ಮಾನವನ ಶ್ರೇಯಸ್ಸು ಬಯಸುವ ವೇದ, ಉಪನಿಷತ್ , ಶಾಸ್ತ್ರ: ಸ್ವಾಮೀಜಿ

KannadaprabhaNewsNetwork | Published : Feb 15, 2024 1:16 AM

ಸಾರಾಂಶ

ವೇದ, ಉಪನಿಷತ್ತು ಹಾಗೂ ಶಾಸ್ತ್ರಗಳು ಮಾನವನ ಶ್ರೇಯಸ್ಸು ಹಾಗೂ ಕುಟುಂಬದ ಶ್ರೇಯೋಭಿವೃದ್ಧಿಯನ್ನು ಬಯಸುತ್ತದೆ ಎಂದು ಬಸ್ತಿಮಠ ಶ್ರೀ ಜ್ವಾಲಾಮಾಲಿನಿ ಅತಿಶಯ ಕ್ಷೇತ್ರದ ಪೀಠಾಧಿಪತಿ ಶ್ರೀಮದಭಿನವ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ವೇದ, ಉಪನಿಷತ್ತು ಹಾಗೂ ಶಾಸ್ತ್ರಗಳು ಮಾನವನ ಶ್ರೇಯಸ್ಸು ಹಾಗೂ ಕುಟುಂಬದ ಶ್ರೇಯೋಭಿವೃದ್ಧಿಯನ್ನು ಬಯಸುತ್ತದೆ ಎಂದು ಬಸ್ತಿಮಠ ಶ್ರೀ ಜ್ವಾಲಾಮಾಲಿನಿ ಅತಿಶಯ ಕ್ಷೇತ್ರದ ಪೀಠಾಧಿಪತಿ ಶ್ರೀಮದಭಿನವ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಬುಧವಾರ ಅರಿಸಿನ ಗೆರೆಯಲ್ಲಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ದೇವಸ್ಥಾನ ಶಿಖರ ಪ್ರತಿಷ್ಠಾಪನೆ ನೆರವೇರಿಸಿ, ನಂತರ ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, 500 ರಿಂದ 1000 ವರ್ಷಗಳ ಹಿಂದೆ ಶಾಲೆ, ಕಾಲೇಜುಗಳಿರಲಿಲ್ಲ. ಅಂತಹ ಕಾಲದಲ್ಲಿ ನಮ್ಮ ಪೂರ್ವಜರು ಸತ್ಯನಿಷ್ಠೆ, ಧರ್ಮದಲ್ಲಿ ನಡೆಯುತ್ತಿದ್ದರು. ಅಂದು ಶಾಂತಿ, ನೆಮ್ಮದಿ, ಸಮಾಧಾನ ತುಂಬಿ ತುಳುಕುತ್ತಿತ್ತು. ಮಠ ಮಂದಿರಗಳಲ್ಲಿ ಸಿಗುವ ವೇದ ಸಂಸ್ಕೃತ, ಉಪನಿಷತ್ತು ಗಳ ಪಾಠಗಳೇ ನಮಗೆ ಶಿಕ್ಷಣವಾಗಿದ್ದವು. ಅವುಗಳು ನಮ್ಮ ಜ್ಞಾನ ಹೆಚ್ಚಿಸುತ್ತಿದ್ದವು. ದೇವಾಲಯಗಳು ಪೂಜೆ, ಪುನಸ್ಕಾರಗಳಿಂದ ಸಮೃದ್ಧಿ ಹೊಂದಿದರೆ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗುತ್ತವೆ. ದೇವರ ಸಾನಿಧ್ಯಕ್ಕೆ, ಗುರು ಸಾನಿಧ್ಯಕ್ಕೆ ಹೋಗುವವರು ಎಂದಿಗೂ ಬರಿ ಕೈಯಲ್ಲಿ ಹೋಗಬಾರದು. ಪುರಾಣ ಪ್ರವಚನಗಳಿಗೆ ಹೋಗುವವರು ನಿಷ್ಕಲ್ಮಷ ಮನಸ್ಸಿನಿಂದ ಹೋಗಬೇಕು ಎಂದರು.

ಪ್ರಧಾನ ಪುರೋಹಿತರಾದ ವೇದಮೂರ್ತಿ ಶ್ರೀ ಲಕ್ಷ್ಮೀಪ್ರಸಾದ್‌ ಭಟ್ ಮಾತನಾಡಿ, ದೇವಾಲಯ ಪ್ರಾರಂಭೋತ್ಸವ, ವಿಗ್ರಹಗಳು ಪ್ರತಿಷ್ಠಾಪನೆ ಆದರೆ ಸಾಲದು. ದೇವರಿಗೆ ಕಾಲ, ಕಾಲಕ್ಕೆ ದೇವರಿಗೆ ಪೂಜೆ ಪುನಸ್ಕಾರಗಳು ನೆರವೇರಬೇಕು. ಶುದ್ಧಾಚಾರದಿಂದ ಪೂಜಿಸಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ, ಎನ್.ಆರ್.ಪುರ ಯೋಜನಾಧಿಕಾರಿ ಎಂ.ಆರ್.ನಿರಂಜನ್ ಮಾತನಾಡಿ, ದೇವಾಲಯಗಳು ನಿರ್ಮಿಸಿದರೆ ಸಾಲದು. ನಾವುಗಳು ದಿನ ನಿತ್ಯ ದೇವಾಲಯಗಳಿಗೆ ಬರಬೇಕು. ದೇವರಿಗೆ ಶ್ರದ್ಧಾ ಭಕ್ತಿ ಪೂಜೆ ಸಲ್ಲಿಸಬೇಕು. ಆಗ ಮಾತ್ರ ದೇವರು ನಮ್ಮ ಕಷ್ಟಗಳನ್ನು ದೂರ ಮಾಡಬಲ್ಲ. ನಮ್ಮ ನಿಷ್ಕಲ್ಮಷವಾದ ಭಕ್ತಿ ಹಾಗೂ ಸೇವೆ ದೇವರಿಗೆ ಸಲ್ಲಿಸಬೇಕೆಂದರು.

ಧಾರ್ಮಿಕ ಸಭೆ ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಭೀಮನರಿ ಸುಧಾಕರ ವಹಿಸಿದ್ದರು. ಇದೇ ಸಂದರ್ಭದಲ್ಲಿ ದೇವಾಲಯದ ಪ್ರಮುಖ ದಾನಿಗಳನ್ನು ದೇವಸ್ಥಾನ ಸಮಿತಿಯಿಂದ ಗೌರವಿಸಲಾಯಿತು. ಮೂರು ದಿನಗಳ ಪೂಜೆಯನ್ನು ಉಡುಪಿಯ ವೇದಮೂರ್ತಿ ಶ್ರೀ ಲಕ್ಷ್ಮೀಪ್ರಸಾದ್ ಮತ್ತು ಸಂಗಡಿಗರು ನೆರವೇರಿಸಿದರು.

ಈ ಸಂದರ್ಭದಲ್ಲಿ ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾಮಹೇಶ್, ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಎ.ಎಸ್. ಮಂಜುನಾಥ್, ತಾಪಂ ಮಾಜಿ ಸದಸ್ಯ ಟಿ.ಪಿ.ಸುಧಾಕರ್‌ಆಚಾರ್, ಸಮಿತಿ ಕಾರ್ಯದರ್ಶಿ ಎ.ಡಿ.ಉಮೇಶ್, ಎನ್.ಎಂ. ಕಾಂತರಾಜ್, ಎಸ್.ವಿ.ಗಾಯಿತ್ರಿ, ಎಂ.ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Share this article