ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯ
ಕಳೆದ ಐದು ವರ್ಷಗಳಿಂದಲೂ ಪರೀಕ್ಷಾರ್ಥ ಸ್ಫೋಟ (ಟ್ರಯಲ್ ಬ್ಲಾಸ್ಟ್) ಗುಮ್ಮ ಬೆಂಬಿಡದೆ ಕಾಡುತ್ತಲೇ ಇದೆ. ಈಗಾಗಲೇ ಎರಡು ಬಾರಿ ಪರೀಕ್ಷಾರ್ಥ ಸ್ಫೋಟಕ್ಕೆ ಜಿಲ್ಲಾಡಳಿತ ನಡೆಸಿದ ಪ್ರಯತ್ನ ರೈತ ಸಂಘದವರ ವಿರೋಧದಿಂದ ವಿಫಲಗೊಂಡಿದೆ. ಈಗ ಮೂರನೇ ಬಾರಿಗೆ ಟ್ರಯಲ್ ಬ್ಲಾಸ್ಟ್‌ಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜೊತೆಗೆ ರೈತ ಸಮೂಹದಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.೨೦೧೮ರ ಸೆಪ್ಟೆಂಬರ್ ೨೫ರಲ್ಲಿ ಬೇಬಿ ಬೆಟ್ಟದಲ್ಲಿ ಉಂಟಾದ ಭಾರೀ ಶಬ್ಧ ಜಿಲ್ಲೆಯ ಜನರನ್ನು ತಲ್ಲಣಿಸುವಂತೆ ಮಾಡಿತ್ತು. ಈ ಭಾರೀ ಶಬ್ಧದ ಮೂಲ ಹುಡುಕಿದಾಗ ಬೇಬಿ ಬೆಟ್ಟದಲ್ಲಿ ಸಂಭವಿಸಿದ ಗಣಿ ಸ್ಫೋಟದ ಶಬ್ಧ ಎನ್ನುವುದು ಖಚಿತಪಟ್ಟಿತ್ತು. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಶಬ್ಧದ ಮೂಲ ಪತ್ತೆ ಮಾಡುವುದರೊಂದಿಗೆ ಸ್ಫೋಟದಿಂದ ಭೂಮಿಯೊಳಗೆ ಕಂಪನದ ಅಲೆಗಳು ಸಾಗಿರುವುದನ್ನು ಗುರುತಿಸಿತ್ತು. ಸ್ಫೋಟ ಕುರಿತು ಬಿಡುಗಡೆ ಮಾಡಿದ ವರದಿಯಲ್ಲಿ ಕೆಆರ್‌ಎಸ್ ಅಣೆಕಟ್ಟೆ ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲ ಗಣಿ ಚಟುವಟಿಕೆಗಳನ್ನು ನಿಷೇಧಿಸುವಂತೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಸಲಹೆ ನೀಡಿತ್ತು.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಂಡ್ಯ ಕೇಂದ್ರವನ್ನು ಕೃಷ್ಣರಾಜಸಾಗರ ಅಣೆಕಟ್ಟು ಸಮೀಪ ೧೨.೫.೨೦೧೧ರಲ್ಲಿ ತೆರೆಯಲಾಗಿದೆ. ಇದರ ಮುಖ್ಯ ನಿಯಂತ್ರಣಾ ಕೇಂದ್ರ ಬೆಂಗಳೂರಿನಲ್ಲಿದೆ. ಭೂಕಂಪ ಹಾಗೂ ಗಣಿ ಸ್ಫೋಟದಿಂದ ಭೂಮಿಯೊಳಗೆ ಉಂಟಾಗುವ ಬದಲಾವಣೆಗಳು, ಕಂಪನದ ಪ್ರಮಾಣದ ಮಾಹಿತಿಯನ್ನು ವಿಶ್ಲೇಷಣೆ ಮಾಡುವುದಲ್ಲದೇ, ಸೂಕ್ಷ್ಮ ಅಂಶಗಳನ್ನು ಗುರುತಿಸಿ ತಾಂತ್ರಿಕ ವರದಿ ಸಿದ್ಧಪಡಿಸಿ ಸಂಬಂಧಿಸಿದವರಿಗೆ ರವಾನಿಸುವ ಕೆಲಸವನ್ನು ಮಾಡುತ್ತಿದೆ.ಪರೀಕ್ಷಾರ್ಥ ಸ್ಫೋಟಕ್ಕೆ ಕೂಗೆದ್ದಿರುವ ಈ ಸಮಯದಲ್ಲಿ ಭೂಮಿಯೊಳಗೆ ಸಂಭವಿಸುವ ಭೂಕಂಪನ ಹಾಗೂ ಗಣಿಗಾರಿಕೆ ಚಟುವಟಿಕೆಗಳ ಉಸ್ತುವಾರಿ ಮಾಡುತ್ತಿರುವ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಸಂಯೋಜಿಕ ನೋಂದಾಯಿತ ಸ್ವಾಯತ್ತ ಸಂಸ್ಥೆ ನೀಡಿರುವ ವರದಿ ಬಗ್ಗೆಯೇ ವಿಶ್ವಾಸವಿಲ್ಲ ಎನ್ನುವಂತಾಗಿದೆ.
ದೀಪದ ಕೆಳಗೆ ಕತ್ತಲು, ಹಿತ್ತಲಗಿಡ ಮದ್ದಲ್ಲ ಎಂಬ ಮಾತಿನಂತೆ ನಮ್ಮವರೇ ನೀಡಿರುವ ವೈಜ್ಞಾನಿಕ ವರದಿಯೊಂದನ್ನು ಮೂಲೆಗುಂಪು ಮಾಡಿ ಪುಣೆ, ಮಹಾರಾಷ್ಟ್ರ, ಜಾರ್ಖಂಡ್ ಸೇರಿದಂತೆ ಅನ್ಯ ರಾಜ್ಯಗಳಿಂದ ತಜ್ಞರ ತಂಡವನ್ನು ಕರೆಸಿಕೊಂಡು ಪರೀಕ್ಷಾರ್ಥ ಸ್ಫೋಟಕ್ಕೆ ಮುಂದಾಗುತ್ತಿರುವುದು ದೊಡ್ಡ ದುರಂತದ ಸಂಗತಿಯಾಗಿದೆ.ಕೃಷ್ಣರಾಜಸಾಗರ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿ ನಿಷೇಧ ಆದೇಶ ಹೊರಡಿಸಿದ ಹೈಕೋರ್ಟ್ ಮೂಲಕವೇ ಪರೀಕ್ಷಾರ್ಥ ಸ್ಫೋಟಕ್ಕೆ ಆದೇಶ ಹೊರಡಿಸಿರುವುದರ ಹಿಂದೆ ಗಣಿ ಧಣಿಗಳು ನಡೆಸುತ್ತಿರುವ ಲಾಭಿ ಮತ್ತು ರಾಜಕೀಯ ಒತ್ತಡವಿರುವಂತೆ ಕಂಡುಬರುತ್ತಿದೆ. ತಮಗೆ ಅನುಕೂಲ ಮಾಡಿಕೊಳ್ಳುವ ಉದ್ದೇಶದಿಂದ ಗಣಿ ಮಾಲೀಕರು ಗಣಿ ನಿಷೇಧ ಆದೇಶವನ್ನು ತೆರವುಗೊಳಿಸುವುದನ್ನು ಗುರಿಯಾಗಿಸಿಕೊಂಡು ಕಾನೂನು ಅಸ್ತ್ರಕ್ಕೆ ಪ್ರತಿಯಾಗಿ ಕಾನೂನು ಅಸ್ತ್ರವನ್ನೇ ಬಳಸಿ ಹೋರಾಟ ನಡೆಸುತ್ತಿದ್ದಾರೆ.
ಎರಡು ಪರೀಕ್ಷಾರ್ಥ ಸ್ಫೋಟಗಳನ್ನು ತಡೆಯುವಲ್ಲಿ ಯಶಸ್ವಿಯಾಗಿರುವ ರೈತ ಸಂಘದವರು ಇದೀಗ ಮೂರನೇ ಪರೀಕ್ಷಾರ್ಥ ಸ್ಫೋಟಕ್ಕೆ ಸಿದ್ಧತೆ ನಡೆಸಿರುವುದರ ವಿರುದ್ಧವೂ ಸಟೆದುನಿಂತಿದ್ದಾರೆ. ಯಾವುದೇ ಕಾರಣಕ್ಕೂ ಪರೀಕ್ಷಾರ್ಥ ಸ್ಫೋಟಕ್ಕೆ ಅವಕಾಶ ನೀಡುವುದಿಲ್ಲ. ಗೋ-ಬ್ಯಾಕ್ ಚಳವಳಿ ನಡೆಸುವುದಕ್ಕೂ ನಾವು ಸಿದ್ಧತೆ ನಡೆಸಿರುವುದಾಗಿ ಹೇಳುತ್ತಿದ್ದಾರೆ.ಗಣಿಧಣಿಗಳಿಗೆ ಬೇಬಿ ಬೆಟ್ಟವೇ ಕೇಂದ್ರ ಸ್ಥಾನವೇಕೆ..?ಗಣಿಗಾರಿಕೆ ನಡೆಸುವುದಕ್ಕೆ ಜಿಲ್ಲೆಯ ಬೇರೆ ಕಡೆಗಳಲ್ಲಿ ಅವಕಾಶಗಳಿದ್ದರೂ ಗಣಿ ಧಣಿಗಳು ಬೇಬಿ ಬೆಟ್ಟವನ್ನೇ ಗಣಿಗಾರಿಕೆಗೆ ಮುಖ್ಯ ಕೇಂದ್ರಸ್ಥಾನ ಮಾಡಿಕೊಂಡಿರುವುದೇಕೆ ಎನ್ನುವುದು ಸಹಜವಾಗಿ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ, ಚಿನಕುರಳಿ ಹಾಗೂ ಸುತ್ತಲಿನ ಪ್ರದೇಶ ಗ್ರಾನೈಟಿಕ್ ಶಿಲಾ ನಿಕ್ಷೇಪ ಹೊಂದಿರುವುದರಿಂದಲೇ ಕಲ್ಲು ಗಣಿ ಧಣಿಗಳು ಇಡೀ ಪ್ರದೇಶದ ಮೇಲೆ ಬಲವಾದ ಹಿಡಿತ ಸಾಧಿಸಿಕೊಂಡು ಬರುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಬಹುಭಾಗ ನೈಸ್ ಶಿಲಾ ಪ್ರದೇಶವಾಗಿದೆ ಎನ್ನುವುದು ಭೌಗೋಳಿಕ ಲಕ್ಷಣದಿಂದ ತಿಳಿದುಬಂದಿರುವ ಅಂಶವಾಗಿದೆ.
ಜಿಲ್ಲೆಯ ಶಿಲಾ ರಚನೆಯನ್ನು ಧಾರವಾಡ ರೆಸ್ಟ್ ಹಾಗೂ ಪೆವಿನ್ಸುಲಾರ್ ಗೀಸಸ್ ಮತ್ತು ಗ್ರಾನೈಟ್ಸ್ ಎಂದು ಎರಡು ವಿಧಗಳಾಗಿ ವಿಂಗಡಿಸಿದೆ. ನೈಸ್ ಶಿಲಾ ಪ್ರದೇಶವು ಬೂದು ಬಣ್ಣದಿಂದ ಕೂಡಿದ್ದು, ಪದರಯುತವಾಗಿದೆ. ಇದನ್ನು ಪಾಂಡವಪುರ ತಾಲೂಕಿನ ಚಿನಕುರಳಿ ಹಾಗೂ ಬೇಬಿ ಬೆಟ್ಟ ವ್ಯಾಪ್ತಿಯಲ್ಲಿ ಅತ್ಯಂತ ಸ್ಪಷ್ಟವಾಗಿ ಕಾಣಬಹುದು.ಧಾರವಾಡ ಶಿಲಾ ವರ್ಗದ ರೆಸ್ಟ್ ಕಲ್ಲುಗಳು ಹೆಚ್ಚು ಅಗಲವಿಲ್ಲದ ಪಟ್ಟೆಗಳು ಉದ್ದುದ್ದವಾಗಿ ಜಿಲ್ಲೆಯ ಹಲವೆಡೆ ಸಾಗಿಹೋಗಿದ್ದು, ಪಟ್ಟೆಗಳು ಬೇಬಿಬೆಟ್ಟ, ಚಿನಕುರಳಿ ಮಧ್ಯದಲ್ಲೂ ಹಾದುಹೋಗಿವೆ. ಅಗ್ನಿ ಶಿಲೆಯಿಂದ ಆವೃತವಾಗಿ ನುಣುಪಾಗಿರುವ ಶಿಲಾ ಭಂಡಾರಕ್ಕೆ ಹೆಚ್ಚು ಬೇಡಿಕೆ ಮತ್ತು ಬೆಲೆ ಇರುವ ಕಾರಣದಿಂದಲೇ ಗಣಿಗಾರಿಕೆ ಇಲ್ಲಿ ವ್ಯಾಪಕವಾಗಿ ಹರಡಿಕೊಂಡಿದೆ. ಈ ಜಾಗದಿಂದ ಹೊರ ಹೋಗುವುದಕ್ಕೆ ಗಣಿಧಣಿಗಳು ಸುಲಭವಾಗಿ ಒಪ್ಪುತ್ತಿಲ್ಲ ಎಂದು ತಿಳಿದುಬಂದಿದೆ.ಮೌನಕ್ಕೆ ಜಾರಿದ ಜನಪ್ರತಿನಿಧಿಗಳು
ಕೃಷ್ಣರಾಜಸಾಗರ ಜಲಾಶಯದ ಬಳಿ ಪರೀಕ್ಷಾರ್ಥ ಸ್ಫೋಟ ನಡೆಸುವ ವಿಷಯವಾಗಿ ಜಿಲ್ಲೆಯ ಜನಪ್ರತಿನಿಧಿಗಳು ಮೌನಕ್ಕೆ ಜಾರಿದ್ದಾರೆ. ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ದೂರ ಉಳಿದು ಸೂಕ್ಷ್ಮವಾಗಿ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಗಣಿಗಾರಿಕೆ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದ್ದ ಸಂಸದೆ ಸುಮಲತಾ ಸಹ ಪರೀಕ್ಷಾರ್ಥ ಸ್ಫೋಟ ಕುರಿತಂತೆ ಮೌನ ಮುರಿಯುತ್ತಿಲ್ಲ. ಜಿಲ್ಲಾಡಳಿತ ಕೂಡ ಜನಪ್ರತಿನಿಧಿಗಳನ್ನು ಸಭೆಗೆ ಕರೆಯಲು ಬರುವುದಿಲ್ಲ ಎಂದು ಹೇಳಿದೆ. ಅಣೆಕಟ್ಟು ಸುರಕ್ಷತೆ, ಪರೀಕ್ಷಾರ್ಥ ಸ್ಫೋಟ ಇದಾವುದಕ್ಕೂ ಜನ ಪ್ರತಿನಿಧಿಗಳಿಗೆ ಸಂಬಂಧವಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಒಂದು ಕಾಲದಲ್ಲಿ ಗಣಿಗಾರಿಕೆ ವಿರುದ್ಧ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಸಿಡಿದುನಿಂತಿದ್ದರೆ, ಇಂದು ಅದೇ ಪರೀಕ್ಷಾರ್ಥ ಸ್ಫೋಟದ ಪರವಾಗಿ ಪುತ್ರ ದರ್ಶನ್ ಪುಟ್ಟಣ್ಣಯ್ಯ ನಿಂತಿರುವುದು ರೈತ ಸಂಘದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವಂತೆ ಮಾಡಿದೆ.ಪರೀಕ್ಷಾರ್ಥ ಸ್ಫೋಟವೇ ಬೇಕಿಲ್ಲ. ಅಷ್ಟಕ್ಕೂ ಕೆಆರ್‌ಎಸ್ ಸಮೀಪವೇ ಗಣಿಗಾರಿಕೆ ನಡೆಸಬೇಕೆಂಬ ಹಠ ಏಕೆ. ದೂರ ಎಲ್ಲಾದರೂ ಗಣಿಗಾರಿಕೆ ಮಾಡಿಕೊಳ್ಳಲಿ. ಕೆಆರ್‌ಎಸ್‌ಗೆ ಅಪಾಯವನ್ನು ಉಂಟುಮಾಡುವ ಗಣಿಗಾರಿಕೆಗೆ ಅವಕಾಶ ನೀಡಬಾರದು.
- ಬಸವರಾಜಪ್ಪ, ಭೂಗರ್ಭ ವಿಜ್ಞಾನಿ, ಮೈಸೂರುಕಾವೇರಿಪುರ ವ್ಯಾಪ್ತಿಯ ಎಂಟು ಪಂಚಾಯ್ತಿ ಜನರಿಗೆ ಬೇಬಿ ಬೆಟ್ಟದಲ್ಲಿ ಕೈಕುಳಿ ಮಾಡುವುದಕ್ಕಷ್ಟೇ ಅವಕಾಶ ಮಾಡಿಕೊಡಬೇಕು. ದೊಡ್ಡ ಮಟ್ಟದ ಗಣಿಗಾರಿಕೆ, ಸ್ಫೋಟ, ಕ್ರಷರ್ ನಡೆಸುವುದಕ್ಕೆ ನನ್ನ ಬೆಂಬಲವಿಲ್ಲ. ಪರೀಕ್ಷಾರ್ಥ ಸ್ಫೋಟದ ಬಗ್ಗೆ ವಿವರಣೆ ಕೇಳಿದ್ದೇನೆ.- ದರ್ಶನ್ ಪುಟ್ಟಣ್ಣಯ್ಯ, ಶಾಸಕ, ಮೇಲುಕೋಟೆ ಕ್ಷೇತ್ರಇದೊಂದು ಸೂಕ್ಷ್ಮ ಗಂಭೀರ ವಿಷಯ. ಅಣೆಕಟ್ಟೆ ಸುರಕ್ಷತೆ ಕಾಪಾಡುವುದರೊಂದಿಗೆ ಹೈಕೋರ್ಟ್ ಆದೇಶ ಪಾಲನೆ ಮಾಡಬೇಕಿದೆ. ಅಣೆಕಟ್ಟು ಸುರಕ್ಷತೆಗೇ ಮೊದಲ ಆದ್ಯತೆ ಇರಬೇಕು. ಅದಕ್ಕೆ ಅಪಾಯ ಉಂಟಾಗುವಂತ ಪ್ರಕ್ರಿಯೆಗಳಿಗೆ ವಿರೋಧವಿದೆ.
- ನಂದಿನಿ ಜಯರಾಂ, ರೈತ ಮುಖಂಡರುಗಣಿಗಾರಿಕೆ ಉದ್ದೇಶದಿಂದಲೇ ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುತ್ತಿರುವಂತೆ ಕಾಣುತ್ತಿದೆ. ಕಲ್ಲು ಕ್ವಾರೆ ನಡೆಯದೇ ಇದ್ದಂತಹ ಕಾಲಘಟ್ಟದಲ್ಲಿ ಅಣೆಕಟ್ಟೆ ನಿರ್ಮಾಣವಾಗಿದ್ದು, ಆ ವೇಳೆ ಯಾವ ಮಾನದಂಡ ಇಟ್ಟುಕೊಂಡು ಅಣೆಕಟ್ಟೆ ನಿರ್ಮಾಣ ಮಾಡಿದ್ದಾರೋ ಗೊತ್ತಿಲ್ಲ. ಈಗ ಅಣೆಕಟ್ಟೆಗೆ ೯೦ ವರ್ಷವಾಗಿರುವುದರಿಂದ ಇಂತಹ ದುಸ್ಸಾಹಗಳಿಗೆ ಕೈ ಹಾಕಬಾರದು.- ಮಂಜುನಾಥ್, ಗ್ರಾ.ಪಂ ಸದಸ್ಯ, ಹುಲಿಕೆರೆಅಧಿಕಾರಿಗಳು ಪಾರದರ್ಶಕವಾಗಿ ವರದಿ ನೀಡುತ್ತಾರೆ ಎನ್ನುವುದು ನಂಬಲು ಸಾಧ್ಯವಿಲ್ಲ. ಕೇವಲ ಬಂಡವಾಳ ಷಾಯಿಗಳು ಹಣ ಮಾಡುವ ಉದ್ದೇಶದಿಂದ ಲಕ್ಷಾಂತರ ಮಂದಿ ನಂಬಿಕೊಂಡು ಜೀವನಾಧಾರವಾಗಿರುವ ಅಣೆಕಟ್ಟೆಗೆ ಅಪಾಯ ಎದುರಾಗಲಿದೆ ಎಂದರೆ ಟ್ರಯಲ್ ಬ್ಲಾಸ್ಟ್ ಮಾಡುವುದು ಬೇಡ.
- ಭರತ್, ಮಜ್ಜಿಗೆಪುರ ಅಣೆಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಿದರೆ ಅಣೆಕಟ್ಟೆಗೆ ಸುರಕ್ಷತೆಗೆ ಅಡಚಣೆಯಾಲಿಗಲಿದೆ ಎಂದು ಹಲವರು ಹೇಳುತ್ತಿದ್ದಾರೆ. ಸರಿಯಾದ ಚಿತ್ರಣ ಗೊತ್ತಾಗುತ್ತಿಲ್ಲ. ಜೊತೆಗೆ ಅಣೆಕಟ್ಟೆ ಸಾಮರ್ಥ್ಯ ತಿಳಿಯಬೇಕಾಗಿರುವುದರಿಂದ ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್ ಮಾಡುವುದು ಸೂಕ್ತ.- ಮಂಜು, ಗ್ರಾಫಂ ಸದಸ್ಯ, ಕೆಆರ್‌ಎಸ್ಕೆಆರ್‌ಎಸ್ ಅಣೆಕಟ್ಟೆ ತುಂಬಾ ಹಳೆಯದಾಗಿದ್ದು ಟ್ರಯಲ್ ಬ್ಲಾಸ್ಟ್ ಮಾಡುವುದರಿಂದ ಅಣೆಕಟ್ಟೆಯ ಸಾಮರ್ಥ್ಯ ಹಾಗೂ ಭದ್ರತೆ ತಿಳಿಯಲಿದೆ, ಹಾಗಾಗಿ ಅಧಿಕಾರಿಗಳು ಯಾವುದೇ ಗಣಿದಣಿಗಳು ಅಥವಾ ರಾಜಕಾರಣಿಗಳ ಒತ್ತಡ, ಆಮಿಷಗಳಿಗೆ ಬಲಿಯಾಗದೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ವಸ್ತು ಸ್ಥಿತಿ ಚಿತ್ರಣ ನೀಡಬೇಕು.
-ಗುರುಪ್ರಸಾದ್, ನೆಲಮನೆ