ಪಿ.ಎಸ್. ಪಾಟೀಲ
ರೋಣ: ಮಲಪ್ರಭಾ ನದಿ ಪ್ರವಾಹದಿಂದ ಸ್ಥಳಾಂತರಗೊಂಡ ತಾಲೂಕಿನ ಹೊಳೆ ಹಡಗಲಿ ಆಸರೆ ನವಗ್ರಾಮವು ರಸ್ತೆ, ಚರಂಡಿ, ವಿದ್ಯುತ್ ದೀಪ, ಮಹಿಳಾ ಶೌಚಾಲಯ, ಶಾಲೆ, ಸಾರಿಗೆ ಬಸ್ ಸಂಚಾರ ವ್ಯವಸ್ಥೆ, ಪಡಿತರ ಆಹಾರ, ಶುದ್ಧ ಕುಡಿಯುವ ನೀರು ಸೇರಿದಂತೆ ಅನೇಕ ಸೌಕರ್ಯಗಳಿಂದ ವಂಚಿತವಾಗಿದೆ.2007 ಮತ್ತು 2009ರಲ್ಲಿ ಮಹಾಮಳೆಯಿಂದಾಗಿ ಮಲಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ, ಕಡೆಗೆ ಸ್ಥಳಾಂತರಗೊಂಡ ಗ್ರಾಮಗಳಲ್ಲಿ ಹೊಳೆ ಹಡಗಲಿಯೂ ಒಂದು. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇನ್ನೂ ಇವರು ಬದುಕಿನ ದಡ ಕಂಡಿಲ್ಲ.
ನರಗುಂದ ಮತಕ್ಷೇತ್ರ ವ್ಯಾಪ್ತಿಯ ಅಮರಗೋಳ ಗ್ರಾಪಂಗೆ ಸೇರಿದ ಗ್ರಾಮ ಇದಾಗಿದ್ದು, ಈ ಹಿಂದೆ (2010) ಹುನಗುಂಡಿ ಗ್ರಾಪಂಗೆ ಸೇರಿತ್ತು. ಮೂಲ ಹೊಳೆ ಹಡಗಲಿ ಗ್ರಾಮದಿಂದ ದಕ್ಷಿಣ ದಿಕ್ಕಿಗೆ ಬೆನಹಾಳ ಒಳರಸ್ತೆಗೆ ಹೊಂದಿಕೊಂಡು 8 ರೈತರಿಂದ 35ಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಸರ್ಕಾರ ಭೂಸ್ವಾಧೀನ ಮಾಡಿಕೊಂಡಿತು. ಭೂಸೇನಾ ನಿಗಮ ಒಟ್ಟು 305 ಮನೆಗಳನ್ನು ನಿರ್ಮಿಸಿ ಸರ್ಕಾರಕ್ಕೆ ಹಸ್ತಾಂತರಿಸಿತು. ಇದರಲ್ಲಿ 1ನೇ ಹಂತದಲ್ಲಿ 296 ಫಲಾನುಭವಿಗಳನ್ನು ಹಾಗೂ 2ನೇ ಹಂತದಲ್ಲಿ 9 ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರ ವಿತರಿಸಲಾಯಿತು. ಆದರೆ ಕಳೆದ 13 ವರ್ಷಗಳಿಂದ ಹಕ್ಕುಪತ್ರ ಮತ್ತು ಮನೆ ಹಂಚಿಕೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಶೇ. 90ರಷ್ಟು ಆಸರೆ ಮನೆಗಳು ಗ್ರಾಪಂನಲ್ಲಿ ಈ ವರೆಗೂ ನೊಂದಣಿಯಾಗಿಲ್ಲ. ಇದರಿಂದ ಇಲ್ಲಿ ವಾಸವಿರುವ ಬಹುತೇಕ ಫಲಾನುಭವಿಗಳಿಗೆ ತಮ್ಮ ಮನೆ ಯಾವುದೆಂದು ನಿರ್ದಿಷ್ಟವಾಗಿ ಗೊತ್ತಿಲ್ಲ.ಶೇ. 65ರಷ್ಟು ಕುಟುಂಬ ವಾಸ: 2011ರಲ್ಲಿ ಮನೆ ಹಕ್ಕುಪತ್ರ ವಿತರಿಸಲಾಯಿತು. 2011ರಿಂದ 2019ರ ವರೆಗೆ ಇಲ್ಲಿ ಶೇ. 10ರಷ್ಟು ಕುಟುಂಬಗಳು ಮಾತ್ರ ವಾಸವಾಗಿದ್ದವು. 2019 ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಯಿಂದಾಗಿ ಮತ್ತೆ ಮಲಪ್ರಭಾ ನದಿ ಉಕ್ಕಿ ಹರಿಯಿತು. 2007 ಮತ್ತು 2009ರ ಪ್ರವಾಹಕ್ಕಿಂತ ದೊಡ್ಡ ಪ್ರಮಾಣದಲ್ಲಿ ಮೂಲಗ್ರಾಮ ಹೊಳೆಹಡಗಲಿಯೊಳಗೆ ಪ್ರವಾಹದ ನೀರು ನುಗ್ಗಿ ಹಾನಿ ಮಾಡಿತು. ಆಗ ಮೂಲ ಗ್ರಾಮ ತೊರೆದು ಶೇ. 65ರಷ್ಟು ನವಗ್ರಾಮಕ್ಕೆ ಬಂದು ನೆಲೆಸಿದರು.
ದಶಕ ಕಳೆದರೂ ರಸ್ತೆ, ಚರಂಡಿಗಳು ಅಭಿವೃದ್ಧಿಯಾಗಿಲ್ಲ. ಮಳೆಗಾಲದಲ್ಲಿ ನೀರು ಮನೆಯೊಳಗೆ ನುಗ್ಗುತ್ತದೆ. ಸುತ್ತಲಿನ ಜಮೀನುಗಳ ನೀರು ಸಹ ''''ನವಗ್ರಾಮ''''ದೊಳಗೆ ಹರಿಯುತ್ತದೆ.ಶಾಲಾ ಮಕ್ಕಳಿಗೆ ತೀವ್ರ ತೊಂದರೆ: 2019ರ ನಂತರ ಇಲ್ಲಿ ಅಂಗನವಾಡಿ, 7ನೇ ತರಗತಿ ವರೆಗೆ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿದೆ. ಆದರೆ ಶಿಕ್ಷಕರು ನಿತ್ಯ ಬೆನಹಾಳ ಅಥವಾ ಮೂಲ ಹಡಗಲಿ ಗ್ರಾಮದಿಂದ 2 ಕಿಮೀ ನಡೆದುಕೊಂಡೇ ಬರಬೇಕಿದೆ. ಪ್ರೌಢಶಾಲೆ, ಕಾಲೇಜ್ ವ್ಯವಸ್ಥೆ ಇಲ್ಲ, ಬೇರೆ ಊರಿಗೆ ತೆರಳಲು ಬಸ್ ವ್ಯವಸ್ಥೆಯೂ ಇಲ್ಲ. ಖಾಸಗಿ ವಾಹನಕ್ಕೆ ನಿತ್ಯ ₹40 ಕೊಡಬೇಕು. ಕೆಲವರು ಅಷ್ಟು ಖರ್ಚು ಮಾಡಲಾಗದೇ ಶಾಲೆಗೆ ಹೋಗುವುದನ್ನು ಬಿಟ್ಟಿದ್ದಾರೆ.
ಲೋಕಾಯುಕ್ತರಲ್ಲಿ ದೂರು: ಕೆಲವರಿಗೆ 3ರಿಂದ 4 ಮನೆಗಳು ವಿತರಣೆಯಾಗಿದ್ದು, ಒಬ್ಬ ವ್ಯಕ್ತಿ ತನ್ನ ಪ್ರಭಾವ ಬಳಸಿ 6 ಮನೆಗಳನ್ನು ತಮ್ಮ ಕುಟುಂಬಕ್ಕೆ ಬರುವಂತೆ ಮಾಡಿದ್ದಾರೆ. ಮನೆ ಹಾಗೂ ಹಕ್ಕುಪತ್ರ ಹಂಚಿಕೆ ಗೊಂದಲ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಗ್ರಾಮದ ಕೆಲವರು ಲೋಕಾಯುಕ್ತರಿಗೆ ದೂರು ನೀಡಿದ್ದು, ಈ ಪ್ರಕರಣ ಲೋಕಾಯುಕ್ತ ಕೋರ್ಟ್‌ನಲ್ಲಿದೆ. ಮನೆ ಹಂಚಿಕೆ ಸಮಸ್ಯೆ ಇತ್ಯರ್ಥವಾಗುವ ವರೆಗೂ ಸ್ಥಳಾಂತರ ಆಸರೆ ನವಗ್ರಾಮಕ್ಕೆ ನೀರು ಹೊರತುಪಡಿಸಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬಾರದೆಂದು ಅಮರಗೋಳ ಗ್ರಾಪಂ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಿದೆ.ಪ್ರಯಾಸದ ಬದುಕು: ಹಕ್ಕುಪತ್ರ ವಿತರಣೆಯಾಗಿದ್ದರೂ ಈ ವರೆಗೂ ಗ್ರಾಪಂನಲ್ಲಿ ನೋಂದಣಿಯಾಗಿಲ್ಲ. ಇಲ್ಲಿ ಬಂದು ನೆಲಸಿದವರಿಗೆ ತಾವಿದ್ದ ಮನೆ ನಿರ್ದಿಷ್ಟವಾಗಿ ತಮ್ಮದೇ ಎಂಬುದು ಗೊತ್ತಿಲ್ಲ. 2011ರಲ್ಲಿ ಸರ್ಕಾರ ನಿರ್ಮಿಸಿದ ಆಸರೆ ಮನೆಗಳಿಗೆ ಸುಮಾರು 2019ರ ವರೆಗೆ ಯಾರೊಬ್ಬರೂ ಬಂದು ವಾಸ ಮಾಡಲಿಲ್ಲ. ಜನವಸತಿ ಇಲ್ಲದ್ದ ವೇಳೆ ಮನೆಗಳ ಮತ್ತು ಶೌಚಾಲಯಗಳ ಕದ, ಬಾಗಿಲು, ಕಿಟಕಿಗಳು ಕಳುವಾಗಿವೆ. ಬಹುತೇಕ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಮೇಲ್ಚಾವಣಿ ಸೋರುತ್ತಿದೆ.
ನಮಗ್ ರಸ್ತೆ, ನೀರು, ರೋಡ್ ಕೊಡದಿದ್ರು ಚಿಂತೆಯಿಲ್ಲರಿ. ಹೆಂಗರ ಬದುಕತೇವ್ರಿ. ಆದರೆ ನಮ್ಮ ಮಕ್ಕಳು ಕಲಿಯಾಕ ಬ್ಯಾರೆಕಡಿ ಸಾಲಿ, ಕಾಲೇಜಿಗೆ ಹೋಗಾಕ ಬಸ್ ವ್ಯವಸ್ಥೆ ಮಾಡ್ರಿ. ಬಸ್ ವ್ಯವಸ್ಥೆ ಇಲ್ಲದಕ್ಕ ನಮ್ಮ ಮಕ್ಕಳು ಶಾಲಿ ಬಿಟ್ಟು ಮನೆಯಾಗ ಕುಂತಾವ್ರಿ ಎಂದು ಗ್ರಾಮಸ್ಥರಾದ ಬಸಪ್ಪ ಹುಚ್ಚನವರ, ಶಿವಕುಮಾರ ಹೂಗಾರ, ಶೇಖಪ್ಪ ಪೂಜಾರ, ಶಿವಪ್ಪ ಮಣ್ಣೂರ, ಬೂದಿಹಾಳಪ್ಪ ಮಾದರ ಇತರರು ಹೇಳುತ್ತಾರೆ.ಶೀಘ್ರದಲ್ಲೇ ಮನೆ ಹಂಚಿಕೆ: ರಸ್ತೆ, ಚರಂಡಿ ನಿರ್ಮಿಸಲು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗುವುದು. ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ ಹೊಳೆಆಲೂರ ಮತ್ತು ರೋಣದಿಂದ ಹೊಳೆಹಡಗಲಿ ನವಗ್ರಾಮಕ್ಕೆ ಸಾರಿಗೆ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಲಿಸುವಂತೆ ರೋಣ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗುವುದು. ಶೀಘ್ರದಲ್ಲಿಯೇ ಮನೆ ಹಂಚಿಕೆ ಗೊಂದಲ ನಿವಾರಣೆಗೊಳ್ಳಲಿದೆ ಎಂದು ಅಮರಗೋಳ ಪಿಡಿಒ ಶಿವಕುಮಾರ ಡೊಳ್ಳಿನ ಹೇಳಿದರು.