮುಖ್ಯಾಧಿಕಾರಿ ಸೇರಿ ಪುರಸಭೆ ಸದಸ್ಯರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ನಂತರ ಜಿಲ್ಲಾ ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯಕ ಮಾತನಾಡಿ, ತಾವು ಪುತ್ಥಳಿ ನಿರ್ಮಾಣದ ಕುರಿತು ಪುರಸಭೆ ಸದಸ್ಯರೊಂದಿಗೆ ಚರ್ಚಿಸಿದ್ದು, ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಿಬಂಧನೆ ಹಾಗೂ ಸುತ್ತೋಲೆ ಪ್ರಕಾರ ಸಾರ್ವಜನಿಕರ ಆಕ್ಷೇಪಣೆ ಹಾಗೂ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದ್ದು, ಅದಕ್ಕಾಗಿ ಒಂದು ವಾರ ಸಮಯ ತೆಗೆದುಕೊಳ್ಳಲಾಗಿದೆ ಎಂದರು.

ಮುಂಡರಗಿ ಪಟ್ಟಣದಲ್ಲಿ ಡಾ. ಅಂಬೇಡ್ಕರ್ ಪುತ್ಥಳಿ ನಿರ್ಮಾಣವಾಗಬೇಕೆನ್ನುವುದು ಇಲ್ಲಿನ ಬಹುವರ್ಷಗಳ ಬೇಡಿಕೆಯಾಗಿದ್ದು, ಅದಕ್ಕಾಗಿ ಎರಡು ದಿನಗಳಿಂದ ಹೋರಾಟ ನಡೆಸುತ್ತಿದ್ದು, ಪುತ್ಥಳಿ ನಿರ್ಮಾಣಕ್ಕೆ ಸರ್ಕಾರದ ಅನೇಕ ನಿಯಮಗಳಿದ್ದು, ತಾವು ತಕ್ಷಣವೇ ಅವೆಲ್ಲವುಗಳ ಕುರಿತು ಪರಿಶೀಲಿಸಿ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕಾಗಿ ಒಂದಿಷ್ಟು ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ತಾವು ಹೋರಾಟಗಾರರಿಗೆ ಒಂದು ವಾರ ಕಾಲಾವಕಾಶ ನೀಡಿದ್ದು, ಅಷ್ಟರಲ್ಲಿ ಈ ಕಾರ್ಯ ಜರುಗುವಂತೆ ಪ್ರಯತ್ನಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಧನಂಜಯ ಮಾಲಗತ್ತಿ, ಸಿಪಿಐ ಮಂಜುನಾಥ ಕುಸುಗಲ್, ಮುಖ್ಯಾಧಿಕಾರಿ ಡಿ.ಎಚ್. ನದಾಫ, ಪುರಸಭೆ ಸದಸ್ಯರಾದ ಪವನ್ಪ್ರ ಮೇಟಿ, ಲಿಂಗರಾಜಗೌಡ ಪಾಟೀಲ, ನಾಗರಾಜ ಹೊಂಬಳಗಟ್ಟಿ, ಪ್ರಕಾಶ ಹಲವಾಗಲಿ, ಕವಿತಾ ಉಳ್ಳಾಗಡ್ಡಿ, ಮಹ್ಮದರಫಿ ಮುಲ್ಲಾ, ಜ್ಯೋತಿ ಹಾನಗಲ್, ಶಿವು ಬಾರಕೇರ, ಹೋರಾಟಗಾರರಾದ ಪರಶುರಾಮ ಕರಡಿಕೊಳ್ಳ, ಚಂದ್ರಶೇಖರ ಪೂಜಾರ, ಮರಿಯಪ್ಪ ಸಿದ್ದಣ್ಣವರ, ಲಕ್ಷ್ಮಣ ತಗಡಿನಮನಿ, ಮಲ್ಲೇಶ ಕಕ್ಕೂರ, ಸಂತೋಷ ಹಡಗಲಿ, ವಿ.ಎಸ್.ಗಟ್ಟಿ, ಕೋಟೆಪ್ಪ, ಹರೀಶ ಹಾರೊಗೆರಿ, ಹನಮಂತ ಪೂಜಾರ, ಶಿವು ಕಲಕೇರಿ, ಕಿರಣ್ ಹಾಲಿನವರ, ಮಂಜುನಾಥ ಬೆನಕೊಪ್ಪ, ನಿಂಗರಾಜ ಸ್ವಾಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article