ಕನ್ನಡಪ್ರಭ ವಾರ್ತೆ ನಾಗಮಂಗಲಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವನ್ನಾಗಿ ಮಾಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಖರಡ್ಯ ಬಸವೇಗೌಡ ಹೇಳಿದರು.ತಾಲೂಕಿನ ಚಿಣ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವದಲ್ಲಿ ಒಡೆಯರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಕಲೆ, ಸಾಹಿತ್ಯ, ಸ್ತ್ರೀ ಶಿಕ್ಷಣ, ಕೈಗಾರಿಕೆ, ಆರೋಗ್ಯ, ನೀರಾವರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
ನಾಲ್ವಡಿ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ವರ್ಷದ ಡಿಸೆಂಬರ್‌ನಲ್ಲಿ 87 ನೇ ಅಖಿಲ ಭಾರತ ಸಮ್ಮೇಳನ ಆಯೋಜಿಸಿ ಆತಿಥ್ಯವಹಿಸುವ ಸುವರ್ಣ ಅವಕಾಶ ನಮ್ಮ ಜಿಲ್ಲೆಗೆ ದೊರೆತಿರುವುದು ನಾಡಿನ ಕನ್ನಡಾಭಿಮಾನಿಗಳು ಮತ್ತು ಸಾಹಿತ್ಯಾಸಕ್ತರ ಸೌಭಾಗ್ಯವಾಗಿದೆ ಎಂದರು.ಉಪ ಪ್ರಾಂಶುಪಾಲ ಹೆಚ್.ಡಿ.ಉಮಾಶಂಕರ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ದೇಶದಲ್ಲಿಯೇ ಅತ್ಯುತ್ತಮ ಆಡಳಿತಗಾರರಾಗಿದ್ದರು. ಅವರ ಆಳ್ವಿಕೆಯ ಕಾಲವನ್ನು ಸುವರ್ಣ ಯುಗದ ಕಾಲ ಎನ್ನಬಹುದು. ಮೈಸೂರು ಸಂಸ್ಥಾನವು ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಿದೆ ಎಂದು ತಿಳಿಸಿದರು.
ನಾಲ್ವಡಿ ಕಾಲದಲ್ಲಿ ನೀರಾವರಿ, ಕೈಗಾರಿಕೆ, ಹಣಕಾಸು, ಬ್ಯಾಂಕ್ ಸ್ಥಾಪನೆ, ಜಲವಿದ್ಯುತ್ ಯೋಜನೆ, ಕೆಆರ್‌ಎಸ್ ಜಲಾಶಯ ನಿರ್ಮಾಣ ಮುಂತಾದವುಗಳನ್ನು ಹೆಸರಿಸಬಹುದು. ಒಡೆಯರ್ ತಮ್ಮ ಆಡಳಿತದ ಅವಧಿಯಲ್ಲಿ ಗಮನಾರ್ಹ ಹೆಚ್ಚು ಸಾಧನೆಗಳನ್ನು ಮಾಡಿದ್ದಾರೆ. ಅವರ ಜೀವನ ಮೌಲ್ಯಗಳು ನಮಗೆ ಸ್ಪೂರ್ತಿಯಾಗಿವೆ ಎಂದು ಹೇಳಿದರು.ಸಮಾರಂಭದಲ್ಲಿ ಪ್ರಾಂಶುಪಾಲ ಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಲ್ವಡಿ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಈ ವೇಳೆ ಉಪನ್ಯಾಸಕರಾದ ರಮೇಶ್, ಪೃಥ್ವಿರಾಜ್, ಲೋಕೇಶ, ಶಶಿಕುಮಾರ್, ಶಿಕ್ಷಕರಾದ ಬಸವರಾಜು, ಶ್ರೀಧರ್. ಪ್ರಕಾಶ್, ಶೃತಿ, ತೇಜಸ್ವಿನಿ, ಪವಿತ್ರ, ರುದ್ರೇಶ್ ಸೇರಿದಂತೆ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಇದ್ದರು.