ವಸತಿರಹಿತರ ನನಸಾಗದ ಸೂರಿನ ಕನಸು

KannadaprabhaNewsNetwork | Published : Jul 8, 2024 12:33 AM

ಸಾರಾಂಶ

ಬಸವ ಆವಾಸ್ ಯೋಜನೆಯಲ್ಲಿ ಸಾಮಾನ್ಯ ವರ್ಗಕ್ಕೆ ₹೧.೨೦ ಲಕ್ಷ ರೂ., ₹೩೦ ಸಾವಿರ ಉದ್ಯೋಗ ಖಾತರಿ ಯೋಜನೆಯಲ್ಲಿ ಒಟ್ಟೂ ₹೧.೫೦ ಲಕ್ಷವನ್ನು ಫಲಾನುಭವಿಗಳ ಖಾತೆಗೆ ಜಮಾ ಆಗಬೇಕು.

ಶಿರಸಿ: ಸರ್ಕಾರದಿಂದ ವಸತಿರಹಿತರಿಗೆ ಮಂಜೂರಾದ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗದಿರುವ ಕಾರಣದಿಂದ ಮನೆಗಳೆಲ್ಲವೂ ಅರ್ಧಕ್ಕೆ ನಿಂತಿದ್ದು, ಸಾಲ ಮಾಡಿಕೊಂಡು ಮನೆ ನಿರ್ಮಾಣಕ್ಕೆ ಕೈ ಹಾಕಿದವರ ಪರಿಸ್ಥಿತಿ ಚಿಂತಾಜನಕವಾಗಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಶಿರಸಿ- ಸಿದ್ದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರಸಿಯ ೩೨ ಗ್ರಾಮ ಪಂಚಾಯಿತಿ ಹಾಗೂ ಸಿದ್ದಾಪುರದ ೨೩ ಗ್ರಾಮ ಪಂಚಾಯಿತಿಯ ವಸತಿರಹಿತರಿಗೆ ಬಸವ ಆವಾಸ್ ಯೋಜನೆಯ ಮೂಲಕ ೫ ಸಾವಿರ ಮನೆಗಳನ್ನು ಮಂಜೂರಿ ಮಾಡಿಸಿದ್ದರು. ನಂತರ ವಿಧಾನಸಭಾ ಚುನಾವಣೆಯು ಘೋಷಣೆಯಾದ ಹಿನ್ನೆಲೆ ನೀತಿ ಸಂಹಿತೆ ಜಾರಿಗೊಂಡಿದ್ದರಿಂದ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲು ಸಾಧ್ಯವಾಗಿಲ್ಲ. ಚುನಾವಣೆ ಮುಕ್ತಾಯಗೊಂಡ ಬಳಿಕ ನಂತರ ಬದಲಾದ ಶಾಸಕರು, ಬದಲಾದ ಸರ್ಕಾರದ ಅವಧಿಯಲ್ಲಿ ಮನೆಗಳ ಆದೇಶ ಪತ್ರವನ್ನು ವಿತರಿಸಲಾಗಿತ್ತು. ಮನೆ ಮಂಜೂರಾತಿಯ ಆದೇಶಪತ್ರ ಕೈ ಸಿಕ್ಕಿದ ಮೇಲೆ ಗ್ರಾಪಂ ಮಾರ್ಗಸೂಚಿಯಂತೆ ಅರ್ಹ ಫಲಾನುಭವಿಗಳು ಸ್ವಹಾಯ ಸಂಘ, ಸಹಕಾರಿ ಸಂಘ, ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಮನೆ ನಿರ್ಮಾಣ ಪ್ರಾರಂಭಿಸಿದ್ದಾರೆ. ಅಡಿಪಾಯದ ಹಣ ಮಾತ್ರ ಲಭಿಸಿದೆ. ಆ ನಂತರದ ಹಣ ಮಾತ್ರ ಜಮಾ ಆಗಿಲ್ಲ. ಉಳಿದ ಹಣ ಜಮಾ ಆಗುತ್ತದೆ ಎಂದು ಕೆಲವರು ಕಾಮಗಾರಿ ಮುಂದುವರಿಸಿದ್ದಾರೆ. ಅಂಥವರು ಆರ್ಥಿಕ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಸವ ಆವಾಸ್ ಯೋಜನೆಯಲ್ಲಿ ಸಾಮಾನ್ಯ ವರ್ಗಕ್ಕೆ ₹೧.೨೦ ಲಕ್ಷ ರೂ., ₹೩೦ ಸಾವಿರ ಉದ್ಯೋಗ ಖಾತರಿ ಯೋಜನೆಯಲ್ಲಿ ಒಟ್ಟೂ ₹೧.೫೦ ಲಕ್ಷವನ್ನು ಫಲಾನುಭವಿಗಳ ಖಾತೆಗೆ ಜಮಾ ಆಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ₹೧.೫೦ ಲಕ್ಷ ಹಾಗೂ ₹೨೫ ಸಾವಿರವನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ಒಟ್ಟೂ ₹೧.೭೫ ಲಕ್ಷ ಜಮೆಯಾಗಬೇಕು. ಕಳೆದ ೬ ತಿಂಗಳ ಹಿಂದೆ ಒಂದು ಕಂತು ಮಾತ್ರ ಜಮೆಯಾಗಿದ್ದು, ಉಳಿದ ಸಹಾಯಧನ ಫಲಾನುಭವಿಗಳ ಖಾತೆಗೆ ಜಮೆಯಾಗಬೇಕು. ಸರ್ಕಾರದ ಸಹಾಯಧನ ಬರುತ್ತದೆ ಎಂದು ಸಾಲ ಮಾಡಿ ಸಾಮಗ್ರಿಗಳನ್ನು ಖರೀದಿಸಿ ಮನೆ ಕಟ್ಟಡ ಆರಂಭಿಸಿದ್ದಾರೆ. ಹಣದ ಕೊರತೆಯಿಂದ ಕೆಲವು ಮನೆ ಅರ್ಧಕ್ಕೆ ನಿಂತಿವೆ. ಕಾಸು ಇಲ್ಲದೇ ಬಡ ಫಲಾನುಭವಿಗಳು ಕಂಗಾಲಾಗಿದ್ದಾರೆ.

ಕೇವಲ ನಮ್ಮ ಗ್ರಾಪಂ ಸಮಸ್ಯೆಯೊಂದೇ ಅಲ್ಲ. ರಾಜ್ಯಾದ್ಯಂತ ಈ ಸಮಸ್ಯೆಯಿದೆ. ಕುಳವೆ ಗ್ರಾಪಂಗೆ ೮೨ ಮನೆ ನಿರ್ಮಾಣದ ಆದೇಶಪತ್ರವನ್ನು ವಿತರಣೆ ಮಾಡಲಾಗಿತ್ತು. ೬೨ ಮನೆ ನಿರ್ಮಾಣ ಪ್ರಾರಂಭಗೊಂಡಿದೆ. ಮೂರ‍್ನಾಲ್ಕು ಹಂತ ಕಾಮಗಾರಿ ಮುಕ್ತಾಯವಾದರೂ ಹಂತ- ಹಂತದ ಹಣ ಬಿಡುಗಡೆ ಮಾತ್ರ ಬಾಕಿ ಉಳಿದಿದೆ. ಬಡವರು ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಬಸವ ಆವಾಸ್ ನಿಗಮದ ಬೆಂಗಳೂರು ಕಚೇರಿಯ ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಿದರೆ, ಸರ್ಕಾರದಿಂದ ನಿಗಮಕ್ಕೆ ವಸತಿ ಯೋಜನೆಯ ಹಣ ಜಮಾ ಆಗಿಲ್ಲ. ಆದ ತಕ್ಷಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎನ್ನುತ್ತಾರೆ ಕುಳವೆ ಗ್ರಾಪಂ ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ.ಗೋಳು ಕೇಳುವವರು ಇಲ್ಲ...

ಸರ್ಕಾರದಿಂದ ಮನೆ ನಿರ್ಮಾಣಕ್ಕೆ ಮೊದಲ ಕಂತು ಮಾತ್ರ ಬಿಡುಗಡೆಯಾಗಿದ್ದು, ಉಳಿದ ಹಣ ಇನ್ನೂವರೆಗೂ ಬಂದಿಲ್ಲ.ಕೈಗಡ ಸಾಲ ಪಡೆದು, ಬಂಗಾರದ ಆಭರಣಗಳನ್ನು ಬ್ಯಾಂಕ್‌ನ್ನು ಒತ್ತೆಯಿಟ್ಟು ಮನೆ ನಿರ್ಮಾಣಕ್ಕೆ ಹಣ ವಿನಿಯೋಗಿಸಿದ್ದೇವೆ. ಹಣ ಬಂದ ಮೇಲೆ ಬಂಗಾರ ಬಿಡಿಸಿಕೊಳ್ಳಲು ಯೋಚನೆ ಮಾಡಿದ್ದೇವು. ಈಗ ಬಡ್ಡಿ ಮರುಪಾವತಿ ಮಾಡಿ ಸುಸ್ತಾಗಿದ್ದೇವೆ. ಮನೆ ಪಕ್ಕದ ಶೆಡ್‌ನಲ್ಲಿ ವಾಸವಿದ್ದೇವೆ. ಮಳೆಯ ನೀರು ಒಳಗಡೆ ನುಗ್ಗುತ್ತಿರುವುದರಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಫಲಾನುಭವಿಗಳೊಬ್ಬರು ತಮ್ಮ ಅಳಲು ತೋಡಿಕೊಂಡರು.

Share this article