ಶೃಂಗೇರಿ: 2025 ಅಂತ್ಯದೊಳಗೆ ಪೂರ್ಣ । ಕರಾವಳಿ ಮಲೆನಾಡು ಸಂಪರ್ಕ ಕೇಂದ್ರ ಬಿಂದು
ನೆಮ್ಮಾರ್ ಅಬೂಬಕರ್.ಕನ್ನಡಪ್ರಭ ವಾರ್ತೆ ಶೃಂಗೇರಿ
ಪ್ರಸಿದ್ಧ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ಪ್ರತಿ ವರ್ಷ ಸುಮಾರು 80 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಶೃಂಗೇರಿಯಿಂದ ರಾಜ್ಯದ ವಿವಿಧೆಡೆಗೆ ಕೆಎಸ್ಆರ್ ಟಿಸಿ ಬಸ್ ಸೌಲಭ್ಯ ವಿದ್ದರೂ ಈ ಭಾಗದಲ್ಲಿ ಕೆಎಸ್ಆರ್ ಟಿಸಿ ಡಿಪೋ ಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಡಿಪೋ ಮಂಜೂರು ಮಾಡಿದರೂ ಜಾಗದ ಹುಡುಕಾಟದಿಂದ ವಿಳಂಬ ವಾಗುತ್ತಲೇ ಬಂದಿದ್ದ ಡಿಪೋ ನಿರ್ಮಾಣ ಕಾಮಗಾರಿಗೆ ಇದೀಗ ಕಾಲ ಸನ್ನಿಹಿತವಾಗಿದೆ.ಡಿಪೋ ಮಂಜುರಾದ ನಂತರ ಅಗತ್ಯ ಜಾಗಕ್ಕಾಗಿ 2018ಕ್ಕೂ ಹಿಂದಿನಿಂದ ಆರಂಭವಾದ ಹುಡುಕಾಟ ಕೊನೆಗೋಂಡಿದ್ದು ಮಾತ್ರ 2023ರಲ್ಲಿ. ಅದಕ್ಕೆ ಕಾರಣ ಎತ್ತ ನೋಡಿದರತ್ತ ಅರಣ್ಯ ಇಲಾಖೆ, ಸೆಕ್ಷನ್ 4 (1), ಮೀಸಲು ಅರಣ್ಯ ಹೀಗೆ ಹಲವಾರು ಕಾರಣಗಳಿಂದ ಜಾಗ ದಕ್ಕಲಿಲ್ಲ. ಕಾಮಗಾರಿ ಚಾಲನೆಗೊಳ್ಳಲಿಲ್ಲ. ಸರ್ಕಾರ, ಜನಪ್ರತಿನಿಧಿಗಳ ಮೇಲೆ ನಿರಂತರ ಒತ್ತಡ ಮುಂದುವರಿಯುತ್ತಲೇ ಹೋಯಿತು. ಜಾಗ ಹುಡುಕಾಡುತ್ತಾ ಹೋದಡೆಯಲ್ಲೆಲ್ಲ ಅರಣ್ಯ ಇಲಾಖೆ ಜೊತೆಗಿರುತ್ತಿತ್ತು.
2018 ರಲ್ಲಿ ಮೆಣಸೆ ಪಂಚಾಯಿತಿ ವ್ಯಾಪ್ತಿಯ ಶೃಂಗೇರಿ ಚಿಕ್ಕಮಗಳೂರು ರಾಜ್ಯ ಹೆದ್ದಾರಿ ನಡುವೆ ಬರುವ ಶಿಡ್ಲೆ ಎಂಬಲ್ಲಿ 5 ಎಕರೆ ಜಾಗ ಗುರುತಿಸಲಾಯಿತು. ಅಲ್ಲಿಗೂ ಅರಣ್ಯ ಇಲಾಖೆ ಮತ್ತೆ ಬೆಂಬಿಡದೆ ಹಿಂಬಾಲಿಸಿತು. ಅರಣ್ಯ ಇಲಾಖೆಗೆ ಸೇರಿದ ಜಾಗವಾಗಿದ್ದರೂ, ಇಲಾಖೆಗೆ ಬದಲಿ ಅರಣ್ಯವನ್ನು ಕಡೂರು ತಾಲೂಕಿನಲ್ಲಿ ನೀಡಲು ಆದೇಶಿಸಿ 2018 ರಲ್ಲಿ ಡಿಪೋ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿತು. ಇನ್ನೇನು 1 ವರ್ಷ ದೊಳಗೆ ಡಿಪೋ ಕಾಮಗಾರಿ ಮುಗಿದು, ಕಾರ್ಯರೂಪಕ್ಕೆ ಬರಲಿದೆ ಎನ್ನುವ ಆಸೆಯ ಗರಿಗೆದರುತ್ತಿದ್ದಂತೆ ಮತ್ತೆ ಅದೇ ರಾಗ ಅದೇ ಹಾಡು ಎಂಬಂತೆ ಕೆಲಸ ಸ್ಥಗಿತಗೊಂಡಿತು. ಮತ್ತೆ ಜಾಗಕ್ಕಾಗಿ ಹುಡುಕಾಟ ತಪ್ಪಲಿಲ್ಲ. ಶೃಂಗೇರಿ ಸುತ್ತಮುತ್ತ ಎಲ್ಲಿ ಹುಡುಕಿದರೂ ಜಾಗದ ಕೊರತೆ. ಅರಣ್ಯ ಇಲಾಖೆ ಖ್ಯಾತೆ. ಅಡ್ಡಿ ಆತಂಕಗಳು ಡಿಪೋ ಕಾಮಗಾರಿಗೆ ವಿಘ್ನವಾಗಿ ಕಾಡತೊಡಗಿತು.2023 ರವರೆಗೂ ಇದೇ ಪರಿಸ್ಥಿತಿ ಮುಂದುವರಿದಿತ್ತು. ಮಂಗಳೂರು ಶಿವಮೊಗ್ಗ ರಾ.ಹೆ 169 ರ ವಿದ್ಯಾರಣ್ಯಪುರ ಪಂಚಾಯಿತಿ ವ್ಯಾಪ್ತಿಯ ತ್ಯಾವಣ ಎಂಬಲ್ಲಿ ಸರ್ಕಾರ 4.23 ಎಕರೆ ಜಾಗ ಗುರುತಿಸಲಾಯಿತು. 2023ರ ವಿಧಾನ ಸಭೆ ಚುನಾವಣೆ ಹೊತ್ತಿನಲ್ಲಿ ತರಾತುರಿಯಲ್ಲಿ ಡಿಪೋ ಕಾಮಗಾರಿಗೆ ಭೂಮಿಪೂಜೆ ನೆರವೇರಿತು. ಅಲ್ಲಿಂದ ಕಾಮಗಾರಿಗೆ ಚಾಲನೆ ದೊರೆಯಿತಾದರೂ ಅಷ್ಟೆನೂ ವೇಗ ಪಡೆಯದೆ ಇದೀಗ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿ್ದದು ಮಲೆನಾಡು ಭಾಗದ ಜನರ ಕನಸು ನನಸಾಗುವ ಕಾಲ ಬಂದಂತಾಗಿದೆ.
ಶೃಂಗೇರಿಯಿಂದ ಕೇವಲ 3 ಕಿಮಿ ದೂರದಲ್ಲಿರುವ ತ್ಯಾವಣ ಮಂಗಳೂರು, ಶೃಂಗೇರಿ ಸಂಪರ್ಕ ರಸ್ತೆಯಲ್ಲಿದೆ. ಕರಾವಳಿ ಮಲೆನಾಡು ಭಾಗದ ನಡುವಿನ ಕೇಂದ್ರ ಬಿಂದುವಾಗಿದೆ. ಶೃಂಗೇರಿಯಿಂದ ಚಿಕ್ಕಮಗಳೂರು, ಹಾಸನ, ಮೈಸೂರು, ಬೆಂಗಳೂರಿಗೆ ಕೆಎಸ್ಆರ್ಟಿಸಿ ಹೆಚ್ಚು ಬಸ್ ಸೌಕರ್ಯ ವಿದ್ದರೆ. ಶಿವಮೊಗ್ಗ , ಉಡುಪಿಗೆ ಮಾತ್ರ 1-2 ಬಸ್ ಹೊರತು ಪಡಿಸಿದರೆ ಮಂಗಳೂರು, ಧರ್ಮಸ್ಥಳ ಇತರೆ ಕಡೆಗಳಿಗೆ ಕೆಎಸ್ ಆರ್ ಟಿಸಿ ಬಸ್ ಸೌಕರ್ಯವೇ ಇಲ್ಲ. ದಕ್ಷಿಣ ಕನ್ನಡ, ಧರ್ಮಸ್ಥಳ, ಕೊಲ್ಲೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಹೋಗುವವರು ಖಾಸಗಿ ಬಸ್ ಗಳನ್ನೇ ಅವಲಂಬಿಸಬೇಕಿದೆ. ಮಲೆನಾಡು ಕರಾವಳಿ ನಡುವೆ ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಇಲ್ಲ. ಇದು ಬಹುವರ್ಷಗಳ ಸಮಸ್ಯೆ. ಇನ್ನೂ ಈ ಭಾಗದ ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಕರ್ಯ ಕೇಳುವಂತೆಯೇ ಇಲ್ಲ. ಇಲ್ಲಿ ಬಸ್ ಡೀಪೋ ಆರಂಭವಾಗುವುದರಿಂದ ತಾಲೂಕಿನ ಪ್ರವಾಸೋದ್ಯಮ, ವಾಣಿಜ್ಯ, ವ್ಯಾಪಾರ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂಬುದರಲ್ಲಿ ಸಂಶಯವಿಲ್ಲ.ಧಾರ್ಮಿಕ, ಪ್ರವಾಸಿ ತಾಣವಾದ ಶೃಂಗೇರಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಕಿಗ್ಗಾ, ಸಿರಿಮನೆ, ಕುಂದಾದ್ರಿ ಹೀಗೆ ಸುತ್ತಮುತ್ತಲು ಪ್ರವಾಸಿ ತಾಣಗಳಿದ್ದು ಪ್ರವಾಸಿಗರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಡಿಪೋ ಆರಂಭಗೊಂಡರೆ ವರದಾನವಾಗಲಿದೆ. ಶೀಘ್ರ ಕಾಮಗಾರಿ ಮುಗಿದು ಗ್ರಾಮೀಣ ಭಾಗಗಳಲ್ಲಿ ಬಸ್ ಗಳು ಸಂಚರಿಸುವಂತಾಗಲಿ ಎಂಬುದು ಮಲೆನಾಡಿನ ಜನರ ಬಹುದಿನದ ನಿರೀಕ್ಷೆ.
-- ಬಾಕ್ಸ್--2025 ಅಂತ್ಯದೊಳಗೆ ಡಿಪೋ ನಿರ್ಮಾಣವಾಗಲಿದೆ. ಆಡಳಿತ ಕೊಠಡಿ, ವಿಶ್ರಾಂತಿ ತಾಣ, ವಾಹನ ಸರ್ವಿಸ್, ದುರಸ್ತಿ ಘಟಕ ಸಹಿತ ಎಲ್ಲಾ ಮೂಲಭೂತ ಸೌಕರ್ಯ ಗಳೊಂದಿಗೆ ಸುಸಜ್ಜಿತವಾಗಿ ಡಿಪೋ ಸುಮಾರು ₹8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಡಿಪೋ ಕಾಮಗಾರಿಗೆ ಸಮರ್ಪಕ ಜಾಗ ಸಿಕ್ಕಿದ್ದರೆ ಈಗಾಗಲೇ ಪೂರ್ಣಗೊಳ್ಳುತ್ತಿತ್ತು. 2018 ರಲ್ಲಿ ಶಿಡ್ಲೆಯಲ್ಲಿ ಜಾಗ ಮಂಜೂರಾಗಿ ಶಂಕುಸ್ಥಾಪನೆ ನೆರವೇರಿದ್ದರೂ ಅರಣ್ಯ ಇಲಾಖೆ ಸಮಸ್ಯೆಯಿಂದ ಕೆಲಸ ಸ್ಥಗಿತಗೊಂಡಿತು. ಮತ್ತೆ 2023 ರಲ್ಲಿ ತ್ಯಾವಣದಲ್ಲಿ 4.23 ಎಕರೆ ಜಾಗವನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದ ರಿಂದ ಶಂಕುಸ್ಥಾಪನೆ ಮಾಡಿ ಕಾಮಗಾರಿ ಆರಂಭಿಸಿದ್ದು ಪ್ರಸ್ತುತ ಕಾಮಗಾರಿ ಚುರುಕು ಪಡೆದಿದೆ. - ಶ್ರೀಧರ್ ಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರು. ಕೆಎಸ್ಆರ್ಟಿಸಿ ,ಚಿಕ್ಕಮಗಳೂರು ವಿಭಾಗ.
--ಅರಣ್ಯ ಇಲಾಖೆ ಅಡ್ಡಿ, ಸೆಕ್ಷನ್ 4(1), ಈ ಎಲ್ಲಾ ಸಮಸ್ಯೆಗಳಿಂದ ಸರಿಯಾದ ಸಮಯಕ್ಕೆ ಕಾಮಗಾರಿ ಆರಂಭಗೊಳ್ಳಲಿಲ್ಲ. ಈ ಇರುವ ಎಲ್ಲಾ ಅಡ್ಡಿ ಆತಂಕಗಳು ದೂರವಾಗಿದೆ. ಜಾಗ ಸಮತಟ್ಟು ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ನಡೆದು ಆದಷ್ಟು ಬೇಗ ಡಿಪೋ ಆರಂಭವಾಗಲಿ
- ರವಿಶಂಕರ್ ಹೊಸದೇವರ ಹಡ್ಲು--
ಶೃಂಗೇರಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು. ಕೆಎಸ್ ಆರ್ ಟಿಸಿ ಡಿಪೋ ಅಗತ್ಯವಿದೆ. ಡಿಪೋ ಕಾಮಗಾರಿಗೆ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಬೇಕು. ಮಲೆನಾಡು ಕರಾವಳಿ ನಡುವೆ ಕೆಎಸ್ಆರ್ಟಿಸಿ ಬಸ್ ಗಳು ಸಂಚರಿಸುವಂತಾಗಿ. ಗ್ರಾಮೀಣ ಪ್ರದೇಶಗಳ ಜನರಿಗೂ ಬಸ್ ಸೌಕರ್ಯ ಸಿಗುವಂತಾಗಲಿ.-ಎಚ್.ಜಿ.ಪುಟ್ಟಪ್ಪ ಹೆಗ್ಡೆ.
ಕಾಂಗ್ರೆಸ್ ಮುಖಂಡ29 ಶ್ರೀ ಚಿತ್ರ 1-ಶೃಂಗೇರಿ ಹೊರವಲಯದ ರಾ.ಹೆ.169 ರ ತ್ಯಾವಣ ಬಳಿ ಕೆಎಸ್ಆರ್ಟಿಸಿ ಡಿಪೋ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳ.
29 ಶ್ರೀ ಚಿತ್ರ 4-ರವಿಶಂಕರ್.ಹೊಸದೇವರ ಹಡ್ಲು.29 ಶ್ರೀ ಚಿತ್ರ 5-ಹೆಚ್.ಜಿ.ಪುಟ್ಟಪ್ಪ ಹೆಗ್ಡೆ.