ಮುಳುವಾದ ಮಲಪನಗುಡಿ ಗಣಿ;ಕರ್ನಾಟಕ - ಆಂಧ್ರದ ಗಡಿಯೇ ಬದಲು

KannadaprabhaNewsNetwork | Published : May 7, 2025 12:47 AM

ಸಾರಾಂಶ

ತಮಗೆ ದೊರೆತ ಪರವಾನಗಿ ವ್ಯಾಪ್ತಿ ಮೀರಿ ಆಂಧ್ರ ಗಡಿ ಭಾಗದಲ್ಲಿ ಓಬಳಾಪುರಂ ಮೈನಿಂಗ್ ಕಂಪನಿ ಮೂಲಕ 10,760 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಆರಂಭಿಸಿದರು ಹಾಗೂ ಅಕ್ರಮವಾಗಿ ಮಣ್ಣು ಸಾಗಿಸಿದರು. ಆಂಧ್ರಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದು ಕರ್ನಾಟಕದಲ್ಲಿ ಗಣಿಗಾರಿಕೆ ಮಾಡಿದ ಆರೋಪ ಎದುರಿಸುತ್ತಿರುವ ಜನಾರ್ದನ ರೆಡ್ಡಿ, ನಾನು ಕರ್ನಾಟಕದ ಹಿಡಿ ಮಣ್ಣು ಮುಟ್ಟಿಲ್ಲ ಎಂದು ಸಮರ್ಥಿಸಿಕೊಂಡೇ ಬಂದಿದ್ದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಓಬಳಾಪುರಂ ಮೈನಿಂಗ್ ಕಂಪನಿ (ಒಎಂಸಿ) ಮೂಲಕ ಆಂಧ್ರಪ್ರದೇಶ ವ್ಯಾಪ್ತಿಯ ಮಲಪನಗುಡಿ ಗಣಿ ಪ್ರದೇಶದಲ್ಲಿ 68.05 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಜನಾರ್ದನ ರೆಡ್ಡಿ 2006ರಲ್ಲಿ ಅರ್ಜಿ ಸಲ್ಲಿಸಿದ್ದರು. ಗಣಿಗಾರಿಕೆಗೆ 2008ರಲ್ಲಿ ಅನುಮತಿ ಸಿಕ್ಕಿತು. ಗಣಿಗಾರಿಕೆಗೆ ಅನುಮತಿ ಪಡೆದುಕೊಂಡ ಪ್ರದೇಶ ಬಳ್ಳಾರಿ ಅರಣ್ಯ ನಕ್ಷೆಗೆ ಹೊಂದಾಣಿಕೆ ಆಗುವುದಿಲ್ಲ. ಹಾಗೂ ತಾವು ಬಯಸಿದಂತೆ ಗಣಿಗಾರಿಕೆ ಮಾಡಲು ಬರುವುದಿಲ್ಲ ಎಂದು ರೆಡ್ಡಿ ಕರ್ನಾಟಕ ಹಾಗೂ ಆಂಧ್ರದ ಗಡಿಯನ್ನೇ ಬದಲಾಯಿಸಿದರು. ಆಂಧ್ರದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದು ಕರ್ನಾಟಕದಲ್ಲಿ ಗಣಿಗಾರಿಕೆ ಮಾಡಿದರು. ಇದೇ ಅವರಿಗೆ ಮುಳುವಾಯಿತು. ಅವನತಿಗೆ ಕಾರಣವಾಯಿತು.

ಕರ್ನಾಟಕ - ಆಂಧ್ರ ಗಡಿಯನ್ನೇ ಬದಲಾಯಿಸಿ, ನಮಗೆ ಗಣಿಗಾರಿಕೆಗೆ 2006ರಲ್ಲಿ ಅನುಮತಿ ಸಿಕ್ಕಿರುವ ತಮಟಿ ಪ್ರದೇಶದಲ್ಲಿ ರೆಡ್ಡಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಟಿ.ನಾರಾಯಣ ರೆಡ್ಡಿ ಮೈನಿಂಗ್ ಕಂಪನಿಯ ಟಪಾಲ್ ಗಣೇಶ್ (ಟಪಾಲ್ ಗಣೇಶ್ ಟಿ.ನಾರಾಯಣರೆಡ್ಡಿ ಪುತ್ರ) ಆರೋಪಿಸಿದರಲ್ಲದೆ, ಈ ಸಂಬಂಧ ಹೋರಾಟ ಆರಂಭಿಸಿದರು. ಟಪಾಲ್ ಗಣೇಶ್ 2006ರಲ್ಲಿ ಸಂಡೂರು ತಾಲೂಕು ತೋರಣಗಲ್ ಪೊಲೀಸ್ ಠಾಣೆಯಲ್ಲಿ ರೆಡ್ಡಿ ವಿರುದ್ಧ ದೂರು ದಾಖಲಿಸಿದರು. 2008ರಲ್ಲಿ ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರಕ್ಕೆ ಬಂದ ಬಳಿಕ ಬಳ್ಳಾರಿ ಭಾಗದ ಗಣಿಗಾರಿಕೆ ಪ್ರದೇಶವನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡರು. ಇದು ಲೋಕಾಯುಕ್ತರು ನೀಡಿದ ವರದಿಯಲ್ಲಿ ಸಹ ಪ್ರಸ್ತಾಪಿಸಲಾಗಿದೆ.

ತಮಗೆ ದೊರೆತ ಪರವಾನಗಿ ವ್ಯಾಪ್ತಿ ಮೀರಿ ಆಂಧ್ರ ಗಡಿ ಭಾಗದಲ್ಲಿ ಓಬಳಾಪುರಂ ಮೈನಿಂಗ್ ಕಂಪನಿ ಮೂಲಕ 10,760 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಆರಂಭಿಸಿದರು ಹಾಗೂ ಅಕ್ರಮವಾಗಿ ಮಣ್ಣು ಸಾಗಿಸಿದರು. ಆಂಧ್ರಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದು ಕರ್ನಾಟಕದಲ್ಲಿ ಗಣಿಗಾರಿಕೆ ಮಾಡಿದ ಆರೋಪ ಎದುರಿಸುತ್ತಿರುವ ಜನಾರ್ದನ ರೆಡ್ಡಿ, ನಾನು ಕರ್ನಾಟಕದ ಹಿಡಿ ಮಣ್ಣು ಮುಟ್ಟಿಲ್ಲ ಎಂದು ಸಮರ್ಥಿಸಿಕೊಂಡೇ ಬಂದಿದ್ದರು.

ಟಪಾಲ್ ಗಣೇಶ್ ನೀಡಿದ ದೂರಿನ ಹಿನ್ನೆಲೆ ಆಂಧ್ರಪ್ರದೇಶ ಸರ್ಕಾರ ಐಎಫ್‌ಎಸ್ ಅಧಿಕಾರಿಗಳ ತ್ರಿಸದಸ್ಯ ಸಮಿತಿಯನ್ನೇ ನೇಮಿಸಿತ್ತು. ಈ ವರದಿಯಲ್ಲಿ ರೆಡ್ಡಿ ಮಾಡಿರುವ ಅಕ್ರಮ ಗಣಿಗಾರಿಕೆ ಬಯಲಾಗಿತ್ತು. ವರದಿ ನೀಡಿದ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತು. ಈ ಪ್ರಕರಣದಲ್ಲಿ ರೆಡ್ಡಿ ₹884 ಕೋಟಿಗಳಷ್ಟು ಅವ್ಯವಹಾರ ಮಾಡಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

2011ರ ಸೆಪ್ಟೆಂಬರ್‌ 5ರಂದು ಸಿಬಿಐ ಜನಾರ್ದನ ರೆಡ್ಡಿಯನ್ನು ಬಂಧಿಸಿ ಹೈದ್ರಾಬಾದಿನ ಚಂಚಲಗುಡ್ಡ ಜೈಲಿಗೆ ಹಾಕಿತು.

Share this article